ಕಲಬುರಗಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ತಮ್ಮ ಮನ್ ಕಿ ಬಾತ್ ಭಾಷಣದಲ್ಲಿ ಕಲಬುರಗಿ ರೊಟ್ಟಿಗಳ ಬಗ್ಗೆ ಪ್ರಸ್ತಾಪಿಸಿದ ಕೆಲವೇ ಗಂಟೆಗಳಲ್ಲಿ ಕಲಬುರಗಿ ರೊಟ್ಟಿ ಉತ್ಪಾದಕರ ಸಹಕಾರ ಸಂಘ ಅಮೆಜಾನ್ ಮೂಲಕ 60 ಕ್ಕೂ ಹೆಚ್ಚು ಆರ್ಡರ್‌ಗಳನ್ನು ಪಡೆದುಕೊಂಡು ಭಾರಿ ಡಿಮ್ಯಾಂಡ್ ಬಂದಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಕಾಮ್ ಕಿ ಬಾತ್- ಯಶಸ್ಸಿನ ಹಿಂದೆ ರಾಜ್ಯ ಸರ್ಕಾರದ ಶ್ರಮವಿದೆ ಎಂದು ಹೇಳಿದ್ದಾರೆ.
ಕಲಬುರಗಿ ಮಹಿಳೆಯರಲ್ಲಿನ ಕೌಶಲ್ಯಕ್ಕೆ ಉತ್ತಮ ಮಾರುಕಟ್ಟೆ ಒದಗಿಸಿ ಮೌಲ್ಯವರ್ಧನೆಗೆ ಸಹಾಯಕವಾಗಿ ನಿಂತಿದ್ದು ಕಲಬುರಗಿಯ ಜಿಲ್ಲಾಡಳಿತ. ರೊಟ್ಟಿಗಳಿಗೆ ಆನ್ಲೈನ್ ಮಾರುಕಟ್ಟೆ ಸೃಷ್ಟಿಸಿ, ಅದಕ್ಕೊಂದು ಬ್ರ್ಯಾಂಡ್ ರೂಪಿಸಿ, ದೊಡ್ಡ ಮಟ್ಟದ ಗ್ರಾಹಕ ವರ್ಗವನ್ನು ಸೃಷ್ಟಿಸಿದ ಪರಿಣಾಮ “ಕಲಬುರಗಿ ರೊಟ್ಟಿ”ಗಳು ಇಂದು ಮಹಿಳೆಯರ ಸ್ವಾವಲಂಬಿ ಬದುಕಿಗೆ ಶಕ್ತಿ ಒದಗಿಸಿದೆ. ರೊಟ್ಟಿಗಳ ಘಮ ಪ್ರಧಾನಿಯವರಿಗೂ ತಲುಪಿದೆ! ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಸಂತಸ ಸೂಚಿಸಿದ್ದಾರೆ.
ನಮ್ಮ ‘ಕಾಮ್ ಕಿ ಬಾತ್’ನ ಯಶಸ್ಸನ್ನು ಪ್ರಧಾನಿಯವರು ‘ಮನ್ ಕಿ ಬಾತ್’ ನಲ್ಲಿ ಪ್ರಸ್ತಾಪಿಸಿದ್ದಾರೆ ಎಂದಿದ್ದಾರೆ. ಅಲ್ಲದೇ ಕಲಬುರಗಿ ರೊಟ್ಟಿಯ ಯಶಸ್ಸಿನ ಕಥೆಯ ಹಿಂದೆ ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮಗಳನ್ನು ವಿವರಿಸಿದ್ದಾರೆ.
ಬ್ರ್ಯಾಂಡಿಂಗ್ ಗಾಗಿ ರಾಜ್ಯ ಸರ್ಕಾರ ಸೀಡ್ ಫಂಡ್ ಒದಗಿಸಿದೆ - ಸ್ವಸಹಾಯ ಸಂಘಗಳು ಹಾಗೂ ಇತರ ಉತ್ಸಾಹಿ ಮಹಿಳೆಯರಿಗೆ ಸಬ್ಸಿಡಿಯಲ್ಲಿ ಸುಮಾರು 150 ರೊಟ್ಟಿ ಯಂತ್ರಗಳನ್ನು ಒದಗಿಸಲಾಗಿದೆ. ಸಿ.ಎಸ್.ಆರ್ ನಿಧಿಯ ಮೂಲಕ ₹6.5 ಲಕ್ಷ ಒದಗಿಸಲಾಗಿದೆ. ಪ್ಯಾಕಿಂಗ್, ಲೇಬಲಿಂಗ್ ಮತ್ತು ಬ್ರ್ಯಾಂಡಿಂಗ್ ನಲ್ಲಿ ನೆರವು ನೀಡಲಾಗುತ್ತಿದೆ - ಹೊರ ರಾಜ್ಯಗಳಲ್ಲೂ ಮಾರುಕಟ್ಟೆ ವಿಸ್ತರಿಸಲಾಗುತ್ತಿದೆ - ವಿದೇಶಗಳಿಗೆ ರಫ್ತ್ತು ಮಾಡುವ ಸಾಧ್ಯತೆಗಳ ಬಗ್ಗೆ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಸ್ವಿಗ್ಗಿ, ಜೋಮೊಟೊ, ಆಮೇಜಾನ್ ಸೇರಿದಂತೆ ಹಲವು ಪ್ರಸಿದ್ಧ ವೇದಿಕೆಗಳಲ್ಲೂ ಮಾರುಕಟ್ಟೆ ಸೃಷ್ಟಿಸಿಲಾಗಿದೆ ಇದು ಕಾಂಗ್ರೆಸ್ ಸರ್ಕಾರದ “ಕಾಮ್ ಕಿ ಬಾತ್”! ರಿಪಬ್ಲಿಕ್ ಆಫ್ ಕಲಬುರಗಿ' ಎನ್ನುತ್ತಿದ್ದ ಬಿಜೆಪಿ ನಾಯಕರಿಗೆ ಸ್ವತಃ ಪ್ರಧಾನಿಗಳೇ 'ಸಕ್ಸಸ್ ಸ್ಟೋರಿಸ್ ಆಫ್ ಕಲಬುರಗಿ' ಎಂಬ ಉತ್ತರ ನೀಡಿದ್ದಾರೆ ಎಂದು ಸಚಿವರು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.