ತಮನ್ನಾ ಭಾಟಿಯಾ  
ರಾಜ್ಯ

ಮೈಸೂರು ಸ್ಯಾಂಡಲ್ ಸೋಪ್​ಗೆ Tamannaah Bhatia ರಾಯಭಾರಿ: ಸರ್ಕಾರದ ನಿರ್ಧಾರಕ್ಕೆ ಭಾರೀ ಟೀಕೆ, ಕರವೇ ಪ್ರತಿಭಟನೆ ಎಚ್ಚರಿಕೆ!

ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಮತ್ತು ಜನಪ್ರಿಯ ಕನ್ನಡ ನಟಿಯರು ಇದ್ದಾರೆ. ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದರೆ, ಕನ್ನಡಿಗರ ಮನಸ್ಸಿಗೆ ಹತ್ತಿರವಾಗುವುದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಬಹುದಾಗಿತ್ತು.

ಬೆಂಗಳೂರು: ರಾಜ್ಯ ಸರ್ಕಾರ ಒಡೆತನದ ಮೈಸೂರು ಸ್ಯಾಂಡಲ್‌ಸೋಪ್ ಗೆ ಟಾಲಿವುಡ್ ನಟಿ ತಮನ್ನಾ ಭಾಟಿಯಾ ರಾಯಭಾರಿಯಾಗಿದ್ದು, ಸರ್ಕಾರ ಈ ನಿರ್ಧಾರ ಎಲ್ಲರ ಹುಬ್ಬೇರುವಂತೆ ಮಾಡಿದೆ.

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿದ್ದು, ಈ ನಿರ್ಧಾರ ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ ಎಂದ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ನಾರಾಯಣ ಗೌಡ ಅವರು ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ತನ್ನ ಬ್ರಾಂಡ್ ಅಂಬಾಸೆಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರನ್ನು 6.2 ಕೋಟಿ ರೂಪಾಯಿ ತೆತ್ತು ನೇಮಕ ಮಾಡಿರುವುದು ಅವಿವೇಕದ, ಅಸಂಬದ್ಧ, ಅನೈತಿಕ, ಬೇಜವಾಬ್ದಾರಿಯುತ ತೀರ್ಮಾನವಾಗಿದೆ. ಮೈಸೂರು ಸೋಪ್ಸ್ ಸಂಸ್ಥೆ ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿ. 1916ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜ ಕೃಷ್ಣರಾಜ ಒಡೆಯರ್ ಅವರು ಸ್ಥಾಪಿಸಿದರು. ಈ ಕಂಪನಿಯು ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ ಮತ್ತು ಇದರ ಪ್ರಾಥಮಿಕ ಗ್ರಾಹಕರು ಕನ್ನಡಿಗರಾಗಿದ್ದಾರೆ ಎನ್ನುವ ಕನಿಷ್ಠ ತಿಳಿವಳಿಕೆ ಈ ನೇಮಕ ಮಾಡುವಾಗ ಇರಲಿಲ್ಲವೇ? ಐತಿಹಾಸಿಕ ಮತ್ತು ಸಾಂಸ್ಕೃತಿಕ ಮೌಲ್ಯವುಳ್ಳ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್ ನಟಿ ತಮನ್ನಾ ಭಾಟಿಯಾ ಅವರೇ ಬೇಕಿತ್ತೆ? ಎಂದು ಪ್ರಶ್ನಿಸಿದ್ದಾರೆ.

ಈ ನೇಮಕಕ್ಕಾಗಿ ಕರ್ನಾಟಕ ಸರ್ಕಾರವು 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಇನ್ನಷ್ಟು ಆಕ್ಷೇಪಾರ್ಹವಾಗಿದೆ. ಈ ನಿರ್ಧಾರದ ವಿರುದ್ಧ ನಮ್ಮ ತೀವ್ರ ವಿರೋಧವನ್ನು ಈ ಮೂಲಕ ದಾಖಲಿಸುತ್ತೇವೆ. ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಕರ್ನಾಟಕ ಸರ್ಕಾರದ ಸ್ವಾಮ್ಯದ ಕಂಪನಿಯಾಗಿದೆ. ಈ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ತಮನ್ನಾ ಭಾಟಿಯಾ ಅವರನ್ನು ನೇಮಿಸಲು ಸರ್ಕಾರವು 6.20 ಕೋಟಿ ರೂಪಾಯಿಗಳ ಭಾರೀ ಮೊತ್ತವನ್ನು ವ್ಯಯಿಸಿರುವುದು ಸಂಪೂರ್ಣವಾಗಿ ಅನಗತ್ಯ ಮತ್ತು ಜವಾಬ್ದಾರಿಯಿಲ್ಲದ ನಿರ್ಧಾರವಾಗಿದೆ. ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ, ಉದಾಹರಣೆಗೆ ಶಿಕ್ಷಣ, ಆರೋಗ್ಯ, ಅಥವಾ ಉದ್ಯೋಗ ಸೃಷ್ಟಿಗೆ ಬಳಸಬಹುದಾಗಿತ್ತು. ಸರ್ಕಾರವು ಜನರ ತೆರಿಗೆ ಹಣವನ್ನು ಈ ರೀತಿ ವ್ಯರ್ಥವಾಗಿ ಖರ್ಚು ಮಾಡಿರುವುದು ಖಂಡನೀಯವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಅನೇಕ ಪ್ರತಿಭಾವಂತ ಮತ್ತು ಜನಪ್ರಿಯ ಕನ್ನಡ ನಟಿಯರು ಇದ್ದಾರೆ. ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ನೇಮಿಸಿದರೆ, ಕನ್ನಡಿಗರ ಮನಸ್ಸಿಗೆ ಹತ್ತಿರವಾಗುವುದರ ಜೊತೆಗೆ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹ ನೀಡಬಹುದಾಗಿತ್ತು. ಆದರೆ ಕರ್ನಾಟಕ ಸರ್ಕಾರ ಮತ್ತು ಮೈಸೂರು ಸೋಪ್ಸ್ ಕಂಪನಿಯು ಕನ್ನಡ ನಟಿಯರನ್ನು ಕಡೆಗಣಿಸಿ ಬಾಲಿವುಡ್ ನಟಿಯನ್ನು ಆಯ್ಕೆ ಮಾಡಿರುವುದು ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಿದೆ. ಕರ್ನಾಟಕದ ಸಾಂಸ್ಕೃತಿಕ ಗುರುತನ್ನು ಪ್ರತಿನಿಧಿಸುವ ಕಂಪನಿಯು ಸ್ಥಳೀಯ ಪ್ರತಿಭೆಗಳಿಗೆ ಮೊದಲ ಆದ್ಯತೆ ನೀಡಬೇಕಿತ್ತು.

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಪ್ರಾಥಮಿಕ ಗ್ರಾಹಕರು ಕರ್ನಾಟಕದ ಕನ್ನಡಿಗರಾಗಿದ್ದಾರೆ. ಕನ್ನಡಿಗರಿಗೆ ತಮ್ಮ ಸಂಸ್ಕೃತಿ ಮತ್ತು ಭಾಷೆಯೊಂದಿಗೆ ಸಾವಯವ ಸಂಬಂಧವಿರುವ ಕನ್ನಡ ನಟಿಯರೊಂದಿಗೆ ಬ್ರಾಂಡ್ ಅನ್ನು ಬೆಳೆಸುವುದು ಸಹಜವಾಗಿ ಪರಿಣಾಮಕಾರಿಯಾಗಿರುತ್ತದೆ. ಆದರೆ ತಮನ್ನಾ ಭಾಟಿಯಾ ಅವರಂತಹ ಬಾಲಿವುಡ್ ನಟಿಯನ್ನು ಆಯ್ಕೆ ಮಾಡುವ ಮೂಲಕ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮತ್ತು ಸ್ಥಳೀಯ ಮಾರುಕಟ್ಟೆಯ ಸಂವೇದನೆಗೆ ಗೌರವ ನೀಡದಿರುವುದು ಆಕ್ಷೇಪಾರ್ಹವಾಗಿದೆ ಎಂದು ತಿಳಿಸಿದ್ದಾರೆ.

ತಮನ್ನಾ ಭಾಟಿಯಾ ಅವರು ಕರ್ನಾಟಕದ ಸಂಸ್ಕೃತಿ, ಭಾಷೆ, ಅಥವಾ ಮೈಸೂರು ಸೋಪ್ಸ್‌ನ ಇತಿಹಾಸದೊಂದಿಗೆ ಯಾವುದೇ ನೇರ ಸಂಬಂಧ ಹೊಂದಿಲ್ಲ. ಇಂತಹ ಸ್ಥಿತಿಯಲ್ಲಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡುವುದು ಸಂಪೂರ್ಣವಾಗಿ ಅಪ್ರಸ್ತುತವಾಗಿದೆ. ಹಿಂದಿ ಚಿತ್ರರಂಗದ ನಟಿಯರನ್ನು ಆಯ್ಕೆ ಮಾಡುವ ಮೂಲಕ ಕರ್ನಾಟಕದ ಸ್ಥಳೀಯ ಸಂಸ್ಕೃತಿಯ ಮೇಲೆ ಹಿಂದಿ ಸಂಸ್ಕೃತಿಯನ್ನು ಹೇರಲು ಪ್ರಯತ್ನಿಸುವುದು ಕರ್ನಾಟಕ ರಕ್ಷಣಾ ವೇದಿಕೆಗೆ ಸ್ವೀಕಾರಾರ್ಹವಲ್ಲ. ಮೈಸೂರು ಸೋಪ್ಸ್‌ನಂತಹ ಕರ್ನಾಟಕದ ಐತಿಹಾಸಿಕ ಬ್ರಾಂಡ್ ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ವ್ಯಕ್ತಿಯನ್ನೇ ಆಯ್ಕೆ ಮಾಡಬೇಕು.

ಸರ್ಕಾರ ಕೂಡಲೇ ತಮನ್ನಾ ಭಾಟಿಯಾ ಅವರ ಬ್ರಾಂಡ್ ಅಂಬಾಸಿಡರ್ ನೇಮಕವನ್ನು ತಕ್ಷಣವೇ ರದ್ದುಗೊಳಿಸಬೇಕು. ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕನ್ನಡ ನಟಿಯರನ್ನು ಆಯ್ಕೆ ಮಾಡಬೇಕು. ಕರ್ನಾಟಕ ಸರ್ಕಾರವು 6.20 ಕೋಟಿ ರೂಪಾಯಿಗಳ ವೆಚ್ಚದ ಬಗ್ಗೆ ಸಾರ್ವಜನಿಕವಾಗಿ ಸ್ಪಷ್ಟನೆ ನೀಡಬೇಕು ಮತ್ತು ಈ ಹಣವನ್ನು ಕರ್ನಾಟಕದ ಜನರ ಒಳಿತಿಗಾಗಿ ಬಳಸಬೇಕು. ಭವಿಷ್ಯದಲ್ಲಿ ಸ್ಥಳೀಯ ಸಂಸ್ಕೃತಿ ಮತ್ತು ಭಾಷೆಗೆ ಗೌರವ ನೀಡುವಂತಹ ನಿರ್ಧಾರಗಳನ್ನು ಮಾತ್ರ ತೆಗೆದುಕೊಳ್ಳುವಂತೆ ಖಾತರಿ ನೀಡಬೇಕು.

ಮೈಸೂರು ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್ ಕರ್ನಾಟಕದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಪರಂಪರೆಯ ಭಾಗವಾಗಿದೆ. ಈ ಕಂಪನಿಯು ಕನ್ನಡಿಗರ ಗುರುತನ್ನು ಪ್ರತಿನಿಧಿಸುವ ಮತ್ತು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸುವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ತಮನ್ನಾ ಭಾಟಿಯಾ ಅವರ ನೇಮಕವು ಕರ್ನಾಟಕದ ಜನರ ಭಾವನೆಗಳಿಗೆ ಧಕ್ಕೆ ತರುವಂತಿದ್ದು, ಈ ನಿರ್ಧಾರವನ್ನು ತಕ್ಷಣವೇ ಹಿಂಪಡೆಯದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆಯು ತೀವ್ರ ಪ್ರತಿಭಟನೆಯನ್ನು ಆಯೋಜಿಸಲಿದೆ. ಕರ್ನಾಟಕ ಸರ್ಕಾರ ಮತ್ತು ಮೈಸೂರು ಸೋಪ್ಸ್ ಕಂಪನಿಯು ಕನ್ನಡಿಗರ ಭಾವನೆಗಳಿಗೆ ಮನ್ನಣೆ ನೀಡಿ, ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸುತ್ತೇವೆಂದು ತಿಳಿಸಿದ್ದಾರೆ.

ಈ ನಡುವೆ ಸರ್ಕಾರದ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಿಂದಲೂ ಟೀಕೆಗಳು ವ್ಯಕ್ತವಾಗುತ್ತಿದ್ದು, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ, ಬೆಂಗಳೂರಿನವರೇ ಆದ ಬಾಲಿವುಡ್ ನಟಿ ದೀಪಿಕಾಪಡುಕೋಣೆ ಸೇರಿದಂತೆ ಇನ್ನು ಹಲವು ನಟಿಯರು ಮೈಸೂರು ಸ್ಯಾಂಡಲ್ ಸೋಪ್ ನ ರಾಯಭಾರಿಯನ್ನಾಗಿ ಮಾಡಬಹುದಿತ್ತು ಎಂಬ ಮಾತುಗಳು ಕೇಳಿ ಬರುತ್ತಿವೆ.

ನಟಿ ತಮನ್ನಾ ಭಾಟಿಯಾ ಅವರು ದೇಶಾದ್ಯಂತ ಜನಪ್ರಿಯತೆ ಪಡೆದಿದ್ದಾರೆ. ವಿಶೇಷ ಹಾಡುಗಳ ಮೂಲಕ ಅವರು ಇತ್ತೀಚೆಗೆ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ ಅವರು ‘ಜಾಗ್ವಾರ್’ ಹಾಗೂ ‘ಕೆಜಿಎಫ್’ ಸಿನಿಮಾದ ವಿಶೇಷ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗೆ ‘ರೇಡ್ 2’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಾಂಗ್ಲಾದೇಶ ಹಿಂಸಾಚಾರ: ಮಾಜಿ ಪ್ರಧಾನಿ ಶೇಖ್ ಹಸೀನಾಗೆ ಗಲ್ಲು ಶಿಕ್ಷೆ: ICT ತೀರ್ಪು

"ನನಗೆ ಚಿಂತೆಯೇ ಇಲ್ಲ. ಅಲ್ಲಾಹ್ ಜೀವ ಕೊಟ್ಟಿದ್ದಾನೆ.. ಅವನೇ ತೆಗೆದುಕೊಳ್ಳುತ್ತಾನೆ": ಕೋರ್ಟ್ ತೀರ್ಪಿಗೂ ಮೊದಲು ಶೇಖ್ ಹಸೀನಾ!

ಬಿಹಾರ ರಾಜ್ಯಪಾಲ ಆರಿಫ್ ಖಾನ್ ಭೇಟಿಯಾದ ನಿತೀಶ್ ಕುಮಾರ್

Congo copper mine: ಕಾಂಗೋದಲ್ಲಿ ಭೀಕರ ಗಣಿ ಅವಘಡ, ಭೂ ಕುಸಿತದಲ್ಲಿ ಕನಿಷ್ಟ 80 ಮಂದಿ ಸಾವು! Video

ಸೌದಿಯಲ್ಲಿ ಬಸ್–ಡೀಸೆಲ್ ಟ್ಯಾಂಕರ್ ಡಿಕ್ಕಿಯಾಗಿ ಘೋರ ದುರಂತ: 45 ಮಂದಿ ಭಾರತೀಯ ಯಾತ್ರಿಕರು ದುರ್ಮರಣ, ಸಹಾಯವಾಣಿ ಆರಂಭ

SCROLL FOR NEXT