ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದು, ಹಲವಾರು ತಗ್ಗು ಪ್ರದೇಶಗಳು ಮುಳುಗಿ ನೂರಾರು ಮನೆಗಳು ಜಲಾವೃತಗೊಂಡಿದ್ದರಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಜೂನ್ 11 ರ ರಾತ್ರಿಯಿಂದ ಪ್ರಾರಂಭವಾದ ಮಳೆ ಗುರುವಾರ ಪೂರ್ತಿ ಮುಂದುವರೆಯಿತು. ಕಾರವಾರದ ಪ್ರಮುಖ ನಗರ ಮತ್ತು ಗ್ರಾಮೀಣ ಪ್ರದೇಶಗಳು ಮಳೆಯ ಹೊಡೆತಕ್ಕೆ ಸಿಲುಕಿದ್ದು, ರಸ್ತೆಗಳು ಜಲಾವೃತ್ತವಾಗಿ ವಾಹನಗಳ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಮಳೆನೀರಿನ ಚರಂಡಿಗಳು ತುಂಬಿ ಹರಿಯುತ್ತಿವೆ. ಎಂಜಿ ರಸ್ತೆ, ಗೀತಾಂಜಲಿ ಚಿತ್ರಮಂದಿರ, ಹೈ ಚರ್ಚ್ ಪ್ರದೇಶ, ಕೋಡಿಬಾಗ್ ಮತ್ತು ಸಾಯಿ ಕಟ್ಟೆ ಪ್ರದೇಶದ ಬಳಿಯ ರಸ್ತೆಗಳು ನದಿಗಳಾಗಿ ಮಾರ್ಪಟ್ಟಿದ್ದವು. ಕಾರವಾರದಲ್ಲಿ ಅಂಗಡಿಗಳು, ದೇವಾಲಯಗಳು ಮತ್ತು ಮನೆಗಳಿಗೆ ನೀರು ನುಗ್ಗಿ ಜನಪರದಾಡುವಂತಾಗಿದೆ.
ಗುರುವಾರ ಬೆಳಗಿನ ಜಾವ ನಗರದ ದೋಬಿಘಾಟ್ ರಸ್ತೆಯ ಸಾಯಿ ಮಂದಿರ ಬಳಿ ಸಂಭವಿಸಿದ ಭೂಕುಸಿತದಿಂದಾಗಿ ಬೆಟ್ಟದ ಇಳಿಜಾರಿನಲ್ಲಿ ಬೃಹತ್ ಬಂಡೆಗಳು ಉರುಳಿಬಿದ್ದಿದ್ದು, ಮತ್ತಷ್ಟು ಭೂಕುಸಿತದ ಭೀತಿ ಆರಂಭವಾಗಿದೆ. ಕಾರವಾರ ಸೇರಿದಂತೆ 21 ಸ್ಥಳಗಳನ್ನು ಭೂಕುಸಿತ ಪೀಡಿತ ವಲಯಗಳೆಂದು ಗುರುತಿಸಿರುವ ಭಾರತೀಯ ಭೂವಿಜ್ಞಾನ ಸಮೀಕ್ಷೆ (ಜಿಎಸ್‌ಐ) ವರದಿಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಅಧಿಕಾರಿಗಳ ಪ್ರಕಾರ, ಅಂಕೋಲಾದ ಕಾರು ಕಾರವಾರದ ರಂಗಮಂದಿರ ಬಳಿ ನೀರು ತುಂಬಿದ ಚರಂಡಿಗೆ ಬಿದ್ದಿದ್ದು, ಗೋಚರತೆ ಕೊರತೆಯ ಹಿನ್ನಲೆಯಲ್ಲಿ ಕಾರು ಬಿದ್ದಿದೆ ಎಂದು ಹೇಳಲಾಗಿದೆ. ವಾಹನ ಮತ್ತು ಅದರ ಚಾಲಕನನ್ನು ನೆಲ ಅಗೆಯುವ ಜೆಸಿಬಿ ಯಂತ್ರವನ್ನು ಬಳಸಿ ಹೊರತೆಗೆಯಲಾಯಿತು. ಕೋಡಿಬಾಗ್ ನಿವಾಸಿ ರೀಟಾ ಫೆರ್ನಾಂಡಿಸ್ ಅವರ ಮನೆ ಜಲಾವೃತವಾಗಿತ್ತು. ಅದಾಗ್ಯೂ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು.
"ಕೋಡಿಬೀರ್ ದೇವಸ್ಥಾನದ ಬಳಿ ಆರು ಮನೆಗಳು ನೀರಿನಲ್ಲಿ ಮುಳುಗಿದ್ದವು. ವೃದ್ಧರು ಮತ್ತು ಮಕ್ಕಳನ್ನು ರಾತ್ರಿಯಿಡೀ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಬೇಕಾಯಿತು. ನಮ್ಮ ರೆಫ್ರಿಜರೇಟರ್, ದೂರದರ್ಶನ, ಹಾಸಿಗೆಗಳು, ಅಕ್ಕಿ ಮತ್ತು ಬೇಳೆಕಾಳುಗಳು - ಎಲ್ಲವೂ ನೀರಲ್ಲಿ ಹೋಗಿವೆ. ನೆರೆಹೊರೆಯವರು ನಮಗೆ ಆಹಾರವನ್ನು ನೀಡಿದರು. ಆದರೆ ಈಗ ಎಲ್ಲಿಗೆ ಹೋಗಬೇಕೆಂದು ನಮಗೆ ತಿಳಿದಿಲ್ಲ. ಇದೆಲ್ಲದರ ಹೊರತಾಗಿಯೂ, ಒಬ್ಬ ಚುನಾಯಿತ ಪ್ರತಿನಿಧಿ ಅಥವಾ ಅಧಿಕಾರಿಯೂ ನಮ್ಮನ್ನು ಭೇಟಿ ಮಾಡಿಲ್ಲ" ಎಂದು ಅವರು ಹೇಳಿದರು.
ಉಪ ಆಯುಕ್ತೆ ಕೆ ಲಕ್ಷ್ಮಿಪ್ರಿಯಾ ಅವರು ಹಿಂದೂ ಹೈಸ್ಕೂಲ್ ರಸ್ತೆ, ಬಿನಾಗಾ ಸುರಂಗ ಮತ್ತು ಕೆಇಬಿ ಸಬ್‌ಸ್ಟೇಷನ್ ಸೇರಿದಂತೆ ವಿವಿಧ ಪೀಡಿತ ವಲಯಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ನಿರ್ಣಯಿಸಿದರು. ನಾಗರಿಕರ ಅಗತ್ಯಗಳಿಗೆ ತಕ್ಷಣ ಸ್ಪಂದಿಸಲು ಮತ್ತು ಅಗತ್ಯ ಪರಿಹಾರವನ್ನು ಒದಗಿಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು. ಇಂದಿನವರೆಗೆ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಮತ್ತು ಭಟ್ಕಳದ ಕರಾವಳಿ ತಾಲ್ಲೂಕುಗಳಾದ್ಯಂತ ಎಲ್ಲಾ ಅಂಗನವಾಡಿಗಳು, ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.
ಶುಕ್ರವಾರ ಬೆಳಿಗ್ಗೆವರೆಗೆ ದಾಖಲಾದ ಅಧಿಕೃತ ಅಂಕಿಅಂಶಗಳ ಪ್ರಕಾರ, ಕಾರವಾರದಲ್ಲಿ 128.3 ಮಿಮೀ ಮಳೆಯಾಗಿದ್ದು, ಭಟ್ಕಳ 125.6 ಮಿಮೀ, ಹೊನ್ನಾವರ 113.2, ಕುಮಟಾ 80.5, ಅಂಕೋಲಾ 60.3 ಮಿಮೀ, ಮತ್ತು ಇತರ ತಾಲ್ಲೂಕುಗಳಲ್ಲಿ ಮಧ್ಯಮ ಮಳೆಯಾಗಿದೆ.
ರೆಡ್ ಅಲರ್ಟ್
ಜೂನ್ 14 ರವರೆಗೆ ರೆಡ್ ಅಲರ್ಟ್ ಜಾರಿಯಲ್ಲಿದ್ದು, ಜೂನ್ 18 ರವರೆಗೆ ಭಾರೀ ಮಳೆ ಮುಂದುವರಿಯುವ ಮುನ್ಸೂಚನೆ ಇದೆ. 24 ಗಂಟೆಗಳಲ್ಲಿ 20 ಸೆಂ.ಮೀ.ಗಿಂತ ಹೆಚ್ಚಿನ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ರೆಡ್ ಅಲರ್ಟ್ ಸೂಚಿಸುತ್ತದೆ.
ಕಳೆದ 24 ಗಂಟೆಗಳಲ್ಲಿ ಸುಮಾರು 0.75 ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ ಎಂದು ವರದಿಯಾಗಿದೆ. ಭೂಕುಸಿತದ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು, ಜೂನ್ 12 ರಿಂದ ಮಳೆಗಾಲದ ಅಂತ್ಯದವರೆಗೆ ರಾಷ್ಟ್ರೀಯ ಹೆದ್ದಾರಿಗಳ ದುರ್ಬಲ ಪ್ರದೇಶಗಳಲ್ಲಿ ಎಲ್ಲಾ ರೀತಿಯ ವಾಹನಗಳ ನಿಲುಗಡೆಯನ್ನು ಜಿಲ್ಲಾಧಿಕಾರಿ ನಿಷೇಧಿಸಿದ್ದಾರೆ.
ನಿರ್ಣಾಯಕ ಸ್ಥಳಗಳಲ್ಲಿ ಎಚ್ಚರಿಕೆ ಫಲಕಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅಳವಡಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಲಾಗಿದೆ. ಅದೇ ರೀತಿ, ಭಟ್ಕಳ ತಾಲ್ಲೂಕಿನ ಮಾವಿನಕುರ್ವೆ ಪಂಚಾಯತ್ ಮಿತಿಯೊಳಗಿನ ತಲಗೋಡ-ಕೊಂಡಾರ್ಕೇರ್ ಪ್ರದೇಶದಲ್ಲಿ, ಭೂಕುಸಿತದ ಹೆಚ್ಚಿನ ಅಪಾಯವಿರುವುದರಿಂದ ವಾಹನ ಮತ್ತು ಪಾದಚಾರಿ ಸಂಚಾರವನ್ನು ನಿಷೇಧಿಸಲಾಗಿದೆ.
ಭಟ್ಕಳದ ಮುಗ್ಧಮ್ ಕಾಲೋನಿ ಮೂಲಕ ಪರ್ಯಾಯ ಮಾರ್ಗವನ್ನು ಸಾರ್ವಜನಿಕ ಬಳಕೆಗಾಗಿ ಗೊತ್ತುಪಡಿಸಲಾಗಿದೆ. ಹವಾಮಾನ ಅಧಿಕಾರಿಗಳ ಪ್ರಕಾರ, ಗುರುವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಉತ್ತರ ಭಾಗಗಳಲ್ಲಿ ಮೋಡ ಸ್ಫೋಟದ ಲಕ್ಷಣಗಳು ಕಂಡುಬಂದಿವೆ, ಆದರೆ ಅದು ಇನ್ನೂ ಖಚಿತವಾಗಿಲ್ಲ.