ಬೆಂಗಳೂರು: ಬಸ್, ಮೆಟ್ರೋ ರೈಲು ಪ್ರಯಾಣ ದರದ ನಂತರ ಇದೀಗ ನಗರದಲ್ಲಿ ಸಂಚರಿಸುವ ಆಟೋ ಪ್ರಯಾಣ ದರವನ್ನೂ ಹೆಚ್ಚಳ ಮಾಡಲಾಗಿದ್ದು, ಹೊಸ ದರ ಆಗಸ್ಟ್ 1ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ನಗರ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಮೊದಲ 2 ಕಿಮೀಗೆ (ಕನಿಷ್ಠ ದರ) 30 ರು. ಇದ್ದ ಪ್ರಯಾಣ ದರವನ್ನು 36 ರು.ಗೆ ಹೆಚ್ಚಿಸಲಾಗಿದೆ. ಉಳಿದಂತೆ ನಂತರದ ಪ್ರತಿ ಕಿಮೀ ದರವನ್ನು 15ರು.ನಿಂದ 18ರು.ಗೆ ಏರಿಸಲಾಗಿದೆ.
ಅಲ್ಲದೇ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ಒನ್ ಅಂಡ್ ಆಫ್ ಚಾರ್ಜ್ (ಸಾಮಾನ್ಯ ದರ+ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಮಾಡಬಹುದಾಗಿದೆ. ಜೊತೆಗೆ ಕಾಯುವಿಕೆ ದರವನ್ನು ಮೊದಲ 5 ನಿಮಿಷಕ್ಕೆ ಉಚಿತ ಮತ್ತು 5 ನಿಮಿಷದ ನಂತರದ ಪ್ರತಿ 15 ನಿಮಿಷದ ದರವನ್ನು 5 ರು.ನಿಂದ 10 ರು.ಗೆ ಹೆಚ್ಚಳ ಮಾಡಲಾಗಿದೆ.
ಹಾಗೆಯೇ, ಪ್ರಯಾಣಿಕರು 20 ಕೆಜಿ ಲಗೇಜನ್ನು ಯಾವುದೇ ಶುಲ್ಕವಿಲ್ಲದೆ ಆಟೋದಲ್ಲಿ ತೆಗೆದುಕೊಂಡು ಹೋಗಬಹುದಾಗಿದ್ದು, 20ರಿಂದ 50 ಕೆಜಿ ಲಗೇಜಿಗೆ ಪ್ರತಿ 20 ಕೆಜಿ ಲಗೇಜಿಗೆ 10 ರು.ನಂತೆ ಪಾವತಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಪರಿಷ್ಕೃತ ದರದ ಮೂಲಪಟ್ಟಿಯನ್ನು ಪ್ರತಿ ಆಟೋಗಳು ಪ್ರದರ್ಶಿಸಬೇಕು. ಹಾಗೆಯೇ, ಅ. 10ರೊಳಗೆ (90 ದಿನ) ಮೀಟರ್‌ನ್ನು ಪರಿಷ್ಕೃತ ದರಕ್ಕೆ ನಿಗದಿ ಮಾಡಿಕೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಈ ನಡುವೆ ದರ ಹೆಚ್ಚಳವನ್ನು ನಾವು ಸ್ವಾಗತಿಸುತ್ತೇವೆಂದು ಕರ್ನಾಟಕ ರಾಜ್ಯ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟದ ಅಧ್ಯಕ್ಷ ನಟರಾಜ್ ಶರ್ಮಾ ಅವರು ಹೇಳಿದ್ದಾರೆ.
ಇದೇ ವೇಳೆ ಮಿನಿಮಮ್ ಆಟೋದರ ಬಳಿ ಪ್ರತಿ ಕಿಲೋಮೀಟರ್ ದರವನ್ನು ಮತ್ತಷ್ಟು ಪರಿಷ್ಕರಣೆ ಮಾಡಬೇಕಿದ್ದು, ರೂ.18ರಿಂದ 20 ರೂಗೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ಚಾಲಕರು ಸರ್ಕಾರಿ ದರವನ್ನು ಅನುಸರಿಸಲು ಮತ್ತು ಅಗ್ರಿಗೇಟರ್ ಅಪ್ಲಿಕೇಶನ್‌ಗಳ ಬದಲಿಗೆ ಮೀಟರ್‌ನಲ್ಲಿ ಆಟೋ ಓಡಿಸುವಂತೆ ಸಲಹೆ ನೀಡಿದರು.
ಈ ನಡುವೆ ಕೆಲ ಆಟೋ ಸಂಘಟನೆಗಳು ದರ ಏರಿಕೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ. ಮೂಲದರವನ್ನು ರೂ.40ಕ್ಕೆ ಹಾಗೂ ನಂತರದ ಪ್ರತಿ ಕಿಲೋಮೀಟರ್ ದರವನ್ನು ರೂ.20ಕ್ಕೆ ಹೆಚ್ಚಿಸಬೇಕಿತ್ತು ಎಂದು ಹೇಳಿದ್ದು, ಈ ದರ ಪರಿಷ್ಕರಣೆಯ ವಿರುದ್ಧ ಪ್ರತಿಭಟನೆ ನಡೆಸುತ್ತೇವೆಂದು ಹೇಳಿದ್ದಾರೆ.