ಗದಗ: ವ್ಯಕ್ತಿ ಸತ್ತಿದ್ದಾನೆಂದು ಭಾವಿಸಿ ಶವಸಂಸ್ಕಾರ ಕ್ರಿಯೆಯವರೆಗೆ ಮುಂದುವರಿದು ಇನ್ನೇನು ಬೆಂಕಿಯಿಡಬೇಕು ಎನ್ನುವಷ್ಟರಲ್ಲಿ ವ್ಯಕ್ತಿ ಉಸಿರಾಡಿದ್ದು, ಶವಸಂಸ್ಕಾರ ಸ್ಥಳದಿಂದ ಎದ್ದುಬಂದ ಘಟನೆಗಳು ನಡೆದಿವೆ.
ಬ್ರೇನ್ ಹ್ಯಾಮರೇಜ್ ಹಾಗೂ ಪಿತ್ತಕೋಶ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಆರು ಗಂಟೆಗಳ ಕಾಲ ವೈದ್ಯರು ಆಪರೇಷನ್ ಮಾಡಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಸ್ಥಿತಿ ಚಿಂತಾಜನವಾಗಿತ್ತು. ವ್ಯಕ್ತಿ ಕೋಮಾಗೆ ಹೋಗಿದ್ದರು. ಆದರೆ ಮೃತಪಟ್ಟಿದ್ದಾರೆಂದು ಸುದ್ದಿ ಹರಡಿತ್ತು.
ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದರು. ಆದರೆ ನಡುರಸ್ತೆಯಲ್ಲಿ ಏಕಾಏಕಿ ವ್ಯಕ್ತಿ ಉಸಿರಾಡಿ ಎಲ್ಲರಿಗೂ ಅಚ್ಚರಿಯುಂಟುಮಾಡಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ-ಬೆಟಗೇರಿಯಲ್ಲಿ ಅಚ್ಚರಿ ಘಟನೆ
ಈ ಅಚ್ಚರಿ ಘಟನೆ ಗದಗ-ಬೆಟಗೇರಿಯಲ್ಲಿ ನಡೆದಿದೆ. ಗದಗ ಬೆಟಗೇರಿ ನಿವಾಸಿ ನಾರಾಯಣ ವನ್ನಾಲ್ (38ವ) ಅವರು ಬ್ರೇಜ್ ಹ್ಯಾಮರೇಜ್, ಪಿತ್ತಕೋಶದ ಸಮಸ್ಯೆಯಿಂದ ಧಾರವಾಡದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ನಾರಾಯಣ ವನ್ನಾಲ್ಗೆ ಸುಮಾರು ಆರು ಗಂಟೆಗಳ ಕಾಲ ವೈದ್ಯರು ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸ್ಥಿತಿ ಗಂಭೀರವಾಗಿತ್ತು. ಕೋಮಾಕ್ಕೆ ಹೋಗಿದ್ದರು.
ವೆಂಟಿಲೇಟರ್ ತೆಗೆದರೆ ಬದುಕಲ್ಲ ಎಂದು ಹೇಳಿದ್ದರಂತೆ. ಹೀಗಾಗಿ ಸಂಬಂಧಿಕರು ಆ್ಯಂಬುಲೆನ್ಸ್ನಲ್ಲಿ ಗದಗ ನಗರಕ್ಕೆ ಕರೆ ತರುವಾಗ ಪ್ರಾಣ ಹೋಗಿದೆ ಎಂದು ಭಾವಿಸಿದ್ದರು. ಹೀಗಾಗಿ ಕುಟುಂಬಸ್ಥರು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಆದರೆ ಮನೆಗೆ ತರುವ ವೇಳೆ ಮತ್ತೆ ಉಸಿರಾಡುವ ಮೂಲಕ ಎಲ್ಲರಿಗೂ ಅಚ್ಚರಿಗೊಳಿಸಿದ್ದಾರೆ.
ತಕ್ಷಣ ಕುಟುಂಬಸ್ಥರು ಬೆಟಗೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.