ಬೆಂಗಳೂರು: ತಾಲೂಕು ಕಚೇರಿಯಲ್ಲಿ ಯಾವ್ಯಾವ ಕೆಲಸಕ್ಕೆ ಎಷ್ಟು ಹಣ ಎಂದು ಫಿಕ್ಸ್ ಮಾಡಿ, ರೇಟ್ ಬೋರ್ಡ್ ಹಾಕಿ ಬಿಡಿ ಎಂದು ಬೆಂಗಳೂರು ನಗರ ಕಂದಾಯ ಇಲಾಖೆ ಅಧಿಕಾರಿಗಳನ್ನು ಸಚಿವ ಕೃಷ್ಣ ಭೈರೇಗೌಡ ಅವರು ತರಾಟೆಗೆ ತೆಗೆದುಕೊಂಡ ಬೆಳವಣಿಗೆ ಗುರುವಾರ ಕಂಡು ಬಂದಿತು.
ನಗದರ ಕೆ.ಜಿ ರಸ್ತೆಯ ಕಂದಾಯ ಭವನದಲ್ಲಿರುವ ಬೆಂಗಳೂರು ದಕ್ಷಿಣ ತಾಲೂಕು ಕಚೇರಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಗುರುವಾರ ಅನಿರೀಕ್ಷಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಈ ವೇಳೆ ಆಡಳಿತ ಪ್ರಕ್ರಿಯೆಗಳಲ್ಲಿನ ಭ್ರಷ್ಟಾಚಾರ ಮತ್ತು ವಿಳಂಬದ ಕುರಿತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕ ಸರಣಿ ದೂರು ಹಿನ್ನೆಲೆಯಲ್ಲಿ ಸಚಿವರು ಬೆಂಗಳೂರು ದಕ್ಷಿಣ ತಾಲೂಕು ಕಚೇರಿ, ಉತ್ತರ ಸಹಾಯಕ ಆಯುಕ್ತರ (ಎಸಿ) ಕಚೇರಿ ಮತ್ತು ದಕ್ಷಿಣ ಎಸಿ ಕಚೇರಿಗೆ ಭೇಟಿ ನೀಡಿದರು.
ದಕ್ಷಿಣ ತಾಲೂಕು ಕಚೇರಿಯಲ್ಲಿ ಪರಿಶೀಲನೆಯ ಸಮಯದಲ್ಲಿ, ಕಡತ ತೆರವುಗೊಳಿಸುವಿಕೆಯಲ್ಲಿ ವಿಳಂಬಕ್ಕಾಗಿ ಸಚಿವ ಕೃಷ್ಣ ಭೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಯಾವ ಕೆಲಸಕ್ಕೆ ಎಷ್ಟು ಕೊಡಬೇಕು ಎಂದು ಒಂದು ದೊಡ್ಡ ಬೋರ್ಡ್ ಬರೆದು ಹಾಕಿಬಿಡಿ. ಜನ ಬದುಕಬೇಕಲ್ಲ, ಇಲ್ಲಿಗೆ ಬಂದು ಅಲೆದಾಡುವ ಬದಲು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಾರೆ. ಎಷ್ಟು ಕೊಡಬೇಕು ಎಂಬುದನ್ನು ನಾನಿಲ್ಲಿ ಹೇಳುವುದಿಲ್ಲ. ಅಲ್ಲಿ ನಿಂತಿರುವ ಜನರ ಬಳಿಗೆ ಹೋದರೆ ಅದನ್ನು ಹೇಳುತ್ತಾರೆ. ನಿಮ್ಮ ಎದುರೇ ಹೇಳಿಬಿಟ್ಟರೆ, ಅವರ ಕಡತಗಳನ್ನು ಏನು ಮಾಡಿಬಿಡುತ್ತೀರೋ ಎಂಬ ಭಯ ಜನರಿಗಿದೆ ಎಂದು ಅಧಿಕಾರಿಗಳ ಬೆವರಿಳಿಸಿದರು.
ಇದೇ ವೇಳೆ ಕಚೇರಿಗೆ ತಡವಾಗಿ ಆಗಮಿಸಿದ ಅಧಿಕಾರಿಯೊಬ್ಬರನ್ನು ತರಾಟೆ ತೆಗೆದುಕೊಂಡ ಸಚಿವರು, ''ಓ ನೀವು ಪಾಳೇಗಾರರು. ನಿಮ್ಮ ಕಾಲಿಗೆ ಬೀಳಬೇಕು ಮತ್ತು ಪಾದಪೂಜೆ ಮಾಡಬೇಕು. ಕೆಲಸದಲ್ಲಿ ವಿಳಂಬ ಏಕೆ ಮಾಡುತ್ತೀರಿ?'' ಎಂದು ಪ್ರಶ್ನಿಸಿದರು.
ಬಳಿಕ ಪಹಣಿ ತಿದ್ದುಪಡಿಗೆ ಜನವರಿಯಲ್ಲೇ ಆದೇಶವಾದರೂ ತಿದ್ದುಪಡಿ ಮಾಡದ ಉಪತಹಸೀಲ್ದಾರರ ಕಾರ್ಯವೈಖರಿಗೆ ಗರಂ ಆದ ಸಚಿವರು, ಆದೇಶವಾಗಿ ಆರು ತಿಂಗಳಾದರೂ ತಿದ್ದುಪಡಿ ಏಕೆ ಮಾಡಿಲ್ಲ. ಕೇಸ್ ವರ್ಕರ್ ಕಡತ ರವಾನಿಸಿಲ್ಲ ಎಂದಾದರೆ ನೀವೇ ಸೂಚಿಸಿ ತರಿಸಿಕೊಂಡು ಕೆಲಸ ಮಾಡಬಹುದಲ್ಲ ಎಂದು ಹೇಳಿದರು.
ಸಮಯಕ್ಕೆ ಸರಿಯಾಗಿ ಕಚೇರಿಗಳಿಗೆ ಆಗಮಿಸದ ಹಾಗೂ ಕರ್ತವ್ಯದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದ ಅಧಿಕಾರಿಗಳನ್ನು ಸಚಿವರು ಹಿಗ್ಗಾಮುಗ್ಗಾ ತರಾಟೆ ತೆಗೆದುಕೊಂಡರು. ಸಚಿವರು ಅಧಿಕಾರಿಗಳನ್ನು ಪ್ರಶ್ನಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಕಂದಾಯ ಸಚಿವರಾದ ಬಳಿಕ ಇಲಾಖೆಯ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿರುವ ಕೃಷ್ಣ ಬೈರೇಗೌಡ, ಆಗಾಗ ಈ ರೀತಿ ದಿಢೀರ್ ಭೇಟಿ ನೀಡಿ ಅಧಿಕಾರಿಗಳನ್ನು ಪೇಚಿಗೆ ಸಿಲುಕಿಸುತ್ತಿರುತ್ತಾರೆ. ಆದರೂ ದಪ್ಪ ಚರ್ಮದ ಅಧಿಕಾರಿಗಳು ಸುಧಾರಿಸುತ್ತಿಲ್ಲ.
ನಂತರ ರೆಕಾರ್ಡ್ ಕೊಠಡಿಗೆ ಭೇಟಿ ನೀಡಿ ದಾಖಲೆ ಸ್ಕ್ಯಾನಿಂಗ್ ಕಾರ್ಯವನ್ನು ಪರಿಶೀಲಿಸಿದರು. ಪ್ರತಿದಿನ ಎಷ್ಟು ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಬೇರೆ ತಾಲ್ಲೂಕುಗಳಿಗಿಂತ ಕಡಿಮೆ ಪ್ರಮಾಣದ ದಾಖಲೆಗಳನ್ನು ಈ ಕಚೇರಿಯಲ್ಲಿ ಮಾಡಲಾಗುತ್ತಿದೆ. ಸ್ಕ್ಯಾನ್ ಆಗಿರುವ ದಾಖಲೆಗಳನ್ನು ತೋರಿಸಿ ಎಂದು ಸಿಬ್ಬಂದಿಯನ್ನು ಸಚಿವರು ಕೇಳಿದರು.
ಆಗ ಸಿಬ್ಬಂದಿ ವಿಚಲಿತರಾದರು. ಆಗ ‘ತಮಗೆ ಯಾವ ಕೆಲಸವನ್ನು ನೀಡಲಾಗಿದೆ’ ಎಂದು ಇಲ್ಲಿನ ಸಿಬ್ಬಂದಿಗಳಿಗೆ ತಿಳಿದಿಲ್ಲ ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನಂತರ ಹಾಜರಾತಿ ಪುಸ್ತಕ ತೆಗೆದುಕೊಂಡ ಸಚಿವರು, ಒಬ್ಬೊಬ್ಬ ಸಿಬ್ಬಂದಿಯ ಹೆಸರು ಕೂಗಿ ಹಾಜರಾತಿ ತೆಗೆದುಕೊಂಡರು. ಈ ವೇಳೆ ಅನೇಕ ಸಿಬ್ಬಂದಿ ತಮ್ಮ ಕುರ್ಚಿಯಲ್ಲಿ ಇಲ್ಲದನ್ನು ಗಮನಿಸಿ ಜಿಲ್ಲಾಧಿಕಾರಿಯವರ ಮೂಲಕ ನೋಟ್ ಮಾಡಿಸಿದರು. ಕೆಲಸದ ಮೇಲೆ ಬೇರೆ ಬೇರೆ ಕಚೇರಿಗಳಿಗೆ ಹೋಗಿದ್ದಾರೆ ಎಂದು ಕಾರಣ, ನೆಪಗಳನ್ನು ಹಾಜರಿದ್ದ ಕೆಲ ಸಿಬ್ಬಂದಿ ನೀಡಿದರು. ಗೈರು ಹಾಜರಾಗಿದ್ದ ಸಿಬ್ಬಂದಿಯ ಹಾಜರಾತಿಯನ್ನು ಬೇರೊಬ್ಬರು ಹಾಕಿರುವುದನ್ನು ಸಚಿವ ಕೃಷ್ಣ ಬೈರೇಗೌಡ ಪತ್ತೆ ಮಾಡಿದರು. ಕೆಲಸದ ಮೇಲೆ ಹೊರಗೆ ಹೋದಾಗ ಮೂವ್ಮೆಂಟ್ ರಿಜಿಸ್ಟರ್‌ನಲ್ಲಿ ನಮೂದಿಸಬೇಕಲ್ಲವೇ ಎಂದು ಕೇಳಿದರು.