ರಾಜ್ಯ

News Headlines 23-12-25 | ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯಕ್ಕಿಲ್ಲ ಅವಕಾಶ; BIFFes ಪ್ರಕಾಶ್ ರಾಜ್ ರಾಯಭಾರಿ; ಭೈರತಿ ಬಸವರಾಜ್ ಜಾಮೀನು ಅರ್ಜಿ ವಜಾ!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿಜಯ್ ಹಜಾರೆ ಟ್ರೋಫಿ ಪಂದ್ಯಕ್ಕಿಲ್ಲ ಅವಕಾಶ

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಿಗದಿಯಾಗಿದ್ದ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಆಯೋಜಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಂಗಳವಾರ ತಿಳಿಸಿದ್ದಾರೆ. ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಕಾಲ್ತುಳಿತದ ಹಿನ್ನೆಲೆಯಲ್ಲಿ ಶಿಫಾರಸು ಮಾಡಲಾದ ಸರಿಪಡಿಸುವ ಕ್ರಮಗಳನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ವಿಫಲವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದರ ಪರಿಣಾಮ ಇಂದು ನಿಗದಿಯಾಗಿದ್ದ ದೆಹಲಿ ಮತ್ತು ಆಂಧ್ರಪ್ರದೇಶ ನಡುವಿನ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನು ಕ್ರೀಡಾಂಗಣದಲ್ಲಿ ನಡೆಯುತ್ತಿಲ್ಲ. ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೆಹಲಿ ಪರವಾಗಿ ಪಂದ್ಯವನ್ನು ಆಡಲು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದಾರೆ.

ರೌಡಿ ಬಿಕ್ಲು ಶಿವ ಕೊಲೆ ಪ್ರಕರಣ: BJP ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿ ವಜಾ

ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿಯ ಎಸ್‌ಐಟಿ, ಎಫ್‌ಐಆರ್‌ನಲ್ಲಿ ಹೆಸರಿಸಲಾದ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಹೊರತುಪಡಿಸಿ ಇತರ 18 ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದೆ. ಈ ಕುರಿತಂತೆ ಪ್ರಕರಣದ ಪ್ರಾಸಿಕ್ಯೂಟರ್‌ ಅಶೋಕ್‌ ಎನ್‌.ನಾಯಕ್‌ ಅವರು ಮ್ಯಾಜಿಸ್ಟ್ರೇಟ್‌ ಕೋರ್ಟ್‌ ನ್ಯಾಯಾಧೀಶ ಕೆ.ಎನ್‌.ಶಿವಕುಮಾರ್ ಅವರಿಗೆ 4,236 ಪುಟಗಳಿರುವ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದರು. ಪ್ರಕರಣದ ಐದನೇ ಆರೋಪಿಯಾಗಿರುವ ಕೆ.ಆರ್. ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ ಮಧ್ಯಂತರ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿರುವ ಹಿನ್ನೆಲೆ ದೋಷಾರೋಪ ಪಟ್ಟಿಯಿಂದ ಅವರ ಹೆಸರನ್ನು ಹೊರಗಿಡಲಾಗಿದೆ. ಈ ಮಧ್ಯೆ ಭೈರತಿ ಬಸವರಾಜ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಬಿಕ್ಲು ಶಿವ ಹತ್ಯೆ ಪ್ರಕರಣದಲ್ಲಿ A5 ಆಗಿರುವ ಭೈರತಿ ಬಸವರಾಜ್ ಗೆ ಲಿಂಕ್ ಆಗಿರುವ ದಾಖಲೆಗಳನ್ನು ಸಲ್ಲಿಸುವಂತೆ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಸೂಚಿಸಿದ್ದಾರೆ.

ಕಾಂಗ್ರೆಸ್ ಮುಖಂಡ Rahul Gandhi ಗೆ ಕೆಎನ್ ರಾಜಣ್ಣ ಪತ್ರ

ಮಾಜಿ ಸಚಿವ ಕೆ.ಎನ್. ರಾಜಣ್ಣ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನ ಮತಕಳ್ಳತನ ಅಭಿಯಾನದ ಬಗ್ಗೆ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಉಲ್ಲೇಖಿಸಿರುವ ಅವರು ಭೇಟಿಗೂ ಸಮಯವಕಾಶ ಕೇಳಿದ್ದಾರೆ. ಸಾಲು ಸಾಲು ಪತ್ರಗಳನ್ನು ಬರೆಯುತ್ತಿರುವ ರಾಜಣ್ಣ, ರಾಜ್ಯದಲ್ಲಿನ ವಿದ್ಯಮಾನದಿಂದ ಪಕ್ಷಕ್ಕೆ ಆಗುತ್ತಿರುವ ಡ್ಯಾಮೇಜ್ ಬಗ್ಗೆಯೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ಕೈ ಬಿಟ್ಟರೆ ಆಗುವ ಸಮಸ್ಯೆ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ. ಪ್ರಸ್ತುತ ತುಮಕೂರಿನ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕನಾಗಿರುವ ನಾನು, ಸರ್ಕಾರದಲ್ಲಿ ಸಹಕಾರ ಸಚಿವನಾಗಿಯೂ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವನಾಗಿಯೂ ಈ ಹಿಂದೆ ಸೇವೆ ಸಲ್ಲಿಸಿದ್ದೇನೆ. ಕೆಪಿಸಿಸಿ ನೇಮಕ ಮಾಡಿದ ಬಿಎಲ್ಏಗಳು ತಮ್ಮ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ. ಬಿಎಲ್ಏಗಳು ಸರಿಯಾಗಿ ಕಾರ್ಯನಿರ್ವಹಿಸಿದ್ದರೆ ಕಾಂಗ್ರೆಸ್ ಇನ್ನೂ 8 ರಿಂದ 10 ಸ್ಥಾನಗಳನ್ನು ಹೆಚ್ಚಾಗಿ ಗೆಲ್ಲುವ ಸಾಧ್ಯತೆ ಇತ್ತು ಎಂದು ಪತ್ರದಲ್ಲಿ ಬರೆದಿದ್ದಾರೆ.

BIFFes ಪ್ರಕಾಶ್ ರಾಜ್ ರಾಯಭಾರಿ

17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜ.29 ರಿಂದ ಫೆ.6ರವರೆಗೆ ಬೆಂಗಳೂರಿನಲ್ಲಿ ಚಲನಚಿತ್ರೋತ್ಸವ ನಡೆಯಲಿದ್ದು, ವಿಧಾನಸೌಧದ ಗ್ರ್ಯಾಂ ಡ್ ಸ್ಟೆಪ್ಸ್ ಮೇಲೆ ಉದ್ಘಾಟನೆಯಾಗಲಿದೆ. ನಾನೇ ಉದ್ಘಾಟನೆ ಮಾಡುತ್ತೇನೆ. ಈ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು. ಚಲನಚಿತ್ರೋತ್ಸವದಲ್ಲಿ 60 ದೇಶಗಳ 200 ಚಲನಚಿತ್ರಗಳು ಪ್ರದರ್ಶನ ಆಗಲಿದೆ. 400 ಪ್ರದರ್ಶನಗಳು ಇರಲಿವೆ. ಈ ವರ್ಷ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರೋ ಚಿತ್ರಗಳು ಪ್ರದರ್ಶನ ಆಗಲಿವೆ ಎಂದು ಹೇಳಿದರು.

ಉದ್ಯಮಿ ಕೆ. ರಘುನಾಥ್ ಅನುಮಾನಾಸ್ಪದ ಸಾವು: ಮೂವರ ಬಂಧನ

ಉದ್ಯಮಿ ಕೆ. ರಘುನಾಥ್ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ಮಾಜಿ ಸಂಸದ ಡಿ.ಕೆ ಆದಿಕೇಶವುಲು ಪುತ್ರ ಡಿ.ಎ ಶ್ರೀನಿವಾಸ್, ಪುತ್ರಿ ಡಿ.ಎ.ಕಲ್ಪಜಾ, ಡಿವೈಎಸ್‌ಪಿ ಎಸ್‌.ವೈ ಮೋಹನ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಅನುಮಾನಾಸ್ಪದ ಸಾವು ಹಾಗೂ ನಕಲಿ ದಾಖಲೆಗಳ ಪ್ರಕರಣದಲ್ಲಿ ಮೂವರಿಗೂ 48ನೇ ಎಸಿಜೆಎಂ ನ್ಯಾಯಾಲಯ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ. ರಘುನಾಥ್‌ಗೆ ಸೇರಿದ ಆಸ್ತಿ ಸಂಬಂಧ ನಕಲಿ ಛಾಪಕಾಗದ ಮತ್ತು ನಕಲಿ ವಿಲ್ ಸೃಷ್ಟಿ ಮಾಡಿದ ಆರೋಪದಲ್ಲಿ ಸಿಬಿಐ ಆರೋಪಿಗಳನ್ನು ಬಂಧಿಸಿದೆ. 2019ರ ಮೇ 4ರಂದು ರಘುನಾಥ್ ನೇಣುಬಿಗಿದ ಸ್ಥಿತಿಯಲ್ಲಿ ಆದಿಕೇಶವುಲು ಅವರಿಗೆ ಸೇರಿದ ಅತಿಥಿ ಗೃಹದಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ವೈದೇಹಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇದು ಆತ್ಮಹತ್ಯೆ ಎಂದು ಪ್ರಕರಣ ಮುಕ್ತಾಯಗೊಳಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಮೆರಿಕ ತೊರೆಯುವವರಿಗೆ 3 ಸಾವಿರ ಡಾಲರ್ ಸ್ಟೈಫಂಡ್: ಅಕ್ರಮ ವಲಸಿಗರಿಗೆ ಟ್ರಂಪ್ ಕ್ರಿಸ್‌ಮಸ್ ಆಫರ್

IPL 2026: ಬಾಂಗ್ಲಾದಲ್ಲಿ ಹಿಂದೂಗಳ ಹತ್ಯೆ: ಮುಸ್ತಾಫಿಜುರ್ ಖರೀದಿಸಿದ್ದಕ್ಕಾಗಿ ಶಾರುಖ್ ಖಾನ್'ನ 'KKR' ವಿರುದ್ಧ Boycott ಅಭಿಯಾನ!

ಬೆಂಗಳೂರಿನಲ್ಲಿ ಶೂಟೌಟ್: ಕೋರ್ಟ್​​​ನಿಂದ ಆಚೆ ಬಂದ ಬ್ಯಾಂಕರ್ ಪತ್ನಿಗೆ ಗುಂಡಿಕ್ಕಿ ಕೊಂದ ಟೆಕ್ಕಿ!

ಭಗವಾನ್ ರಾಮ ಓರ್ವ ಮುಸ್ಲಿಮ್: ವಿವಾದದ ಕಿಡಿ ಹೊತ್ತಿಸಿದ ತೃಣಮೂಲ ಕಾಂಗ್ರೆಸ್ ಶಾಸಕ!

ಒಡಿಶಾ: ತಲೆಗೆ 2 ಕೋಟಿ ರೂ.ಗೂ ಹೆಚ್ಚು ಬಹುಮಾನ ಹೊಂದಿದ್ದ 22 ನಕ್ಸಲರು ಪೊಲೀಸರಿಗೆ ಶರಣು!

SCROLL FOR NEXT