ಬೆಂಗಳೂರು: ಕೇರಳ ಸರ್ಕಾರದಂತೆ ಮಾನವ-ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಿಸುವಂತೆ ರಾಜ್ಯ ಸರ್ಕಾರಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗುರುವಾರ ಒತ್ತಾಯಿಸಿದ್ದಾರೆ.
ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಮಾನವ-ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಿಸಿತ್ತು.
ಗುರುವಾರ ಮುಖ್ಯಮಂತ್ರಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಖಂಡ್ರೆ ಅವರುಈ ವಿಚಾರವನ್ನು ಪ್ರಸ್ತಾಪವನ್ನು ಮಾಡಿದರು.
ಇಂತಹ ಘಟನೆಗಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿರುವುದರಿಂದ ಈ ಕ್ರಮ ಅಗತ್ಯವಾಗಿದೆ ಎಂದು ಹೇಳಿದರು.
ಅರಣ್ಯ ಇಲಾಖೆಯಲ್ಲಿ ವಿಶೇಷವಾಗಿ ಸಂಘರ್ಷದ ಪ್ರಮಾಣ ಹೆಚ್ಚಿರುವ ಸ್ಥಳಗಳಲ್ಲಿ ಸಿಬ್ಬಂದಿ ಕೊರತೆಯನ್ನು ಪರಿಹರಿಸಲು ನಿವೃತ್ತ ರಕ್ಷಣಾ ಸಿಬ್ಬಂದಿಯನ್ನು ನೇಮಿಸಿಕೊಳ್ಳುವ ಕುರಿತಂತೆಯೂ ಸಭೆಯಲ್ಲಿ ನಿರ್ಧರಿಸಲಾಗಿದೆ. ಸುಲಭ ನೇಮಕಾತಿಗಾಗಿ ಪಶುವೈದ್ಯರಿಗೆ ಪ್ರತ್ಯೇಕ ಕೇಡರ್ ಅನ್ನು ಸ್ಥಾಪಿಸಲಾಗುವುದು ಎಂದು ಖಂಡ್ರೆ ಅಕವರು ಹೇಳಿದರು.
ಸಂಘರ್ಷವನ್ನು ತಗ್ಗಿಸಲು ಜಿಲ್ಲಾ ಮಟ್ಟದಲ್ಲಿ ಸಮನ್ವಯ ಸಮಿತಿಗಳ ರಚನೆಗೆ ನಿರ್ದೇಶನಗಳನ್ನು ನೀಡುವಂತೆ ಸಚಿವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಅರಣ್ಯ ಇಲಾಖೆಯ ದಾಖಲೆಗಳ ಪ್ರಕಾರ, 2022–23ರಲ್ಲಿ 57, 2023–24ರಲ್ಲಿ 65 ಮತ್ತು 2024–25ರಲ್ಲಿ 46 ಘಟನೆಗಳು ನಡೆದಿವೆ. ಈ ವರ್ಷ ಇಲ್ಲಿಯವರೆಗೆ ಸಂಘರ್ಷದಲ್ಲಿ 32 ಜನರು ಸಾವನ್ನಪ್ಪಿದ್ದಾರೆ. ಕರ್ನಾಟಕಕ್ಕೆ ಹೋಲಿಸಿದರೆ ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಒಡಿಶಾ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ವನ್ಯಜೀವಿಗಳ ಸಂಖ್ಯೆ ಕಡಿಮೆಯಾಗಿದ್ದರೂ, ಜೀವಹಾನಿ ಹೆಚ್ಚಾಗಿದೆ ಎಂದು ಸಚಿವರು ಹೇಳಿದರು.
ಅಕ್ಟೋಬರ್‌ನಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರಿಗೆ ತೀವ್ರವಾಗಿ ಗಾಯವಾಗಿದೆ. ಘಟನೆ ಬೆನ್ನಲ್ಲೇ ಬಂಡೀಪುರ ಮತ್ತು ನಾಗರಹೊಳೆ ಹುಲಿ ಮೀಸಲು ಪ್ರದೇಶಗಳಲ್ಲಿ ಎಲ್ಲಾ ಸಫಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಇಲ್ಲಿಯವರೆಗೆ, 250 ಜನರ ತಂಡಗಳು 10 ಹುಲಿಗಳನ್ನು ಸೆರೆಹಿಡಿದು ರಕ್ಷಿಸಿವೆ ಎಂದು ಮಾಹಿತಿ ನೀಡಿದರು.
ಸಂಘರ್ಷವನ್ನು ತಗ್ಗಿಸಲು ಎಂಟು ಅಂಶಗಳ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಸಮಗ್ರ ಅತ್ಯಾಧುನಿಕ ಕಮಾಂಡ್ ಮತ್ತು ನಿಯಂತ್ರಣ ಕೇಂದ್ರವನ್ನು ಸಹ ಸ್ಥಾಪಿಸಲಾಗುತ್ತಿದೆ. ಸ್ಥಳೀಯ ನಿವಾಸಿಗಳನ್ನು ಗಸ್ತು ತಿರುಗಲು ಮತ್ತು ಜಾಗೃತಿ ಮೂಡಿಸಲು ನೇಮಿಸಿಕೊಳ್ಳಲಾಗುವುದು ಎಂದು ತಿಳಿಸಿದರು.