ಬೆಂಗಳೂರು: ಹಾಡಹಗಲೇ ನಡೆದಿದ್ದ ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣದ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ. ಸಿಎಂಎಸ್ ಏಜೆನ್ಸಿ ವಾಹನವನ್ನು ಅಡಗಟ್ಟಿ ರೂ.7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದೆ.
ಈತನೇ ಇಡೀ ಪ್ರಕರಣದ ಸೂತ್ರಧಾರ!
ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರದಾರ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಕಾನ್‌ಸ್ಟೆಬಲ್ ಅಣ್ಣಪ್ಪನಾಯ್ಕ್, ಹಾಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, ಜಿತೇಶ್ ಸೇರಿ ಒಟ್ಟು ಏಳು ದರೋಡೆಕೋರರನ್ನ ಬಂಧಿಸಲಾಗಿದೆ. ಬಂಧಿತರಿಂದ ರೂ.5.7 ಕೋಟಿ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ಪೈಕಿ ಮಾಜಿ ಸೈನಿಕನ ಮಗನಾದ ರವಿ ಎಂಬಾತ ಇಡೀ ಪ್ರಕರಣದ ಸೂತ್ರಧಾರ ಎಂಬುದು ಗೊತ್ತಾಗಿದೆ. ಮಾಜಿ ಸೈನಿಕನ ಮಗನಾದ ರವಿ, ಎಂಎಸ್ ಸಿ ವ್ಯಾಸಂಗ ಮಾಡಿದ್ದು, ನಗರದಲ್ಲಿ ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದರು. ಆದರೆ ನಷ್ಟವಾಗಿದ್ದರಿಂದ ಏಜೆನ್ಸಿ ಮುಚ್ಚಿ ಮನೆಯಲ್ಲಿದ್ದರು. ಆಗ ದರೋಡೆಗೆ ಸಂಚು ರೂಪಿಸಿದ್ದರು ಎಂಬುದು ತಿಳಿದುಬಂದಿದೆ.
ನಗರದಲ್ಲಿ ವಾಸವಿರುವ ರವಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವರು ತನ್ನ ಪತಿ ದರೋಡೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ. ಕೃತ್ಯದಲ್ಲಿ ರವಿಯ ಸಹೋದರ ಹಾಗೂ ಅವರ ತಂದೆಯ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವ್ಯವಹಾರದಲ್ಲಿ ನಷ್ಟ: ಸಿಎಂಎಸ್ ಏಜೆನ್ಸಿ ವಾಹನದ ಮೇಲ್ವಿಚಾರಕ ಗೋಪಾಲ್ ಪ್ರಸಾದ್, ಸಿಎಂಎಸ್ ಮಾಜಿ ಉದ್ಯೋಗಿ ಕ್ಸೇವಿಯರ್ ಹಾಗೂ ಕಾನ್ಸ್ ಟೇಬಲ್ ಅಣ್ಣಪ್ಪ ನಾಯ್ಕ್ ಬಾರ್ ನಲ್ಲಿ ಪರಿಚಿತರಾಗಿದ್ದರು. ರವಿ, ನವೀನ್ ಮತ್ತು ನೆಲ್ಸನ್ ಸ್ನೇಹಿತರು ಹಾಗೂ ಚಿತ್ತೂರಿನವರು.ಟ್ರಾವೆಲ್ಸ್ ಏಜೆನ್ಸಿ ನಡೆಸುತ್ತಿದ್ದ ರವಿಗೆ ಗೋಪಾಲ್, ಅಣ್ಣಪ್ಪ ಅವರ ಪರಿಚಯವಿತ್ತು. ವ್ಯವಹಾರದಲ್ಲಿ ನಷ್ಟ ಹೊಂದಿದ್ದ ಕಾರಣ, ದೊಡ್ಡ ಮೊತ್ತದ ದರೋಡೆಗೆ ಸಂಚು ರೂಪಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಹುತೇಕರಿಗೆ ಮೈತುಂಬಾ ಸಾಲ: ಗ್ಯಾಂಗ್‌ನಲ್ಲಿದ್ದ ಬಹುತೇಕರಿಗೆ ಮೈತುಂಬಾ ಸಾಲ ಇತ್ತು. ದರೋಡೆ ಮಾಡಿ ಬಂದ ಹಣದಲ್ಲಿ ಮಾಡಿರುವಂತಹ ಸಾಲ ತೀರಿಸಿ ಮಿಕ್ಕ ಹಣದಲ್ಲಿ ವಿಲಾಸಿ ಜೀವನ ನಡೆಸಬಹುದೆಂದು ಆರೋಪಿಗಳು ದೊಡ್ಡ ದರೋಡೆಗೆ ಮಾಡಿದ್ದರೆಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.