ದಕ್ಷಿಣ ಕನ್ನಡ: ಧರ್ಮಸ್ಥಳ ಪ್ರಕರಣದಲ್ಲಿ ಎಸ್ಐಟಿ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದು, ಮಾಸ್ಕ್ ಮ್ಯಾನ್ ಚಿನ್ನಯ್ಯಗೆ ಪೂರ್ವಪರ ವಿಚಾರಣೆ ಬಳಿಕ ಇದೀಗ ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಮಹಜರು ಕಾರ್ಯ ನಡೆಸಿದ್ದಾರೆ.
ಧರ್ಮಸ್ಥಳದಲ್ಲಿ (Dharmasthala mass burials case) ಮಾಸ್ಕ್‌ಮ್ಯಾನ್ ಚಿನ್ನಯ್ಯ ಬಿಟ್ಟ ಬುರುಡೆ ಕೇಸ್‌ನ ಬಂಡವಾಳ ಬಗೆದಷ್ಟು ಬಯಲಾಗುತ್ತಿದ್ದು, ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಲು ಹಿಂದೂಗಳ ನಂಬಿಕೆ ಘಾಸಿಗೊಳಿಸಲು ಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.
ಅರೆಸ್ಟ್ ಆಗಿರುವ ಚಿನ್ನಯ್ಯ ನೀಡಿದ ಮಾಹಿತಿ ಹಿನ್ನಲೆಯಲ್ಲಿ ಮಹೇಶ್ ಶೆಟ್ಟಿ ತಿಮರೋಡಿ (mahesh thimarodi) ಮನೆ ಮೇಲೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಹಲವು ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ತಿಮರೋಡಿಯ ಪತ್ನಿ ಮತ್ತು ಮಕ್ಕಳ ಮೊಬೈಲ್ ಫೋನ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಇಷ್ಟೇ ಅಲ್ಲ ಮಹೇಶ್ ಶೆಟ್ಟಿ ತಿಮರೋಡಿ ಮನೆಯಿಂದ ಮೂರು ತಲವಾರು ವಶಕ್ಕೆ ಪಡೆಯಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ನಿನ್ನೆ ತಡ ರಾತ್ರಿವರೆಗೂ ಅಧಿಕಾರಿಗಳು ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಶೋಧ ನಡೆಸಿದ್ದು, ಎಲ್ಲಾ ದಾಖಲೆಗಳನ್ನು ವಶಕ್ಕೆ ಪಡೆದು ರಿಪೋರ್ಟ್ ತಯಾರಿಸಿದ್ದಾರೆ. ಮಹೇಶ್ ಶೆಟ್ಟಿ ತಿಮರೋಡಿ ಮನೆಯಲ್ಲಿ ಪತ್ತೆಯಾದ ಮೂರು ತಲವಾರನ್ನು ಎಸ್ಐಟಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಮಹೇಶ್ ಶೆಟ್ಟಿ ತಿಮರೋಡಿ ಮನೆ ಮೇಲೆ ದಾಳಿ ಮಾಡುವ ಮೊದಲೇ ಮಹೇಶ್ ಶೆಟ್ಟಿ ಮನೆಯಿಂದ ತೆರಳಿದ್ದರು. ದಾಳಿ ವೇಳೆ ತಿಮರೋಡಿ ಮನೆಯಲ್ಲಿ ಇರಲಿಲ್ಲ. ಇತ್ತ ಮನೆ, ತೋಟ ಸೇರಿದಂತೆ ಎಲ್ಲಾ ಕಡೆ ಪರಿಶೋಧನೆ ನಡೆಸಿದ ಎಸ್ಐಟಿ ಅಧಿಕಾರಿಗಳು ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದಾರೆ. ಮಹೇಶ್ ಶೆಟ್ಟಿ ಪತ್ನಿ, ಮಗ ಹಾಗೂ ಮಗಳ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ.
ಚಿನ್ನಯ್ಯನ 2 ಮೊಬೈಲ್ ಪತ್ತೆ
ಮಹೇಶ್ ಶೆಟ್ಟಿ ಮನೆಯಲ್ಲಿ ಉಳಿದುಕೊಂಡಿದ್ದ ಚಿನ್ನಯ ತನ್ನ ಎರಡೂ ಮೊಬೈಲ್ ಅಲ್ಲೆ ಇಟ್ಟಿದ್ದ. ವಿಚಾರಣೆ ವೇಳೆ ತನ್ನ ಬಳಿ ಮೊಬೈಲ್ ಇಲ್ಲ ಎಂದಿದ್ದ. ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧ ವೇಳೆ ಚಿನ್ನಯ್ಯನ ಎರಡು ಮೊಬೈಲ್ ಪತ್ತೆಯಾಗಿವೆ.
ಒಂದು ಕೀಪ್ಯಾಡ್ ಮೊಬೈಲ್ ಮತ್ತೊಂದು ಆ್ಯಂಡ್ರಾಯ್ಡ್ ಮೊಬೈಲ್. ಆರಂಭದಲ್ಲಿ ಕೀ ಪ್ಯಾಡ್ ಮೊಬೈಲ್ ಬಳಸುತ್ತಿದ್ದ ಚಿನ್ನಯ್ಯ, ಬಳಿಕ ಆ್ಯಂಡ್ರಾಯ್ಡ್ ಮೊಬೈಲ್ ಫೋನ್ ಬಳಸಲು ಆರಂಭಿಸಿದ್ದ. ಕಳೆದ ಕೆಲ ತಿಂಗಳುಗಳಿಂದ ಆ್ಯಂಡ್ರಾಯ್ಡ್ ಫೋನ್ ಬಳಕೆ ಮಾಡುತ್ತಿದ್ದ. ಇದರ ಜೊತೆಗೆ ಚಿನ್ನಯ್ಯನ ಲಗೇಜ್ ಬ್ಯಾಗ್, ಬೆನ್ನ ಹಿಂದೆ ಹಾಕುವ ಬ್ಯಾಗ್, ಬಟ್ಟೆ ಸೇರಿದಂತೆ ಕೆಲ ದಾಖಲೆಯನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಚಿನ್ನಯ್ಯ ಬಳಸುತ್ತಿದ್ದ ಆಂಡ್ರಾಯ್ಡ್ ಮೊಬೈಲ್, ಸಿಸಿಕ್ಯಾಮರಾ ಹಾರ್ಡ್‌ಡಿಸ್ಕ್, ಮಹತ್ವದ ದಾಖಲೆಗಳು, ಚಿನ್ನಯ್ಯನ ಬಟ್ಟೆ ಬ್ಯಾಗ್ ವಶಪಡಿಸಿಕೊಳ್ಳಲಾಗಿದೆ. ಮಾಸ್ಕ್‌ಮ್ಯಾನ್‌ನ ಐಡಿಕಾರ್ಡ್ ಸೇರಿ ಎಲ್ಲ ವಸ್ತುಗಳ ವಿವರ ಬರೆದಿರೋ ಅಧಿಕಾರಿಗಳು, FSLಗೆ ಕಳುಹಿಸಲಿದ್ದಾರೆ.