ಡಾ ಡಿ ವೀರೇಂದ್ರ ಹೆಗ್ಗಡೆ 
ರಾಜ್ಯ

ವೀರೇಂದ್ರ ಹೆಗ್ಗಡೆ ಸಂದರ್ಶನ: ಧರ್ಮಸ್ಥಳದಲ್ಲಿ ಸರಣಿ ಕೊಲೆ ಆರೋಪ 'ಆಧಾರ ರಹಿತ'; SIT ಮಾಡಿದ್ದು ಒಳ್ಳೆಯದು..

"ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಆರೋಪಗಳು. ಇದರಿಂದ ನನಗೆ ನಿಜವಾಗಿಯೂ ನೋವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು" ಎಂದು ಹೇಳಿದ್ದಾರೆ.

ಬೆಂಗಳೂರು: ಸೌಜನ್ಯ ಕೊಲೆ ಪ್ರಕರಣ ಮತ್ತು ಎರಡು ದಶಕಗಳ ಅವಧಿಯಲ್ಲಿ ಧರ್ಮಸ್ಥಳದಾದ್ಯಂತ ನಡೆದಿರುವ ಸರಣಿ ಕೊಲೆಗಳು, ಅತ್ಯಾಚಾರಗಳು ಮತ್ತು ಸಮಾಧಿಗಳ ಕುರಿತ ಆರೋಪಗಳು "ಆಧಾರ ರಹಿತ ಹಾಗೂ ಸುಳ್ಳು" ಎಂದು ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ತಳ್ಳಿಹಾಕಿದ್ದಾರೆ. ಆದರೆ ಸತ್ಯ ಬಹಿರಂಗಪಡಿಸಲು ಎಸ್‌ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.

ಈ ಆರೋಪಗಳ ತನಿಖೆಗಾಗಿ, ಕರ್ನಾಟಕ ಸರ್ಕಾರ ವಿಶೇಷ ತನಿಖಾ ತಂಡವನ್ನು(ಎಸ್‌ಐಟಿ) ರಚಿಸಿದೆ. ಇದು ಅಂತಿಮವಾಗಿ ಮಾನವ ಅವಶೇಷಗಳನ್ನು ಪತ್ತೆಹಚ್ಚಲು ಹಲವಾರು ಸ್ಥಳಗಳಲ್ಲಿ ಉತ್ಖನನ ನಡೆಸಿದೆ.

ಅಕ್ಟೋಬರ್ 9, 2012 ರಂದು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ(17) ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ಬಾಲಕಿಯ ನ್ಯಾಯಕ್ಕಾಗಿ ಈಗಲೂ ಪ್ರತಿಭಟನೆಗಳು ನಡೆಯುತ್ತಿವೆ.

ಧರ್ಮಸ್ಥಳದಲ್ಲಿ ಸರಣಿ ಕೊಲೆ ಆರೋಪದ ಬಗ್ಗೆ ಎಸ್ಐಟಿ ತನಿಖೆ ಆರಂಭಿಸಿದ ನಂತರ ಮೊದಲ ಬಾರಿ ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ "ಈ ಆರೋಪಗಳು ಆಧಾರರಹಿತ ಮತ್ತು ಸುಳ್ಳು ಆರೋಪಗಳು. ಇದರಿಂದ ನನಗೆ ನಿಜವಾಗಿಯೂ ನೋವಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವಿಷಯಗಳನ್ನು ಬಿಂಬಿಸುವ ರೀತಿ ನೈತಿಕವಾಗಿ ತಪ್ಪು" ಎಂದು ಹೇಳಿದ್ದಾರೆ.

ಗೃಹ ಸಚಿವ ಜಿ ಪರಮೇಶ್ವರ ಅವರು ವಿಧಾನಸಭೆಯಲ್ಲಿ ಎಸ್‌ಐಟಿ ಸಮಸ್ಯೆಯ ಆಳಕ್ಕೆ ಹೋಗುತ್ತದೆ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಹೆಗ್ಗಡೆ, "ನಾವು ಅದೇ ದಿನ ಎಸ್‌ಐಟಿಯನ್ನು ಸ್ವಾಗತಿಸಿದ್ದೇವೆ. ರಾಜ್ಯ ಸರ್ಕಾರ ಎಸ್ ಐಟಿ ರಚಿಸಿರುವುದು ಒಳ್ಳೆಯದು ಮತ್ತು ಸತ್ಯ ಒಮ್ಮೆ ಹೊರಬರಬೇಕು. ಆರೋಪ ಕೇಳಿಬಂದಾಗ ತನಿಖೆ ಮಾಡುವುದು ಒಳ್ಳೆಯದು. ಇಲ್ಲದಿದ್ದರೆ ಅವು ಹಾಗೆಯೇ ಉಳಿಯುತ್ತವೆ" ಎಂದಿದ್ದಾರೆ.

"ಈ ತನಿಖೆ ಬೇಗನೆ ಮುಕ್ತಾಯಗೊಳ್ಳಬೇಕು ಮತ್ತು ಸಮಸ್ಯೆಯನ್ನು ಪರಿಹರಿಸಬೇಕೆಂದು ನಾವು ಬಯಸುತ್ತೇವೆ. ನಾವು ಎಲ್ಲದಕ್ಕೂ ಮುಕ್ತರಾಗಿದ್ದೇವೆ. ಎಸ್‌ಐಟಿ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕು" ಎಂದು ಹೆಗ್ಗಡೆ ಹೇಳಿದರು.

ಧರ್ಮಸ್ಥಳ ಮತ್ತು ಅದರ ಟ್ರಸ್ಟ್ ಅನ್ನು ಗುರಿಯಾಗಿಸಿಕೊಂಡು 14 ವರ್ಷಗಳಿಗೂ ಹೆಚ್ಚು ಕಾಲದಿಂದ "ಸಂಘಟಿತ ಅಭಿಯಾನ" ನಡೆಸಲಾಗುತ್ತಿದೆ ಎಂದು ಹೆಗ್ಗಡೆ ಆರೋಪಿಸಿದರು.

"ನಾವು ಮಾಡುತ್ತಿರುವ ಒಳ್ಳೆಯ ಕೆಲಸಗಳನ್ನು ಸಹಿಸಿಕೊಳ್ಳಲಾಗದ ಕೆಲವು ಶಕ್ತಿಗಳು ಸುಳ್ಳು ಪ್ರಚಾರ ನಡೆಸುತ್ತಿವೆ. ಆದರೆ ನಾವು ವಿಚಲಿತರಾಗುವುದಿಲ್ಲ" ಎಂದು ಅವರು ಹೇಳಿದರು.

ಧರ್ಮಸ್ಥಳದಲ್ಲಿ ಶವಗಳನ್ನು ಸಮಾಧಿ ಮಾಡಿರುವುದಾಗಿ ಮುಖವಾಡ ಧರಿಸಿದ ವ್ಯಕ್ತಿಯೊಬ್ಬ ಹೇಳಿಕೊಳ್ಳುವ ಇತ್ತೀಚಿನ ವಿಡಿಯೋಗಳನ್ನು ಉಲ್ಲೇಖಿಸಿದ ಅವರು, "ಇದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಸತ್ತರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ಜನಪ್ರಿಯ ನಂಬಿಕೆ ಇದೆ. ಸಾವು ಸಂಭವಿಸಿದಾಗಲೆಲ್ಲಾ ನಾವು ಪಂಚಾಯತ್‌ಗೆ ತಿಳಿಸುತ್ತಿದ್ದೆವು ಮತ್ತು ಅವರು ಕಾನೂನು ಪ್ರಕಾರವೇ ಶವವನ್ನು ಹೂಳುತ್ತಾರೆ" ಎಂದರು.

ಸಾಮಾಜಿಕ ಮಾಧ್ಯಮವು ಯುವ ಮನಸ್ಸುಗಳನ್ನು ಕಲುಷಿತಗೊಳಿಸಿದೆ ಎಂದು ಧರ್ಮಾಧಿಕಾರಿ ತೀವ್ರ ಕಳವಳ ವ್ಯಕ್ತಪಡಿಸಿದರು.

"ಈ ಪ್ರಕರಣವನ್ನು ಬಿಂಬಿಸಿದ ರೀತಿ ನಮಗೆ ಆಘಾತ ಮತ್ತು ಆಶ್ಚರ್ಯವನ್ನುಂಟು ಮಾಡಿದೆ. ಸಾಮಾಜಿಕ ಮಾಧ್ಯಮವು ಅತ್ಯಂತ ಶಕ್ತಿಶಾಲಿ ಮಾಧ್ಯಮವಾಗಿದೆ ಮತ್ತು ನಮ್ಮ ಅನೇಕ ಹಿತೈಷಿಗಳು ನಮ್ಮ ಒಳ್ಳೆಯ ಕೆಲಸವನ್ನು ಪ್ರಚಾರ ಮಾಡಲು ನಾವು ಸಾಮಾಜಿಕ ಮಾಧ್ಯಮವನ್ನು ಬಳಸಿಲ್ಲ ಎಂದು ಹೇಳುತ್ತಾರೆ. ನಾವು ವಿವಿಧ ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲಾ ಹಳ್ಳಿಗಳನ್ನು ಮತ್ತು 55 ಲಕ್ಷ ಕುಟುಂಬಗಳನ್ನು ತಲುಪಿದ್ದೇವೆ" ಎಂದರು.

ಸೌಜನ್ಯ ಕೊಲೆ ಪ್ರಕರಣದಲ್ಲಿ ನ್ಯಾಯಕ್ಕಾಗಿ ಮತ್ತೆ ಕೇಳಿಬಂದ ಕೂಗಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, "ಅಂತಹ ಘಟನೆ ನಡೆದಿದೆ ಎಂದು ನಮಗೆ ತಿಳಿದಾಗ ನಾವು ಅದೇ ದಿನ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ನಮ್ಮ ಕುಟುಂಬದ ವಿರುದ್ಧದ ಆರೋಪಗಳು ಆಧಾರರಹಿತ. ನಮ್ಮ ಕುಟುಂಬ ಸದಸ್ಯರು ಶಿಕ್ಷಣಕ್ಕಾಗಿ ವಿದೇಶದಲ್ಲಿ ಇದ್ದರು ಮತ್ತು ಈ ಸಂಬಂಧ ನಾವು ದಾಖಲೆಗಳನ್ನು ಸಲ್ಲಿಸಿದ್ದೇವೆ" ಎಂದರು.

ಸಿಬಿಐ ತನಿಖೆಗೂ ನಾವು ಎಲ್ಲಾ ರೀತಿಯ ಸಹಕಾರ ನೀಡಿದ್ದೇವೆ ಮತ್ತು ಎಲ್ಲಾ ರೀತಿಯ ತನಿಖೆಯನ್ನು ಸ್ವಾಗತಿಸಿದ್ದೇವೆ" ಎಂದು ಹೆಗ್ಗಡೆ ಹೇಳಿದರು.

ಆಸ್ತಿ ದುರುಪಯೋಗದ ಆರೋಪಗಳನ್ನು ತಳ್ಳಿಹಾಕಿದ ಹೆಗ್ಗಡೆ, ನಮ್ಮ ಆಸ್ತಿ ಎಂಬುದೇ ಇಲ್ಲ. ಕುಟುಂಬವು ಬಹಳ ಕಡಿಮೆ ಆಸ್ತಿಯನ್ನು ಹೊಂದಿದೆ ಮತ್ತು ಎಲ್ಲಾ ಆಸ್ತಿಗಳು ದಾಖಲೆಗಳೊಂದಿಗೆ ಟ್ರಸ್ಟ್‌ನ ಒಡೆತನದಲ್ಲಿವೆ ಎಂದರು.

ಆಸ್ತಿಗಳ ಸ್ವಾಧೀನಕ್ಕೆ ದಾಖಲೆ ಪುರಾವೆಗಳಿವೆ. ಧರ್ಮಾಧಿಕಾರಿ(ದೇವಾಲಯದ ಪಾಲಕ) ಪ್ರಕಾರ ಟ್ರಸ್ಟ್ ಅನ್ನು ಕುಟುಂಬ ಸದಸ್ಯರು ಪಾರದರ್ಶಕ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. "ನಾವು ನಾಲ್ವರು ಸಹೋದರರು ಮತ್ತು ಒಬ್ಬ ಸಹೋದರ ಬೆಂಗಳೂರಿನಲ್ಲಿ ಶಿಕ್ಷಣವನ್ನು ನೋಡಿಕೊಳ್ಳುತ್ತಾರೆ, ಇನ್ನೊಬ್ಬ ಸಹೋದರ ಸಾಮಾಜಿಕ ಕಾರ್ಯದ ಜೊತೆಗೆ ಇಲ್ಲಿ ದೇವಾಲಯವನ್ನು ನೋಡಿಕೊಳ್ಳುತ್ತಾರೆ ಮತ್ತು ನನಗೆ ಒಬ್ಬ ಸಹೋದರಿ ಇದ್ದಾಳೆ, ಅವರ ಪತಿ ಧಾರವಾಡದ ಎಸ್‌ಡಿಎಂ ವಿಶ್ವವಿದ್ಯಾಲಯದ ಕುಲಪತಿ. ಎಲ್ಲಾ ಶಿಕ್ಷಣ ಸಂಸ್ಥೆಗಳು ಟ್ರಸ್ಟ್ ಹೆಸರಿನಲ್ಲಿವೆ" ಎಂದು ಅವರು ಹೇಳಿದರು.

ಜೈನ ಕುಟುಂಬವೊಂದು ಹಿಂದೂ ದೇವಾಲಯವನ್ನು ನಿರ್ವಹಿಸುತ್ತಿದೆ ಎಂಬ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಹೆಗ್ಗಡೆ, "ಈ ಆರೋಪದಲ್ಲಿ ಸತ್ಯವಿದೆ ಎಂದು ನಾನು ಭಾವಿಸುವುದಿಲ್ಲ. ಎಲ್ಲಾ ಆಚರಣೆಗಳನ್ನು ಅನುಸರಿಸುವುದರಿಂದ ಜೈನರು ನಡೆಸುವ ಹಲವು ದೇವಾಲಯಗಳಿವೆ" ಎಂದು ಅವರು ತಿಳಿಸಿದರು.

ಧರ್ಮಸ್ಥಳದ ವಿರುದ್ಧ ಪಿತೂರಿಯ ಬಗ್ಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿಕೆಯನ್ನು ಹೆಗ್ಗಡೆ ಅವರು ಸ್ವಾಗತಿಸಿದರು.

ಇನ್ನು ಧರ್ಮಸ್ಥಳದ ಮೇಲಿನ ನಂಬಿಕೆಗೆ ಯಾವುದೇ ಧಕ್ಕೆಯಾಗುವುದಿಲ್ಲ ಎಂದು ಪುನರುಚ್ಚರಿಸಿದ ಹೆಗ್ಗಡೆ, "ನಾವು ಪೂಜೆ, ಆಚರಣೆಗಳನ್ನು ಎಂದಿನಂತೆ ನಡೆಸುತ್ತೇವೆ ಮತ್ತು ಜನಸಂದಣಿ ಅಥವಾ ಪದ್ಧತಿಗಳಲ್ಲಿ ಯಾವುದೇ ಬದಲಾವಣೆಯಿಲ್ಲ" ಎಂದು ಅವರು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Dasara Holidays extended: ಸರ್ಕಾರಿ, ಅನುದಾನಿತ ಶಾಲೆಗಳಿಗೆ ಅಕ್ಟೋಬರ್ 18ರವರೆಗೆ ರಜೆ; ಜಾತಿ ಗಣತಿ ಅವಧಿ ವಿಸ್ತರಣೆ!

ಡಿಕೆಶಿಯ 'ಸುರಂಗದ ಹುಚ್ಚಿ'ನಿಂದ ಲಾಲ್‌ಬಾಗ್ ಸಸ್ಯೋದ್ಯಾನಕ್ಕೆ ಅಪಾಯ- ಆರ್. ಅಶೋಕ್

ಕಳ್ಳಸಾಗಣೆದಾರರನ್ನು ಮಣಿಪುರದತ್ತ ಸೆಳೆಯುತ್ತಿರುವ ಮಾದಕ ದ್ರವ್ಯ ವ್ಯಾಪಾರ (ಜಾಗತಿಕ ಜಗಲಿ)

ನದಿಗೆ ಬಟ್ಟೆ ಹೊಗೆಯಲು ಹೋಗಿದ್ದ ಮಹಿಳೆಯನ್ನು ಎಳೆದೊಯ್ದ ಮೊಸಳೆ: ಭಯಭೀತರಾದ ಜನ, Video!

4 ಲಕ್ಷ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅನುಮತಿ ನೀಡಿದವರಿಂದ ಪಾಠದ ಅಗತ್ಯವಿಲ್ಲ: ವಿಶ್ವಸಂಸ್ಥೆಯಲ್ಲಿ ಪಾಕ್‌ ವಿರುದ್ಧ ಗುಡುಗಿದ ಭಾರತ

SCROLL FOR NEXT