ಬೆಂಗಳೂರು: ನಗರದಾದ್ಯಂತ ರಸ್ತೆ ದುರಸ್ತಿ ಕಾರ್ಯ ವಿಳಂಬವಾಗುತ್ತಿದ್ದು, ಇದರಿಂದ ಹೋಟೆಲ್, ಬಾರ್ ಮತ್ತು ರೆಸ್ಟೋರೆಂಟ್‌ಗಳ ಆದಾಯ ಶೇ. 50 ರಷ್ಟು ಕಡಿಮೆಯಾಗಿದೆ ಎಂದು ಬೆಂಗಳೂರು ಹೋಟೆಲ್‌ಗಳ ಸಂಘವು ರಾಜ್ಯ ಸರ್ಕಾರಕ್ಕೆ ಬರೆದು ಅಸಮಾಧಾನ ವ್ಯಕ್ತಪಡಿಸಿದೆ.
ನಗರದ ಹೋಟೆಲ್ ಮಾಲೀಕರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದು, ಆದಷ್ಟು ಬೇಗ ಕಾಮಗಾರಿ ಕಾರ್ಯಗಳು ಪೂರ್ಣಗೊಳಿಸುವಂತೆ ಒತ್ತಾಯಿಸಿದ್ದಾರೆ.
ಸೀತಾ ಸರ್ಕಲ್ ರಸ್ತೆ, ಡಾ. ರಾಜ್‌ಕುಮಾರ್ ರಸ್ತೆ, ಮಸೀದಿ ರಸ್ತೆ, ಪ್ಲಾಟ್‌ಫಾರ್ಮ್ ರಸ್ತೆ (ಶೇಷಾದ್ರಿಪುರಂ) ಮತ್ತು ಮಿಷನ್ ರಸ್ತೆಯ ಕಾಮಗಾರಿಯನ್ನು ಉಲ್ಲೇಖಿಸಿರುವ ಹೋಟೆಲ್ ಗಳ ಮಾಲೀಕರು, ಗಡುವಿನೊಳಗೆ ಕೆಲಸ ಪೂರ್ಣಗೊಳ್ಳದಿದ್ದರೆ ಆಸ್ತಿ ತೆರಿಗೆ, ಕಸ ತೆರಿಗೆ, ವಿದ್ಯುತ್ ಸ್ಥಿರ ಶುಲ್ಕಗಳು, ಅಬಕಾರಿ ಶುಲ್ಕ ಮತ್ತು ಇತರ ಪರವಾನಗಿ ಶುಲ್ಕವನ್ನು ಕನಿಷ್ಠ ಶೇ. 50 ರಷ್ಟು ಕಡಿಮೆ ಮಾಡಿ,. ವ್ಯಾಪಾರಿಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್ ಅವರು ಮಾತನಾಡಿ, ಯಾವುದೇ ರಸ್ತೆ ಕಾಮಗಾರಿಯೂ ಗಡುವಿಗೂ ಮುನ್ನ ಪೂರ್ಣಗೊಳ್ಳುತ್ತಿಲ್ಲ. ಮೂರು ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸವು ಒಂದು ವರ್ಷಕ್ಕಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. "ಇದು ಹೋಟೆಲ್, ಬೇಕರಿ, ಸಿಹಿತಿಂಡಿ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ಮಾತ್ರವಲ್ಲದೆ ಇತರೆ ವ್ಯವಹಾರ ನಡೆಸುತ್ತಿರುವವರ ಮೇಲೂ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.
ನಮ್ಮ ವ್ಯವಹಾರದಲ್ಲಿ ತೀವ್ರ ಕುಸಿತ ಕಂಡು ಬಂದಿದೆ, ಇದು ನಮ್ಮ ಆದಾಯವನ್ನು ಸುಮಾರು ಶೇಕಡಾ 50 ರಷ್ಟು ಕಡಿಮೆ ಮಾಡಿದೆ. ಇದಲ್ಲದೆ, ಈ ರಸ್ತೆಗಳಲ್ಲಿ ನಡೆಯುವವರು, ವಿಶೇಷವಾಗಿ ಹಿರಿಯ ನಾಗರಿಕರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಉಪಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ವಿನಂತಿಸಿದ್ದೇವೆಂದು ತಿಳಿಸಿದ್ದಾರೆ.