ಬೆಂಗಳೂರು: ಬೆಂಗಳೂರಿನಲ್ಲಿ ನಡೆದ Rapido Bike Taxi ಸಂಘರ್ಷ ವಿಚಾರ ದೇಶಾದ್ಯಂತ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಪ್ರಸ್ತುತ ಲಭ್ಯವಾದ ಸಿಸಿಟಿವಿ ದೃಶ್ಯಾವಳಿ ಇಡೀ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ.
ಹೌದು.. ಬೆಂಗಳೂರಿನಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನೊಬ್ಬ (Rapido Driver) ಮಹಿಳಾ ಪ್ರಯಾಣಿಕರ ಮೇಲೆ ಹಲ್ಲೆ ನಡೆಸಿದ ಪ್ರಕರಣ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಚಾಲಕ ಮಹಿಳಾ ಪ್ರಯಾಣಿಕೆಯ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಅಂತೆಯೇ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗುತ್ತಿದ್ದು, ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಕೂಗು ಕೂಡ ಕೇಳಿಬರುತ್ತಿದೆ.
ಪ್ರಕರಣ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ (Jayanagar Police Station) ಎಫ್ಐಆರ್ ದಾಖಲಾಗಿದೆ. ಜೂನ್ 14 ರಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ದೂರಿನಲ್ಲೇನಿದೆ?
“ಯುವತಿ ಶ್ರೇಯಾ ಬಿಟಿಎಂ ಲೇಔಟ್‌ನಿಂದ ಜಯನಗರ 3ನೇ ಬ್ಲಾಕ್ಗೆ ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಬುಕ್ ಮಾಡಿದ್ದರು. ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಪಿಕಪ್ ಮಾಡಿಕೊಂಡು ಲೋಕೆಶನ್ಗೆ ಬಿಟ್ಟಿದ್ದಾರೆ. ನಂತರ ಶ್ರೇಯಾ “ಸಂಚಾರಿ ನಿಯಮ ಪಾಲಿಸದೆ ಬೈಕ್ ಚಲಾಯಿಸುವುದು ಕಾನೂನು ಬಾಹಿರ ಎಂದು ಚಾಲಕ ಸುಹಾಸ್ಗೆ ಹೇಳಿದ್ದಾರೆ.
ಆಗ, ಚಾಲಕ ಸುಹಾಸ್, ಶ್ರೇಯಾ ಜೊತೆ ಅಸಭ್ಯವಾಗಿ ವರ್ತಿಸಿ, ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ. ಶ್ರೇಯಾ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋವನ್ನು ನೋಡಿದ ಶ್ರೇಯಾ ಸ್ನೇಹಿತರು, ಚಾಲಕ ಸಹಾಸ್ ವಿರುದ್ಧ ದೂರು ನೀಡುವಂತೆ ಶ್ರೇಯಾಗೆ ಹೇಳಿದ್ದಾರೆ. ಶ್ರೇಯಾ ಚಾಲಕ ಸುಹಾಸ್ ವಿರುದ್ಧ ದೂರು ನೀಡಿದ್ದಾರೆ” ಎಂದು ಎಫ್ಐಆರ್ನಲ್ಲಿ ದಾಖಲಾಗಿದೆ.
ಶ್ರೇಯಾ ಅವರು ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಇಡೀ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಸಿಸಿಟಿವಿ
ಇನ್ನು ಈ ಪ್ರಕರಣದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಲೇ ಇತ್ತೀಚೆಗೆ ದೊರೆತ ಸಿಸಿಟಿವಿ ದೃಶ್ಯಾವಳಿ ಇಡೀ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ನೀಡಿದೆ.
ಚಾಲಕನ ಮೇಲೆ ಮೊದಲು ಹಲ್ಲೆ ಮಾಡಿದ್ದೇ ಮಹಿಳೆ
ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಪ್ರಕರಣದ ದೃಶ್ಯಾವಳಿ ಸೆರೆಯಾಗಿದ್ದು, ಬೈಕ್ ಚಾಲಕನ ಮೇಲೆ ಮೊದಲು ಹಲ್ಲೆ ಮಾಡಿದ್ದೇ ದೂರುದಾರ ಮಹಿಳೆ ಎಂದು ತಿಳಿದುಬಂದಿದೆ. ಜಯನಗರ 3ನೇ ಬ್ಲಾಕ್ನಲ್ಲಿ ಸ್ಕೂಟರ್ನಿಂದ ಕೆಳಗೆ ಇಳಿದ ತಕ್ಷಣ ಶ್ರೇಯಾ, ಚಾಲಕ ಸುಹಾಸ್ ಜೊತೆ ವಾಗ್ವಾದ ನಡೆಸಿದ್ದು, ಬಳಿಕ ನೋಡ ನೋಡುತ್ತಲೇ ಬೈಕ್ ಚಾಲಕ ಸುಹಾಸ್ ಗೆ ಹೊಡೆದಿದ್ದಾರೆ.
ಸುಹಾಸ್ರ ಬೆನ್ನಿಗೆ ಶ್ರೇಯಾ ಎರಡು ಬಾರಿ ಹೊಡೆದಿದ್ದು, ಆ ಬಳಿಕವಷ್ಟೇ ಸುಹಾಸ್ ಸ್ಕೂಟರ್ನಿಂದ ಕೆಳಗೆ ಇಳಿದಿದ್ದಾರೆ. ಆಗ ಶ್ರೇಯಾ, ಸುಹಾಸ್ ಕೆನ್ನೆಗೆ ಹೊಡೆದಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದರಿಂದ ಕೋಪಗೊಂಡ ಸುಹಾಸ್, ಶ್ರೇಯಾ ಕೆನ್ನೆಗೆ ಹೊಡೆದಿದ್ದಾರೆ.