ಬೆಂಗಳೂರು: ಭಾರತವು ಜಾಗತಿಕ ಉತ್ಪಾದನಾ ಕೇಂದ್ರವಾಗಿದ್ದು, 2030 ರ ವೇಳೆಗೆ ಉತ್ಪಾದನಾ ವಲಯದಿಂದ ಜಾಗತಿಕ ಆರ್ಥಿಕತೆಗೆ ವಾರ್ಷಿಕವಾಗಿ 500 ಶತಕೋಟಿಗಿಂತ ಡಾಲರ್ ಗಿಂತ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆಯಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಬೆಂಗಳೂರಿನಲ್ಲಿ ನಡೆದ 7 ನೇ ಆವೃತ್ತಿಯ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಶೋ (IMS) 2025 ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರಸ್ತುತ ದಶಕವನ್ನು ಭಾರತದ ಕೈಗಾರಿಕಾ ಪ್ರಯಾಣದಲ್ಲಿ ಒಂದು ಮಹತ್ವದ ತಿರುವು ಎಂದು ಕರೆದಿದ್ದಾರೆ.
ಕೇಂದ್ರ ಸರ್ಕಾರವು 15,350 ರಕ್ಷಣಾ ವಸ್ತುಗಳನ್ನು ದೇಶೀಯ ತಯಾರಕರಿಗೆ, ವಿಶೇಷವಾಗಿ MSME ಗಳಿಗೆ ಕಾಯ್ದಿರಿಸಿದೆ. ಈ ಹಿಂದೆ, ನಾವು ಬಹುತೇಕ ಎಲ್ಲವನ್ನೂ ಆಮದು ಮಾಡಿಕೊಂಡಿದ್ದೇವೆ. ಇಂದು, ಸುಮಾರು ಶೇ. 90 ರಷ್ಟು ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಭಾರತದಲ್ಲಿ ತಯಾರಿಸಲಾಗುತ್ತದೆ ಎಂದು ಜೋಶಿ ತಿಳಿಸಿದ್ದಾರೆ.
ಇತ್ತೀಚಿನ ಆಪರೇಷನ್ ಸಿಂಧೂರ್ ಉಲ್ಲೇಖಿಸಿದ ಜೋಶಿ, ನಾವು ಬಳಸಿದ ಹೆಚ್ಚಿನ ಉಪಕರಣಗಳನ್ನು ನಮ್ಮ MSME ಗಳು ತಯಾರಿಸುತ್ತವೆ ಎಂದು ಬಹುಶಃ ನಮ್ಮ ಶತ್ರುಗಳಿಗೆ ತಿಳಿದಿರಲಿಲ್ಲ ಎಂದರು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಎಂಎಸ್‌ಎಂಇ ಮತ್ತು ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಎಂಎಸ್‌ಎಂಇಗಳು ಈಗ ಕೃಷಿಯ ನಂತರ ಭಾರತದ ಎರಡನೇ ಅತಿದೊಡ್ಡ ಉದ್ಯೋಗ ಮೂಲವಾಗಿದ್ದು, ಸುಮಾರು 30 ಕೋಟಿ ಜನರಿಗೆ ಉದ್ಯೋಗಗಳನ್ನು ಒದಗಿಸುತ್ತಿವೆ ಎಂದು ಹೇಳಿದರು. ಎಂಎಸ್‌ಎಂಇಗಳು ದೇಶದ ಜಿಡಿಪಿಗೆ ಶೇ. 30 ರಷ್ಟು, ಉತ್ಪಾದನೆಗೆ ಶೇ. 45 ರಷ್ಟು ಮತ್ತು ರಫ್ತಿಗೆ ಶೇ. 40 ರಷ್ಟು ಕೊಡುಗೆ ನೀಡುತ್ತವೆ ಎಂದು ಅವರು ಹೇಳಿದರು.
ಕೈಗಾರಿಕೆ ನೇತೃತ್ವದ ಬೆಳವಣಿಗೆಯ ಸಂದೇಶವನ್ನು ಬಲಪಡಿಸುತ್ತಾ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧ್ಯಕ್ಷ ವಿ ನಾರಾಯಣನ್ ಅವರು ಭಾರತೀಯ ಉತ್ಪಾದನೆಯು ಈಗ ಭಾರತದ ಬಾಹ್ಯಾಕಾಶ ಕಾರ್ಯಾಚರಣೆಗಳ ಬೆನ್ನೆಲುಬಾಗಿದೆ ಎಂದು ಹೇಳಿದರು.
ನಮ್ಮ ಇತ್ತೀಚಿನ ಸಂವಹನ ಉಪಗ್ರಹ CMS-03 ಅನ್ನು ಕೇವಲ ನಾಲ್ಕು ದಿನಗಳ ಹಿಂದೆ ಉಡಾವಣೆ ಮಾಡಲಾಯಿತು. ಶೇ. 80–85 ರಷ್ಟು ಸಾಮಾಗ್ರಿಗಳನ್ನು ಭಾರತೀಯ ಉದ್ಯಮವು ಪೂರೈಸಿದೆ" ಎಂದು ಅವರು ಹೇಳಿದರು. ವಾರ್ಷಿಕ ಉಡಾವಣೆಗಳ ಸಂಖ್ಯೆಯನ್ನು ಪ್ರಸ್ತುತ 10-12 ರಿಂದ ಸುಮಾರು 50 ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಭಾರತವು ಭಾರೀ ಆಮದು ಅವಲಂಬನೆಯಿಂದ ದೇಶೀಯ ರಕ್ಷಣಾ ಉತ್ಪಾದನೆಗೆ ಬದಲಾಗಿದೆ . ನಮ್ಮ ರಕ್ಷಣಾ ವ್ಯವಸ್ಥೆಗಳಲ್ಲಿ ಶೇ. 70 ರಷ್ಟು ಆಮದು ಮಾಡಿಕೊಳ್ಳುವುದರಿಂದ ದೇಶೀಯ ಕೈಗಾರಿಕೆಗಳಿಗೆ ಸುಮಾರು ಶೇ. 90 ರಷ್ಟು ಹೊಸ ಆರ್ಡರ್‌ಗಳನ್ನು ನೀಡುತ್ತಿದ್ದೇವೆ. ಎಂಎಸ್‌ಎಂಇಗಳು ಈಗ ಭಾರತದ ಸ್ವಾವಲಂಬನೆಯ ಪ್ರಯಾಣದಲ್ಲಿ ಪ್ರಮುಖ ಪಾಲುದಾರರಾಗಿದ್ದಾರೆ" ಎಂದು ಅವರು ಹೇಳಿದರು.