ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಯಲ್ಲಿನ ಅನೇಕ ಆಸ್ತಿ ಮಾಲೀಕರು ಪಾಲಿಕೆಯ ಸ್ವಯಂ ಮೌಲ್ಯಮಾಪನ ಯೋಜನೆಯನ್ನು (ಎಸ್‌ಎಎಸ್) ದುರುಪಯೋಗಪಡಿಸಿಕೊಂಡಿದ್ದು, ನಿಜವಾದ ತೆರಿಗೆ ಪಾವತಿಸುವುದನ್ನು ತಪ್ಪಿಸಿರುವ ಆಸ್ತಿಗಳ ಮಾಲೀಕರಿಗೆ ನೋಟಿಸ್ ನೀಡಲು ಬಿಬಿಎಂಪಿ ನಿರ್ಧರಿಸಿದೆ.
ಡ್ರೋನ್ ಸಮೀಕ್ಷೆಗಳು, ಅಧಿಕಾರಿಗಳ ಭೇಟಿ ಮತ್ತು ಇತರ ವಿಧಾನಗಳ ಮೂಲಕ ಸುಮಾರು 5 ಲಕ್ಷ ಆಸ್ತಿಗಳಲ್ಲಿ ಕಾನೂನು ಉಲ್ಲಂಘನೆಗಳನ್ನು ಪಾಲಿಕೆ ಪತ್ತೆಹಚ್ಚಿದೆ.
ಬಿಬಿಎಂಪಿ ಮಾಲೀಕರಿಗೆ ನಿಜವಾದ ಹಣ ಪಾವತಿಸಲು ನೋಟಿಸ್ ನೀಡಲು ನಿರ್ಧರಿಸಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ (ಕಂದಾಯ) ಮುನೀಶ್ ಮೌದ್ಗಿಲ್ ದೃಢಪಡಿಸಿದ್ದಾರೆ. ಹಿರಿಯ ಅಧಿಕಾರಿಗಳ ಪ್ರಕಾರ, ಆಸ್ತಿ ಮಾಲೀಕರಿಗೆ ತಮ್ಮ ಆಸ್ತಿಗಳನ್ನು 'ಕಡಿಮೆ ಮೌಲ್ಯಮಾಪನ' ಮಾಡಿದ್ದಕ್ಕಾಗಿ ನೋಟಿಸ್ ನೀಡಸಾಗುತ್ತಿದೆ. ಇಂತದ ಪದ್ಧತಿಗಳನ್ನು ಪುನರಾವರ್ತಿಸದಂತೆ ಮಾಲೀಕರಿಗೆ ಎಚ್ಚರಿಕೆ ನೀಡಲು ನೊಟೀಸ್ ಕೊಡಲಾಗುತ್ತಿದೆ ಎಂದಿದ್ದಾರೆ.
ಕಂದಾಯ ಇಲಾಖೆಯು ಡ್ರೋನ್ ಸಮೀಕ್ಷೆಯನ್ನು ಸಹ ಬಳಸಿಕೊಂಡು ಮಾಲೀಕರ ಮನೆ ವಿಳಾಸ, ಜಿಪಿಎಸ್, ಫೋಟೋ, ನೋಂದಣಿ ವಿವರಗಳು, ಮತ್ತು ವಾಸಸ್ಥಳ ಪ್ರಮಾಣಪತ್ರವನ್ನು ಆಧರಿಸಿ ಸಮೀಕ್ಷೆ ನಡೆಸಿದೆ. ಅವರಲ್ಲಿ ಸುಮಾರು 5 ಲಕ್ಷ ಜನರು ನಿಜವಾದ ಡೇಟಾ ಮರೆಮಾಡಿದ್ದಾರೆ, ಭಾಗಶಃ ವಿವರಗಳನ್ನು ಮಾತ್ರ ಘೋಷಿಸಿ ಕಡಿಮೆ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಕಂಡುಬಂದಿದೆ ಎಂದು ಬಿಬಿಎಂಪಿ ಕಂದಾಯ ಇಲಾಖೆಯ ಹಿರಿಯ ಲೆಕ್ಕಪತ್ರಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಂತಹ ಮಾಲೀಕರ ಮೇಲೆ ಯಾವ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದರ ಕುರಿತು ಕಂದಾಯ ಅಧಿಕಾರಿಗಳು ಇನ್ನೂ ವಿವರಗಳನ್ನು ಬಹಿರಂಗಪಡಿಸಿಲ್ಲ, ಮುಖ್ಯ ಆಯುಕ್ತರು ಮತ್ತು ಕಂದಾಯ ಆಯುಕ್ತರ ಶಿಫಾರಸುಗಳ ಆಧಾರದ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಸಮರ್ಥಿಸಿಕೊಂಡಿದ್ದಾರೆ.
"ಮಾಲೀಕರು ನೋಟಿಸ್‌ಗಳನ್ನು ಪಾಲಿಸಲು ವಿಫಲವಾದರೆ, ಅಂತಹ ಮಾಲೀಕರ ವಿರುದ್ಧ ಭಾರಿ ದಂಡ ವಿಧಿಸುವ ಸಾಧ್ಯತೆಗಳಿವೆ. ಜುಲೈ ಅಂತ್ಯ ಮತ್ತು ಆಗಸ್ಟ್ ಅಂತ್ಯದ ವೇಳೆಗೆ ಬಿಬಿಎಂಪಿ ಈಯೋಜನೆ ಪೂರ್ಣ ಪ್ರಮಾಣದಲ್ಲಿ ಪ್ರಾರಂಭಿಸಲಿದೆ, ಏಕೆಂದರೆ 150 ಕ್ಕೂ ಹೆಚ್ಚು ಕಂದಾಯ ಸಿಬ್ಬಂದಿಗಳು ಪರಿಶಿಷ್ಟ ಜಾತಿ ಜನಸಂಖ್ಯೆಯ ಜಾತಿ ಸಮೀಕ್ಷೆಯಲ್ಲಿ ತೊಡಗಿದ್ದಾರೆ, ಇದು ಜುಲೈ ಮಧ್ಯದ ವೇಳೆಗೆ ಕೊನೆಗೊಳ್ಳುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ 5 ಲಕ್ಷ ಆಸ್ತಿಗಳಲ್ಲಿ, ಬಿಬಿಎಂಪಿ ಈಗಾಗಲೇ 26,000 ಆಸ್ತಿಗಳನ್ನು ಪಟ್ಟಿ ಮಾಡಿದೆ ಮತ್ತು ಮಾಲೀಕರಿಂದ 100 ಕೋಟಿ ರೂ.ಗಳನ್ನು ಸಂಗ್ರಹಿಸುವ ನಿರೀಕ್ಷೆಯಿದೆ. ಇದಲ್ಲದೆ, ಬಿಬಿಎಂಪಿ ಕಂದಾಯ ಇಲಾಖೆಯು 714.56 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ 3.16 ಲಕ್ಷ ಸುಸ್ತಿದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ತೆರಿಗೆ ಪಾವತಿಸಲು ಬಿಬಿಎಂಪಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಕಳೆದ ವರ್ಷ, ಅಂತಹ ಬಾಕಿಗಳ ಮೇಲಿನ ಬಡ್ಡಿಯನ್ನು ಕಡಿಮೆ ಮಾಡುವ ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೆ ತರಲಾಯಿತು ಹಾಗೂ ಅದನ್ನು ಹಲವು ಬಾರಿ ವಿಸ್ತರಿಸಲಾಯಿತು, ಆದರೆ ಅನೇಕರು ಅದನ್ನು ಬಳಸಿಕೊಂಡಿಲ್ಲ. ಬಿಬಿಎಂಪಿ ಅಂತಹ ಆಸ್ತಿಗಳನ್ನು ಸೀಲ್ ಮಾಡುವುದು ಮತ್ತು ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವಂತಹ ಕ್ರಮಗಳನ್ನು ಪ್ರಾರಂಭಿಸುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.