ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮಳೆರಾಯ ಕಳೆದ ಎರಡು ದಿನಗಳಿಂದ ಆರ್ಭಟಿಸುತ್ತಿದ್ದು, ಶನಿವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಸಿಲಿಕಾನ್ ಸಿಟಿಯ ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.
ಇಂದು ಸಂಜೆ 6:30 ಸುಮಾರಿಗೆ ಆರಂಭವಾದ ಮಳೆ ರಾತ್ರಿ 8:30ರ ವರೆಗೆ ಧಾರಾಕಾರವಾಗಿ ಸುರಿದಿದೆ. ಬೆಂಗಳೂರಿನ ಶಾಂತಿನಗರ, ರಿಚ್ಮಂಡ್ ಸರ್ಕಲ್, ಕಾರ್ಪೊರೇಷನ್, ಕಬ್ಬನ್ಪಾರ್ಕ್, ಚಿನ್ನಸ್ವಾಮಿ ಕ್ರೀಡಾಂಗಣ, ವಿಧಾನಸೌಧ, ಕೆ.ಆರ್.ಮಾರ್ಕೆಟ್, ಮೆಜೆಸ್ಟೆಕ್, ರಾಜಾಜಿನಗರ, ಲಾಲ್ಬಾಗ್, ಜಯನಗರ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದೆ.
ಭಾರಿ ಮಳೆಯಿಂದಾಗಿ ನಗರದ ಹಲವು ರಸ್ತೆಗಳು ಕೆರೆಯಂತಾಗಿದ್ದು, ಚಿನ್ನಸ್ವಾಮಿ ಕ್ರೀಡಾಂಗಣ ಸೇರಿದಂತೆ ಹಲವು ಕಡೆ ಕಿಲೋಮೀಟರ್ ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದೆ.
ಹೆಬ್ಬಾಳದಲ್ಲಿ ಮಳೆ ಬರುತ್ತಿರುವುದರಿಂದ ವೀರಣ್ಣಪಾಳ್ಯ ಕಡೆಯಿಂದ ಹೆಬ್ಬಾಳ ಕಡೆ ಹೋಗುವ ರಸ್ತೆಯಲ್ಲಿ ತೀವ್ರ ಸಂಚಾರದಟ್ಟಣೆ ಉಂಟಾಗಿದೆ. ಹಾಗೆ, ವರ್ತೂರು ಕಡೆಯಿಂದ, ವೈಟಫಿಲ್ಡ್ ಕಡೆಗೆ ಹೋಗುವ ಮಾರ್ಗದಲ್ಲಿ, ಕಸ್ತೂರಿನಗರ ಕಡೆಯಿಂದ ಹೆಬ್ಬಾಳ ಮುಖ್ಯ ರಸ್ತೆಯ ಕಡೆಗೆ ಹೋಗುವ ಮಾರ್ಗದಲ್ಲಿ, ಬಾಗಲೂರು ಕಡೆಯಿಂದ ನಗರ ಮತ್ತು ವಿಮಾನ ನಿಲ್ದಾಣದ ಕಡೆಗೆ ಸಂಚರಿಸುವ ರಸ್ತೆಯಲ್ಲಿ ಮತ್ತು ನ್ಯಾಷನಲ್ ಗೇಮ್ಸ್ ವಿಲೇಜ್ ಗೆಟ್ನಿಂದ ಸೋನಿ ವರ್ಲ್ಡ್ ಜಂಕ್ಷನ್ ಕಡೆಗೆ ಹೋಗುವ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಿಧಾನವಾಗಿ ಚಲಿಸುವಂತೆ ಬೆಂಗಳೂರು ಸಂಚಾರಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ರಾತ್ರಿ ವಾರ್ ರೂಮ್ ಗೆ ಡಿಸಿಎಂ ಭೇಟಿ
ಇಂದು ರಾತ್ರಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಉಂಟಾಗಿರುವ ಅವಾಂತರಗಳ ಬಗ್ಗೆ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು, ನಾನು ಪ್ರವಾಸದಿಂದ ಈಗ ಬಂದಿದ್ದೇನೆ. ರಾತ್ರಿ ವಾರ್ ರೂಮ್ ಗೆ ಭೇಟಿ ನೀಡುತ್ತೇನೆ ಎಂದರು.
ಇಂದು ರಾತ್ರಿ 10 ಗಂಟೆಗೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ವಾರ್ ರೂಮ್ ಗೆ ಭೇಟಿ ನೀಡಿ, ಪರಿಶೀಲಿಸುತ್ತೇನೆ ಎಂದು ಡಿಸಿಎಂ ತಿಳಿಸಿದ್ದಾರೆ.