ವಿಪಕ್ಷ ನಾಯಕ ಆರ್. ಅಶೋಕ್ ಸಾಂದರ್ಭಿಕ ಚಿತ್ರ 
ರಾಜ್ಯ

ಬಾರ್ ಗಳನ್ನ ಮುಚ್ಚಿಸದ ಸರ್ಕಾರ, ವಿವಿಗಳನ್ನು ಮುಚ್ಚಿಸುತ್ತಿದೆ: ಆರ್. ಅಶೋಕ್ ಟೀಕೆ

ಕರ್ನಾಟಕದಲ್ಲಿ ಬಾರ್ ಗಳನ್ನು ಮುಚ್ಚಿಸದ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುತ್ತಿದೆ. ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಿದಂತೆ ಈಗ ಕಾಂಗ್ರೆಸ್ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದೆ

ಬೆಂಗಳೂರು: ರಾಜ್ಯ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುವ ನಿರ್ಧಾರದಿಂದ ನಮ್ಮ ರಾಜ್ಯದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ಪಕ್ಕದ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಶನಿವಾರ ಆಕ್ರೋಶ ಹೊರಹಾಕಿದರು.

ವಿಧಾನಸೌಧದಲ್ಲಿ ನಡೆದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಬಾರ್ ಗಳನ್ನು ಮುಚ್ಚಿಸದ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚಿಸುತ್ತಿದೆ. ಕಿಸಾನ್‌ ಸಮ್ಮಾನ್‌, ವಿದ್ಯಾನಿಧಿ ಸೇರಿದಂತೆ ಅನೇಕ ಯೋಜನೆಗಳನ್ನು ಮುಚ್ಚಿ ಹಾಕಿದಂತೆ ಈಗ ಕಾಂಗ್ರೆಸ್ ಸರ್ಕಾರ ವಿಶ್ವವಿದ್ಯಾಲಯಗಳನ್ನು ಮುಚ್ಚುತ್ತಿದೆ. 4 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸುವಾಗ, ಅದರಲ್ಲಿ 342 ಕೋಟಿ ರೂ. ಕೊಟ್ಟರೆ ಸಾಕು. ಇಷ್ಟು ಹಣ ಕೊಡಲಾಗದೇ ಇದ್ದಲ್ಲಿ, ಮತ್ತೇಕೆ ಬಜೆಟ್‌ ಮಂಡಿಸಬೇಕು? 3 ಸಾವಿರ ಬಾರ್‌ಗಳನ್ನು ಮುಚ್ಚುವುದಿಲ್ಲ. ಆದರೆ ವಿವಿಗಳನ್ನು ಮಾತ್ರ ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.

ಯುವಜನರು ಪದವೀಧರರಾಗುವುದನ್ನು ತಪ್ಪಿಸಲು ಈ ರೀತಿ ಮಾಡಲಾಗಿದೆ. ಯಾರೂ ಪದವೀಧರರಾಗದೇ ಇದ್ದಲ್ಲಿ ಯುವನಿಧಿ ಯೋಜನೆಯನ್ನು ನಿಲ್ಲಿಸಬಹುದು ಎಂಬುದು ಇವರ ಚಿಂತನೆಯಾಗಿದೆ. ಬೇರೆ ರಾಜ್ಯ, ದೇಶಗಳ ವಿದ್ಯಾರ್ಥಿಗಳು ನಮ್ಮ ರಾಜ್ಯದ ವಿಶ್ವವಿದ್ಯಾಲಯಗಳಿಗೆ ಬರುತ್ತಿದ್ದಾರೆ. ಮಂಡ್ಯದ ವಿಶ್ವವಿದ್ಯಾಲಯವನ್ನು ಮುಚ್ಚಿ, ಅಮ್ಯೂಸ್‌ಮೆಂಟ್‌ ಪಾರ್ಕ್‌ ಹಾಗೂ ಜಲಕ್ರೀಡೆಗೆ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ದೂರಿದರು.

ಹೆಚ್ಚು ಕನ್ನಡ ಮಾತನಾಡುವ ಮಂಡ್ಯದಲ್ಲೇ ಸರ್ಕಾರ ಶಿಕ್ಷಣವನ್ನು ನಿರ್ಲಕ್ಷಿಸುತ್ತಿದೆ. ಉಪನ್ಯಾಸಕರ ನೇಮಕವಿಲ್ಲ, ಅತಿಥಿ ಉಪನ್ಯಾಸರಿಗೆ ವೇತನ ಇಲ್ಲ, ಹೊಸ ಶಿಕ್ಷಣ ನೀತಿ ಜಾರಿಯಾಗಿಲ್ಲ, ಶಾಲಾ ಕೊಠಡಿಗಳ ದುರಸ್ಥಿಗೆ ಹಣವಿಲ್ಲ, ಪಠ್ಯಪುಸ್ತಕ-ಸಮವಸ್ತ್ರ ನೀಡಲು ಕಾಸಿಲ್ಲ. ಹೊಸ ಕಾಲೇಜುಗಳನ್ನು ಎಲ್ಲೂ ಆರಂಭಿಸಿಲ್ಲ ಎಂದು ಟೀಕಿಸಿದರು.

ಮಾಜಿ ಡಿಸಿಎಂ ಸಿ.ಎನ್. ಅಶ್ವತ್ಥ ನಾರಾಯಣ ಮಾತನಾಡಿ, ರಾಜ್ಯದ 8 ವಿಶ್ವವಿದ್ಯಾಲಯಗಳನ್ನು ಮುಚ್ಚುವುದು ಪ್ರಗತಿಗೆ ಹಿನ್ನೆಡೆಯಾಗಲಿದೆ. ಈ ನಿರ್ಧಾರದಿಂದ ಯುವಜನರ ಶೈಕ್ಷಣಿಕ ಪ್ರಗತಿಗೆ ತೊಂದರೆಯಾಗಲಿದೆ. ಸಿಎಂ ಸಿದ್ದರಾಮಯ್ಯನವರು ಬಜೆಟ್‌ ಮಂಡಿಸುವಾಗ ಡಾ.ಬಿ.ಆರ್‌.ಅಂಬೇಡ್ಕರ್‌ರ ಸಂವಿಧಾನದ ಆಶಯ, ವಚನಕಾರರ ಮಾತುಗಳನ್ನು ಹೇಳಿದ್ದರು. ಆದರೆ ಈಗ ವಿವಿಗಳನ್ನು ಮುಚ್ಚಲಾಗುತ್ತಿದೆ. ಯುವಜನರಿಗೆ ಸಮಾನ ಅವಕಾಶ ದೊರೆಯಲು ಗುಣಮಟ್ಟದ ಶಿಕ್ಷಣ ನೀಡಬೇಕು. ಜಿಲ್ಲೆಗಳು ರೂಪುಗೊಂಡು ಹಲವಾರು ವರ್ಷಗಳಾದರೂ ಅಲ್ಲಿ ಪ್ರತ್ಯೇಕ ವಿವಿಗಳಿಲ್ಲ. ಹಣ ಇಲ್ಲ ಎಂಬ ನೆಪವೊಡ್ಡಿ ವಿವಿಗಳನ್ನು ಮುಚ್ಚಲಾಗುತ್ತಿದೆ ಎಂದು ಆರೋಪಿಸಿದರು.

2021 ರ ಪ್ರಕಾರ, ಕಾಲೇಜುಗಳ ಪ್ರವೇಶಾತಿ ಪ್ರಮಾಣ ಸರಾಸರಿ ಶೇ.33 ಇದ್ದರೆ, ಚಾಮರಾಜನಗರದಲ್ಲಿ ಶೇ.10, ಮಂಡ್ಯದಲ್ಲಿ ಶೇ.15, ಬಾಗಲಕೋಟೆಯಲ್ಲಿ ಶೇ.16 ಇದೆ. ಇಂತಹ ಸ್ಥಿತಿಯಲ್ಲಿ ಯುವಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡಲಾಗುತ್ತಿದೆ. ವಿವಿಗಳಿಂದ ಆದಾಯ ಬರಲು ಇದು ಅಂಗಡಿಗಳಲ್ಲ. ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ಅಂಬೇಡ್ಕರ್ ಅವರು ಶಿಕ್ಷಣಕ್ಕೆ ಆದ್ಯತೆ ನೀಡಿದ್ದರು, ಕಾಂಗ್ರೆಸ್ ಸರ್ಕಾರ ಕೇವಲ ಉಚಿತ ಅಕ್ಕಿ ನೀಡುವ ಬದಲು ಇದನ್ನೇ ಮಾಡಬೇಕಾಗಿದೆ. ರೂ. 4 ಲಕ್ಷ ಕೋಟಿ ಬಜೆಟ್ ಮಂಡಿಸಿ ಶಿಕ್ಷಣಕ್ಕಾಗಿ ರೂ. 350 ಕೋಟಿ ನೀಡಲು ನಿರಾಕರಿಸುತ್ತಿದೆ. ಕೇಂದ್ರ ಸರ್ಕಾರ ಆರೋಗ್ಯ, ಶಿಕ್ಷಣದ ಕಡೆಗೆ ಗಮನ ಕೇಂದ್ರೀಕರಿಸಿದ್ದರೆ, ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಕಡೆಗೆ ಆದ್ಯತೆ ನೀಡಿದೆ ಎಂದು ಟೀಕಾ ಪ್ರಹಾರ ನಡೆಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಆರ್ಥಿಕ ಬಿಕ್ಕಟ್ಟು: ಇಂಟರ್ನೆಟ್‌ ಸ್ಥಗಿತಗೊಳಿಸಿದರೂ ನಿಲ್ಲದ ಉದ್ವಿಗ್ನತೆ; 13ನೇ ದಿನಕ್ಕೆ ಕಾಲಿಟ್ಟ ಪ್ರತಿಭಟನೆ, ಈವರೆಗೂ 200ಕ್ಕೂ ಹೆಚ್ಚು ಮಂದಿ ಬಲಿ

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ, ನೊಬೆಲ್​ ಶಾಂತಿ ಪ್ರಶಸ್ತಿಗೆ ನನ್ನಷ್ಟು ಅರ್ಹರು ಯಾರೂ ಇಲ್ಲ; ಡೊನಾಲ್ಡ್ ಟ್ರಂಪ್

WPL 2026: 4 ಓವರ್, 1 ಮೇಡನ್.. ಸೌಂದರ್ಯ ಅಷ್ಟೇ ಅಲ್ಲ.. ಪ್ರದರ್ಶನದಲ್ಲೂ ಟಾಪ್.. RCBಯ ಲೇಡಿ ಹೇಜಲ್ವುಡ್ Lauren Bell!

ಡಿ-ಕೋಡ್: ದ್ವೇಷ ಭಾಷಣ ಮಸೂದೆ ಎಂಬ ‘ಗರಗಸ’; DDT ಆಗುವತ್ತ ಕರ್ನಾಟಕ ಸರ್ಕಾರ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಮಸೂದೆ ವಿರುದ್ಧ ರಾಷ್ಟ್ರಪತಿಗೆ ನಿಯೋಗ; ರಾಜ್ಯ ಸರ್ಕಾರ

SCROLL FOR NEXT