ಹಾಸನ: ತಾಯಿಯೊಬ್ಬಳು ತನ್ನ ಆರು ವರ್ಷದ ಮಗಳನ್ನು ನೀರಿನಲ್ಲಿ ಮುಳುಗಿಸಿ ಕೊಲೆಗೈದಿರುವ ಹೃದಯ ವಿದ್ರಾವಕ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿ ಕೊಪ್ಪಲು ಗ್ರಾಮದ ಸಾನ್ವಿ (6) ಮೃತ ಬಾಲಕಿ. ತಾಯಿ ಶ್ವೇತಾ ಮಗಳನ್ನು ಕೊಂದ ನಂತರ ತಾನೂ ಸಾಯುವುದಾಗಿ ಕಿರುಚಾಡುತ್ತಿದ್ದಳು. ಆಗ ಆಕೆಯನ್ನು ಸ್ಥಳೀಯರು ರಕ್ಷಿಸಿ, ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ಕಳೆದ ಏಳು ವರ್ಷಗಳ ಹಿಂದೆ ಶಿವಮೊಗ್ಗದ ರಘು ಎಂಬವರ ಜೊತೆ ಶ್ವೇತಾ ವಿವಾಹವಾಗಿದ್ದರು. ಆರಂಭದಿಂದಲೂ ಗಂಡ-ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಕಳೆದ ನಾಲ್ಕು ವರ್ಷಗಳಿಂದ ಸಾನ್ವಿಯನ್ನು ರಘು ಪೋಷಕರು ಸಾಕುತ್ತಿದ್ದರು. ಗಂಡನಿಂದ ದೂರವಾಗಿ ಶ್ವೇತಾ ಕಳೆದ ಐದು ವರ್ಷಗಳಿಂದ ತವರು ಮನೆಯಲ್ಲಿದ್ದರು. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದ್ದರು. ಕುಟುಂಬಸ್ಥರು ಹಲವು ಬಾರಿ ರಾಜಿ ಸಂಧಾನ ಮಾಡಿದ್ದರು. ಆದರೂ ಗಂಡ-ಹೆಂಡತಿ ನಡುವೆ ಒಮ್ಮತ ಮೂಡಿರಲಿಲ್ಲ.
ಶ್ವೇತಾ ಅವರ ತಂದೆ-ತಾಯಿ ಇಬ್ಬರೂ ನಿಧನರಾಗಿದ್ದು, ಅವರ ಏಳು ಸಹೋದರಿಯರು ಎಲ್ಲರೂ ಮದುವೆಯಾಗಿದ್ದಾರೆ. ಆಗಾಗ್ಗೆ ತವರು ಮನೆಗೆ ಬಂದು, ಇವರಿಗಿರುವ ಅಲ್ಪ ಜಮೀನನ್ನು ಉಳುಮೆ ಮಾಡಿಸಿ ಬೆಳೆ ಬೆಳೆಯುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅಕ್ಕತಂಗಿಯರು ಬಂದು ಹೋಗುತ್ತಿದ್ದರು.
ಹಲವು ವರ್ಷಗಳಿಂದ ನೆಲಮಂಗಲದಲ್ಲಿ ರಘು ಕೆಲಸ ಮಾಡುತ್ತಿದ್ದರು. ಶನಿವಾರ ಬೆಂಗಳೂರಿನ ನೆಲಮಂಗಲದಿಂದ ಮಗಳು ಸಾನ್ವಿಯನ್ನು ಕರೆದುಕೊಂಡು ಶ್ವೇತಾ ತವರು ಮನೆಗೆ ಬಂದಿದ್ದರು. ಮನೆ ಕೀ ಇಲ್ಲದ ಕಾರಣ ಪಕ್ಕದ ಮನೆಯಲ್ಲಿ ವಾಸ್ತವ್ಯ ಹೂಡಿದ್ದರು. ಇಂದು ಬೆಳಗ್ಗೆ ಒಂಬತ್ತು ಗಂಟೆ ಸಮಯದಲ್ಲಿ ಜಮೀನು ಕಡೆಗೆ ಹೋಗುತ್ತೇನೆಂದು ಪುತ್ರಿಯನ್ನು ಕರೆದುಕೊಂಡು ಹೋಗಿದ್ದರು. ತಮ್ಮ ಜಮೀನಿನ ಪಕ್ಕದಲ್ಲಿದ್ದ ಕಟ್ಟೆಯಲ್ಲಿ ಮಗಳನ್ನು ಮುಳುಗಿಸಿದ್ದಾರೆ.
ಮಗು ಕಿರುಚಾಡುತ್ತಿದ್ದುದನ್ನು ಕೇಳಿ ಅಕ್ಕಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತರು ಓಡಿಬಂದಿದ್ದಾರೆ. ಕೂಡಲೇ ವರಸೆ ಬದಲಿಸಿ ನಾನು ಮಗು ಇಬ್ಬರೂ ಸಾಯಲು ಪ್ರಯತ್ನಿಸಿದೆವು ಎಂದು ಗ್ರಾಮಸ್ಥರಿಗೆ ಶ್ವೇತಾ ಹೇಳಿಕೊಂಡಿದ್ದಾರೆ. ತಕ್ಷಣವೇ ಬಾಲಕಿಯನ್ನು ಎತ್ತಿಕೊಂಡು ಗ್ರಾಮಸ್ಥರು ಆಸ್ಪತ್ರೆಗೆ ಕರೆತಂದಿದ್ದಾರೆ. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.
ಸ್ಥಳಕ್ಕೆ ಹಿರಿಸಾವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಂದೆ-ತಾಯಿ ನಿಧನ, ಗಂಡನ ಮನೆಯಲ್ಲಿ ಮನಸ್ತಾಪ. ಹೀಗೆ ನಾನಾ ಕಾರಣಗಳಿಂದ ಶ್ವೇತಾ ಗಂಡನಿಂದ ದೂರವಾಗಿ, ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಬಿಟ್ಟು ತವರು ಮನೆಯಲ್ಲೇ ಇದ್ದರು.