ಡಿ.ಕೆ ಶಿವಕುಮಾರ್ 
ರಾಜ್ಯ

ಸಂಚಾರ ದಟ್ಟಣೆ ಸಮಸ್ಯೆಗೆ ಟನಲ್ ರಸ್ತೆ, ಡಬಲ್ ಡೆಕ್ಕರ್ ಎಲಿವೇಟೆಡ್ ಕಾರಿಡಾರ್ ಮೂಲಕ ಪರಿಹಾರ: DCM

ಬೆಂಗಳೂರು ನವದೆಹಲಿ ರೀತಿ ಯೋಜಿತ ನಗರವಲ್ಲ. ಮಲ್ಲೇಶ್ವರ, ಜಯನಗರ, ಇಂದಿರಾನಗರದಂತಹ ಕೆಲವು ಬಡಾವಣೆಗಳು ಮಾತ್ರ ಯೋಜಿತವಾಗಿ ರೂಪುಗೊಂಡಿವೆ.

ಬೆಂಗಳೂರು: ಬೆಂಗಳೂರಿನ ಸಂಚಾರ ದಟ್ಟಣೆ ಸಮಸ್ಯೆ ನಿವಾರಣೆಗಾಗಿ ರಾಜ್ಯ ಸರ್ಕಾರವು ಟನಲ್ ರಸ್ತೆ, ಡಬಲ್ ಡೆಕ್ಕರ್ ಮೇಲ್ಸೇತುವೆ, ಬಫರ್ ರೋಡ್, ಎಲಿವೇಟೆಡ್ ಕಾರಿಡಾರ್, ಬೆಂಗಳೂರು ಬಿಸಿನೆಸ್ ಕಾರಿಡಾರ್ ಸೇರಿದಂತೆ ಅನೇಕ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯರಾದ ಸುಧಾಮ್ ದಾಸ್ ಅವರು ಬೆಂಗಳೂರಿನ ಸಂಚಾರಿ ದಟ್ಟಣೆ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಗುರುವಾರ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಶಿವಕುಮಾರ್ ಅವರು, “ಬೆಂಗಳೂರಿನ ಸಮಸ್ಯೆ, ಜನಸಂಖ್ಯೆ ದಟ್ಟಣೆ ವಿಚಾರವಾಗಿ ಸದಸ್ಯರಾದ ಸುಧಾಮ್ ದಾಸ್ ಅವರು ಆತಂಕ ವ್ಯಕ್ತಪಡಿಸಿದ್ದಾರೆ. ನಾನು ಬಹಳ ಗಂಭೀರವಾಗಿ ಬೆಂಗಳೂರಿನ ಜವಾಬ್ದಾರಿ ವಹಿಸಿಕೊಂಡಿದ್ದೇನೆ.

ಬೆಂಗಳೂರು ನವದೆಹಲಿ ರೀತಿ ಯೋಜಿತ ನಗರವಲ್ಲ. ಮಲ್ಲೇಶ್ವರ, ಜಯನಗರ, ಇಂದಿರಾನಗರದಂತಹ ಕೆಲವು ಬಡಾವಣೆಗಳು ಮಾತ್ರ ಯೋಜಿತವಾಗಿ ರೂಪುಗೊಂಡಿವೆ. ಈ ಹಿಂದೆ ಬಿಎಂಐಸಿಪಿ ರಸ್ತೆ ಆದ ಕಾರಣ ಸಂಚಾರ ದಟ್ಟಣೆ ಸ್ವಲ್ಪ ಮಟ್ಟಿಗೆ ನಿಯಂತ್ರಣವಾಗಿದೆ.

ಇಲ್ಲದಿದ್ದರೆ ಪರಿಸ್ಥಿತಿ ಇನ್ನು ಹದಗೆಡುತ್ತಿತ್ತು. ಈಗ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಪಿಆರ್ ಆರ್ ಯೋಜನೆ ಮಾಡಲು 2006ರಲ್ಲಿ ಅಧಿಸೂಚನೆ ಹೊರಡಿಸಿದ್ದರೂ ನಂತರ ಅದು ಮುಂದಕ್ಕೆ ಸಾಗಲಿಲ್ಲ. ಆಗಲೇ ಮಾಡಿದ್ದರೆ 2-3 ಸಾವಿರ ಕೋಟಿಯಲ್ಲಿ ಯೋಜನೆ ಪೂರ್ಣಗೊಳ್ಳುತ್ತಿತ್ತು ಎಂದರು.

ಈಗ ಪಿಆರ್ ಆರ್ ಯೋಜನೆಗೆ ಹುಡ್ಕೋ ಮೂಲಕ 26 ಸಾವಿರ ಕೋಟಿ ಸಾಲ ಪಡೆದು ರೈತರನ್ನು ಒಪ್ಪಿಸಿ ಬೆಂಗಳೂರು ಬಿಸಿನೆಸ್ ಕಾರಿಡಾರ್ ಮಾಡಲು ಮುಂದಾಗಿದ್ದೇವೆ. ಸಂಚಾರ ದಟ್ಟಣೆ ಸಮಸ್ಯೆ ಬಗೆಹರಿಸಲು ರಸ್ತೆ ಅಗಲೀಕರಣ ಮಾಡಬಹುದೆ, ಅಥವಾ ಬೇರೆ ಅವಕಾಶಗಳಿವೆಯೇ ಎಂದು ಆಲೋಚನೆ ಮಾಡಿದ್ದೇವೆ. ಈ ಹಿಂದೆ ಜಾರ್ಜ್ ಅವರು ಸಚಿವರಾಗಿದ್ದಾಗ ಸ್ಟೀಲ್ ಬ್ರಿಡ್ಜ್ ಮಾಡಲು ಹೋದಾಗ ಗಲಾಟೆ ಮಾಡಿ ಅದನ್ನು ನಿಲ್ಲಿಸಿದರು. ಈಗ ಅದರ ತೊಂದರೆ ಅನುಭವಿಸುತ್ತಿದ್ದೇವೆ.

ಈಗ ಈ ಸಮಸ್ಯೆಗೆ ಪರಿಹಾರವಾಗಿ ಬೆಂಗಳೂರು ನಗರದ ಪೂರ್ವದಿಂದ ಪಶ್ಚಿಮಕ್ಕೆ (17 ಕಿ.ಮೀ), ದಕ್ಷಿಣದಿಂದ ಉತ್ತರಕ್ಕೆ (23 ಕಿ.ಮೀ) 40 ಕಿ.ಮೀ ಉದ್ದದ ಸುರಂಗ ರಸ್ತೆ ಮಾಡಲು ಹೊರಟಿದ್ದೇವೆ. ಬೆಂಗಳೂರು ನಗರದಲ್ಲಿ ಇದು ಮೊದಲ ಪ್ರಯತ್ನವಾಗಿದೆ. ಇದರ ಮೊದಲ ಹಂತದ ಯೋಜನೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುತ್ತಿದೆ. ಅತಿಲೋಕ್ ಇಂಜಿನಿಯರಿಂಗ್ ಸಂಸ್ಥೆ ಡಿಪಿಆರ್ ಸಿದ್ಧಪಡಿಸಿದ್ದು, ಸರ್ಕಾರ ಅದಕ್ಕೆ ಅನುಮತಿ ನೀಡಿದೆ ಎಂದು ತಿಳಿಸಿದರು.

ಇನ್ನು ಬೆಂಗಳೂರಿನಲ್ಲಿ ಹೊಸ ಪ್ರಯೋಗದ ಮೂಲಕ ಎಲ್ಲೆಲ್ಲಿ ಹೊಸ ಮೆಟ್ರೋ ಮಾರ್ಗಗಳು ಬರುತ್ತಿವೆಯೋ ಅಲ್ಲಿ 44.3 ಕಿ.ಮೀ ಉದ್ಧದ ಡಬಲ್ ಡೆಕ್ಕರ್ ಮೇಲ್ಸೆತುವೆ ಮೂಲಕ ಮೇಲ್ಸೆತುವೆ ಹಾಗೂ ಮೆಟ್ರೋ ಮಾರ್ಗ ಮಾಡಲಾಗುತ್ತಿದೆ. ಈ ಯೋಜನೆಗೆ ಪಾಲಿಕೆ ಹಾಗೂ ಬಿಎಂಆರ್ ಸಿಎಲ್ 50:50 ಅನುಪಾತದಲ್ಲಿ ವೆಚ್ಚ ಭರಿಸಲಿವೆ.

ಪ್ರತಿ ಕಿ.ಮೀಗೆ ರೂ.120 ಕೋಟಿ ವೆಚ್ಚವಾಗಲಿದ್ದು, ಈ ಯೋಜನೆಗೆ ಒಟ್ಟು ರೂ.9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇನ್ನು ಸಿಗ್ನಲ್ ಮುಕ್ತ ಎಲಿವೇಟೆಡ್ ಕಾರಿಡಾರ್ ಮೂಲಕ ವಾಹನ ದಟ್ಟಣೆ ನಿಯಂತ್ರಣಕ್ಕೆ ಮುಂದಾಗಿದ್ದೇವೆ.

ಗಾಳಿ ಆಂಜನೇಯ ಸ್ವಾಮಿ ದೇವಾಲಯದ ಬಳಿ ಕಾಜಕಾಲುವೆ ಮೇಲೆ ರಸ್ತೆ ಮಾಡಿರುವ ರೀತಿ ರಸ್ತೆ ಮಾಡಲು ಎನ್ ಜಿಟಿಯಿಂದ ಅನುಮತಿ ಸಿಗುತ್ತಿಲ್ಲ ಹೀಗಾಗಿ ರಾಜಕಾಲುವೆ ಅಕ್ಕಪಕ್ಕದ ಬಫರ್ ಪ್ರದೇಶದಲ್ಲಿ 50 ಅಡಿಯ 300 ಕಿ.ಮೀ ಉದ್ದದ ಹೊಸ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇವೆ.

ಇದಕ್ಕಾಗಿ 3 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಐಟಿಪಿಎಲ್, ಥಣಿಸಂಧ್ರ, ಆರ್ ಆರ್ ನಗರ ಸೇರಿದಂತೆ ಇತರೆ ಭಾಗಗಳಲ್ಲಿ ಟಿಡಿಆರ್ ನೀಡಿ ರಸ್ತೆ ನಿರ್ಮಾಣ ಮಾಡಲಾಗುವುದು. ಹೆಬ್ಬಾಳದಿಂದ ಹೆಣ್ಣೂರು ಮಾರ್ಗದಲ್ಲಿ 7.8 ಕಿ.ಮೀ ರಸ್ತೆ ನಿರ್ಮಾಣಕ್ಕೆ ನೋಟಿಫಿಕೇಶನ್ ಕೂಡ ಹೊರಡಿಸಲಾಗಿದೆ. ಆ ಮೂಲಕ ಬೆಂಗಳೂರಿನಲ್ಲಿ 320 ಕಿ.ಮೀ ಹೊಸ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ವಿವರಣೆ ನೀಡಿದರು.

1682 ಕಿ.ಮೀ ಉದ್ದದಷ್ಟು ರಸ್ತೆಗಳನ್ನು ವೈಟ್ ಟ್ಯಾಪಿಂಗ್ ಮಾಡಲಾಗುತ್ತಿದ್ದು, 30 ವರ್ಷಗಳ ಕಾಲ ಬಾಳಿಕೆ ಬರುವ ನಿರ್ವಹಣೆ ಮುಕ್ತ ರಸ್ತೆಗಳನ್ನು ಮಾಡಲಾಗಿದೆ. ಈ ಯೋಜನೆಗಳಿಗೆ 9 ಸಾವಿರ ಕೋಟಿ ಅನುದಾನ ನೀಡಲಾಗಿದೆ. ಇನ್ನು 850 ಕಿ.ಮೀ ಉದ್ದದ ಮಳೆನೀರುಗಾಲುವೆಗಾಗಿ ವಿಶ್ವಬ್ಯಾಂಕ್ ನಿಂದ 2 ಸಾವಿರ ಕೋಟಿ ಹಣ ಪಡೆಯಲಾಗಿದೆ.

ಈ ಪೈಕಿ 480 ಕಿ.ಮೀ ಪೂರ್ಣಗೊಂಡಿದ್ದು, 175 ಕಿ.ಮೀ ಉದ್ದದ ಕಾಮಗಾರಿ ನಡೆಯುತ್ತಿದೆ. ಉಳಿದ 173 ಕಿ.ಮೀ ಉದ್ದದ ಕಾಮಗಾರಿ ಮುಂದೆ ಕೈಗೆತ್ತಿಕೊಳ್ಳುತ್ತೇವೆ. ಆ ಮೂಲಕ ಬೆಂಗಳೂರಿನಲ್ಲಿ ಪೂರ್ಣಪ್ರಮಾಣದಲ್ಲಿ ಯೋಜನೆ ಮುಕ್ತಾಯವಾಗಲಿದೆ ಎಂದು ತಿಳಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

SCROLL FOR NEXT