ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನಲ್ಲಿ ದಿನೇ ದಿನೇ ಚಳಿ ಹೆಚ್ಚಾಗುತ್ತಿದ್ದು, ಚಳಿಗೆ ಬೆಂಗಳೂರು ಮಂದಿ ತತ್ತರಿಸಿ ಹೋಗಿದ್ದಾರೆ. ಚಳಿಯಲ್ಲೂ ಬೆಂಗಳೂರು ದಾಖಲೆ ಬರೆದಿದೆ.
ಹೌದು.. ಬೆಂಗಳೂರಿನಲ್ಲಿ ಕನಿಷ್ಛ ತಾಪಮಾನ 10ಡಿಗ್ರಿಗೆ ಇಳಿಕೆಯಾಗಿದ್ದು, 9 ವರ್ಷಗಳಲ್ಲೇ ಡಿಸೆಂಬರ್ ನಲ್ಲಿ ಅತ್ಯಂತ ಕನಿಷ್ಠ ತಾಪಮಾನ ದಾಖಲಾಗಿದೆ. ಇಂದು ಬೆಂಗಳೂರಿನಲ್ಲಿ ತಾಪಮಾನ 10ಕ್ಕೆ ಕುಸಿದಿದ್ದು, ಇದು ಕಳೆದ 9 ವರ್ಷಗಳಲ್ಲೇ ನಗರದಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ.
ಬೆಂಗಳೂರು ದಕ್ಷಿಣದಲ್ಲಿ 10.1 ಡಿಗ್ರಿ ತಾಪಮಾನ ದಾಖಲಾಗಿದ್ದು, ಬೆಂಗಳೂರು ಗ್ರಾಮಾಂತರದಲ್ಲಿ 10.4 ಡಿಗ್ರಿ ತಾಪಮಾನ ದಾಖಲಾಗಿದೆ. ಅಂತೆಯೇ ಬೆಂಗಳೂರು ನಗರದಲ್ಲಿ 10.8 ಡಿಗ್ರಿ ತಾಪಮಾನ ದಾಖಲಾಗಿದೆ.
ಅಂತೆಯೇ ಮುಂಬರುವ ವಾರದಲ್ಲಿ ರಾತ್ರಿ ತಾಪಮಾನದಲ್ಲಿ ತೀವ್ರ ಇಳಿಕೆಯಾಗುವ ಮುನ್ಸೂಚನೆ ನೀಡಿರುವುದರಿಂದ ನಗರವು ತೀವ್ರ ಚಳಿಗಾಲಕ್ಕೆ ಸಜ್ಜಾಗುತ್ತಿದೆ.
ಶುಕ್ರವಾರ ಬೆಂಗಳೂರಿನಲ್ಲಿ ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆಯಾಗಿದ್ದು, ಇದು 2016 ರ ನಂತರ ಡಿಸೆಂಬರ್‌ನಲ್ಲಿ ದಾಖಲಾದ ಅತ್ಯಂತ ಕನಿಷ್ಠ ತಾಪಮಾನವಾಗಿದೆ. ಚಳಿಯೊಂದಿಗೆ ಮಂಜು ಕವಿದ ಬೆಳಗಿನ ಸಮಯ, ಒಣ ಗಾಳಿ ಮತ್ತು ಸ್ಪಷ್ಟ ಆಕಾಶ ಇರುತ್ತದೆ. ಇವು ದಕ್ಷಿಣ ಭಾರತದಲ್ಲಿ ಚಳಿಗಾಲವನ್ನು ತೀವ್ರಗೊಳಿಸುವ ಪರಿಸ್ಥಿತಿಗಳಾಗಿವೆ ಎಂದು ಹವಾಮಾನ ಇಲಾಖೆ ಹೇಳಿದೆ.
ಕಳೆದ ವಾರದಲ್ಲಿ, ಬೆಂಗಳೂರಿನ ಕನಿಷ್ಠ ತಾಪಮಾನವು 16 ° C ಸುತ್ತಲೂ ಇದ್ದು, ಈಗಾಗಲೇ ನಿವಾಸಿಗಳಿಗೆ ಋತುವಿನ ಚಳಿಯ ರುಚಿಯನ್ನು ನೀಡಿದೆ. ಆದರೆ ಮುಂಬರುವ ವಾರದಲ್ಲಿ ತಾಪಮಾನ ಮತ್ತಷ್ಟು ಕುಸಿತವಾಗುವ ಸಾಧ್ಯೆತೆ ಇದ್ದು, ತಾಪಮಾನ 12 ° C ಮತ್ತು 14 ° C ನಡುವೆ ಏರಿಳಿತಗೊಳ್ಳುವ ಸಾಧ್ಯತೆಯಿದೆ ಎಂದು IMD ಅಧಿಕಾರಿಗಳು ಹೇಳಿದ್ದಾರೆ. ದೀರ್ಘಾವಧಿಯ ಡಿಸೆಂಬರ್ ಸರಾಸರಿ 16.4 ° C ಗಿಂತ ಕಡಿಮೆ, ಇದು ಸಾಮಾನ್ಯಕ್ಕಿಂತ ಬಲವಾದ ಚಳಿಗಾಲವನ್ನು ಸೂಚಿಸುತ್ತದೆ.
9 ವರ್ಷಗಳಲ್ಲಿ ಕನಿಷ್ಠ ತಾಪಮಾನ
ಇನ್ನು ಬೆಂಗಳೂರು ಒಂಬತ್ತು ವರ್ಷಗಳ ಹಿಂದೆ ಅಂದರೆ ಡಿಸೆಂಬರ್ 11, 2016 ರಂದು ದಾಖಲಾದ 12°C ಗಿಂತ ಕಡಿಮೆ ತಾಪಮಾನ ಈ ವರೆಗೆ ಬೆಂಗಳೂರಿನಲ್ಲಿ ದಾಖಲಾದ ಕನಿಷ್ಠ ತಾಪಮಾನವಾಗಿದೆ. ಆದರೆ ಡಿಸೆಬಂರ್ 12ರಂದು ಬೆಂಗಳೂರನಲ್ಲಿ ಮತ್ತೆ 12 ಡಿಗ್ರಿ ತಾಪಮಾನ ದಾಖಲಾಗಿತ್ತು. ಇದಕ್ಕೂ ಮೊದಲು ಅಂದರೆ ಗುರುವಾರ ಮುಂಜಾನೆ, ನಗರದ ಕೆಲವು ವಾರ್ಡ್‌ಗಳು ತಾಪಮಾನ ಕನಿಷ್ಟ 13.2°C ಯನ್ನು ದಾಖಲಿಸಿವೆ.
ಬೆಂಗಳೂರಿನ ಬಾಣಸವಾಡಿ, ಥಣಿಸಂದ್ರ ಮತ್ತು ಚೌಡೇಶ್ವರಿ ಮುಂತಾದ ಪ್ರದೇಶಗಳಲ್ಲಿ ತಾಪಮಾನ ಮುಂಜಾನೆ 12 ಡಿಗ್ರಿ ದಾಖಲಾಗಿತ್ತು.
ಈ ಕುರಿತು ಬೆಂಗಳೂರಿನ ಐಎಂಡಿ ಅಧಿಕಾರಿ ಸಿ.ಎಸ್. ಪಾಟೀಲ್, "ತಾಪಮಾನದಲ್ಲಿನ ಕುಸಿತವು ಶುಷ್ಕ ಗಾಳಿ, ಸ್ಪಷ್ಟ ಆಕಾಶ ಮತ್ತು ಸ್ಥಿರವಾದ ವಾತಾವರಣದ ಪರಿಸ್ಥಿತಿಗಳ ಸಂಯೋಜನೆಯಿಂದ ಉಂಟಾಗಿದೆ. ಇವೆಲ್ಲವೂ ರಾತ್ರಿಯಲ್ಲಿ ವಿಕಿರಣ ತಂಪಾಗಿಸುವಿಕೆಯನ್ನು ಸುಗಮಗೊಳಿಸುತ್ತದೆ.
ಚಳಿಗಾಲದ ವಿಶಿಷ್ಟ ವಿದ್ಯಮಾನವಾದ ಈಶಾನ್ಯ ಮಾರುತಗಳು ಬಲಗೊಳ್ಳುವುದು ಸಹ ಒಂದು ಪ್ರಮುಖ ಅಂಶವಾಗಿದೆ. ಈ ಗಾಳಿಗಳು ಉತ್ತರ ಮತ್ತು ಮಧ್ಯ ಭಾರತದ ಮೇಲೆ ದಕ್ಷಿಣದ ಕಡೆಗೆ ಹೆಚ್ಚಿನ ಒತ್ತಡದ ವಲಯಗಳಿಂದ ಶೀತ, ಶುಷ್ಕ ಗಾಳಿಯನ್ನು ಒಯ್ಯುತ್ತವೆ, ಬೆಚ್ಚಗಿನ ಗಾಳಿಯ ದ್ರವ್ಯರಾಶಿಗಳನ್ನು ಸ್ಥಳಾಂತರಿಸುತ್ತವೆ ಮತ್ತು ತಾಪಮಾನದಲ್ಲಿ ತೀವ್ರ ಕುಸಿತ, ಬೆಳಗಿನ ಮಂಜು ಮತ್ತು ವರ್ಧಿತ ಗಾಳಿ-ಚಳಿ ಪರಿಣಾಮಕ್ಕೆ ಕಾರಣವಾಗುತ್ತವೆ ಎಂದು ಹೇಳಿದರು.
ಕರ್ನಾಟಕದ ಇತರೆ ಭಾಗಗಳಲ್ಲೂ ಚಳಿ ಮುಂದುವರಿಕೆ
ಇನ್ನು ಚಳಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಸೇರಿದಂತೆ ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲೂ ತಾಪಮಾನದಲ್ಲಿ ಇಳಿಕೆಯಾಗುವ ನಿರೀಕ್ಷೆಯಿದೆ. ಉಳಿದಂತೆ ಕರಾವಳಿ ಪ್ರದೇಶಗಳು ಮತ್ತು ಒಳನಾಡಿನ ಜಿಲ್ಲೆಗಳು ಪ್ರಧಾನವಾಗಿ ಶುಷ್ಕ ಹವಾಮಾನವನ್ನು ಅನುಭವಿಸಲಿವೆ.