ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ತಿಮರೋಡಿ (Mahesh Thimarodi) ಬಂಧನಕ್ಕೆ ಗೃಹ ಸಚಿವಾಲಯ ಆದೇಶ ನೀಡಿದೆ ಎಂದು ಹೇಳಲಾಗಿದೆ.
ಸೌಜನ್ಯ ಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಜಾಲತಾಣದಲ್ಲಿ ನಾಲಿಗೆ ಹರಿಬಿಟ್ಟಿದ್ದು, ಇದೀಗ ಅರೆಸ್ಟ್ ಮಾಡುವಂತೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಂಗಳೂರು ಪೊಲೀಸ್ ಕಮಿಷನರ್ ಗೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ.
ವಿಧಾನಸಭೆಯ ಚರ್ಚೆಯ ನಂತರ, ಗೃಹ ಸಚಿವ ಜಿ. ಪರಮೇಶ್ವರ್ ತಕ್ಷಣವೇ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಮಂಗಳೂರು ಪೊಲೀಸ್ ಕಮಿಷನರ್‌ಗೆ ಆದೇಶ ನೀಡಿರುವ ಅವರು, ಮಹೇಶ್ ತಿಮರೋಡಿಯನ್ನು ಬಂಧಿಸಿ, ಕಾನೂನು ರೀತಿಯಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ.
'ತಿಮ್ಮರೋಡಿ ವಿರುದ್ಧ ಹತ್ತಾರು ಕೇಸ್‌ಗಳಿವೆ. ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು' ಎಂದು ಪರಮೇಶ್ವರ್ ಸದನದಲ್ಲಿ ತಿಳಿಸಿದರು. ಈ ಆದೇಶದಿಂದ ತನಿಖೆಗೆ ವೇಗ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಎಸ್‌ಐಟಿ ತಂಡವು ಈಗಾಗಲೇ ಧರ್ಮಸ್ಥಳ ಶವ ಹೂತ ಪ್ರಕರಣದ ತನಿಖೆಯಲ್ಲಿ ತೊಡಗಿದ್ದು, ತಿಮರೋಡಿಯ ಆರೋಪಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ ಎಂದು ಹೇಳಲಾಗಿದೆ.
ಸಿದ್ದರಾಮಯ್ಯ ಅವರ ವಿರುದ್ಧ 28 ಕೊಲೆ ಆರೋಪ
ಮಹೇಶ್ ಶೆಟ್ಟಿ ತಿಮರೋಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ '28 ಕೊಲೆ ಮಾಡಿದ್ದಾರೆ' ಎಂದು ಗಂಭೀರ ಆರೋಪ ಮಾಡಿದ್ದರು. 2023ರ ಈ ಆಡಿಯೋ ಕ್ಲಿಪ್ ಇದೀಗ ವೈರಲ್ ಆಗುತ್ತಿದ್ದು, ಸಿಎಂ ಕೊಲೆ ಮಾಡಿದ್ದಾರೆ ಎಂದು ತಿಮರೋಡಿ ಹೇಳಿಕೆ ನೀಡಿದ್ದ ವಿಚಾರ ವಿಧಾನಸಭೆಯಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದೆ.
ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಆರೋಪ ಮಾಡಲು ಅಸ್ತ್ರವಾಗಿದ್ದು, ಈ ಘಟನೆಯು ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಈ ಬೆನ್ನಲ್ಲೇ ಬಂಧನಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಸೂಚನೆ ನೀಡಿದ್ದಾರೆ. ಇದರ ಮುಂದುವರೆದ ಭಾಗವಾಗಿ ಧರ್ಮಸ್ಥಳ ಕೇಸ್ನಲ್ಲೂ ಭಾರೀ ಟ್ವಿಸ್ಟ್ ಸಿಗುವ ಸಾಧ್ಯತೆ ದಟ್ಟವಾಗಿದೆ. ಮಂಗಳೂರು ಪೊಲೀಸ್ ಕಮಿಷನರ್‌ಗೆ ಈ ಕುರಿತು ಆದೇಶ ನೀಡಿರುವ ಪರಮೇಶ್ವರ್, ಕಾನೂನು ರೀತಿಯಲ್ಲಿ ತಕ್ಕ ಕ್ರಮ ಕೈಗೊಳ್ಳುವಂತೆ ಆದೇಶ ಮಾಡಿದ್ದಾರೆ.
ಸಚಿವರು ಹೇಳಿದ್ದೇನು?
ಇನ್ನು ಇದೇ ವಿಚಾರವಾಗಿ ಸದನದಲ್ಲಿ ಮಾಹಿತಿ ನೀಡಿದ ಗೃಹ ಸಚಿವ ಜಿ ಪರಮೇಶ್ವರ್, 'ನಾವೇನು ಸುಮ್ನೆ ಕೂತಿಲ್ಲ.. ಮೌನವಾಗೇನೂ ಇಲ್ಲ.. ಸೂಕ್ತ ಉತ್ತರ ನೀಡುತ್ತೇವೆ.. ನಾನು ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೇನೆ. ಸರ್ಕಾರವೇನೂ ಅಸಹಾಯಕವಾಗಿ ಕುಳಿತಿಲ್ಲ ಎಂದರು.
ಅಲ್ಲದೆ ಇಂತಹ ವ್ಯಕ್ತಿಗಳನ್ನು ಹೇಗೆ ನಿರ್ವಹಿಸಬೇಕು ಎಂಬುದು ನಮಗೂ ತಿಳಿದಿದೆ. ಆ ವ್ಯಕ್ತಿಯನ್ನು ದೊಡ್ಡವನನ್ನಾಗಿ ಮಾಡುವುದು ಬೇಡ.. ಆ ವ್ಯಕ್ತಿ ವಿರುದ್ಧ ಹತ್ತಾರು ಕೇಸ್ ಗಳಿವೆ. ಇಂತಹ ವ್ಯಕ್ತಿಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ಕಾನೂನುಗಳನ್ನು ಮಾಡಿರುವುದು ಇದಕ್ಕಾಗಿಯೇ.. ಕಾನೂನು ಕ್ರಮ ಜರುಗಿಸುತ್ತೇವೆ ಎಂದರು.