ಬೆಂಗಳೂರು: ಆನೆಪಾಳ್ಯ ಬಳಿಯ ನೀಲಸಂದ್ರದಲ್ಲಿರುವ ಮಸೀದಿಯಲ್ಲಿ ಬಾಲ್ಯ ವಿವಾಹ ನಡೆಸಲು ಯತ್ನಿಸಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಜಿಲ್ಲಾ ಮಕ್ಕಳ ಸಹಾಯವಾಣಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಅಪ್ರಾಪ್ತ ಬಾಲಕಿಯನ್ನು ಆಕೆಯ ಪೋಷಕರು 20 ವರ್ಷದ ಹುಡುಗನೊಂದಿಗೆ ಮದುವೆ ಮಾಡಲು ನಿರ್ಧರಿಸಿದ್ದರು.
ಅಶೋಕ್ ನಗರ ಪೊಲೀಸರು ಬಾಲ್ಯ ವಿವಾಹ ನಿರ್ಬಂಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಎಫ್‌ಐಆರ್ ಪ್ರಕಾರ, ಮಕ್ಕಳ ಸಹಾಯವಾಣಿ ಕೋಆರ್ಡಿನೇಟರ್ ಪುಂಡಲೀಕ ಅವರು ಸೆಪ್ಟೆಂಬರ್ 26 ರಂದು ಬೆಳಗಿನ ಜಾವ 1 ಗಂಟೆಗೆ 1098 ಸಹಾಯವಾಣಿಗೆ ಕರೆ ಮಾಡಿ, ಪೋಷಕರು ತಮ್ಮ 16 ವರ್ಷದ ಮಗಳಿಗೆ ಮಸೀದಿಯಲ್ಲಿ ಬಲವಂತವಾಗಿ ಮದುವೆ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವುದಾಗಿ ತಿಳಿಸಿದರು.
ಮರುದಿನ ಅಧಿಕಾರಿಗಳು ಮಸೀದಿಗೆ ಭೇಟಿ ನೀಡಿ ಪರಿಶೀಲಿಸಿದಾಗ ಇಸ್ಲಾಮಿಕ್ ಸಮುದಾಯದ ಧಾರ್ಮಿಕ ಪದ್ಧತಿಗಳು ಮಾತ್ರ ನಡೆದಿವೆ ಮತ್ತು ಸದ್ಯಕ್ಕೆ ಯಾವುದೇ ಮದುವೆ ನಡೆದಿಲ್ಲ ಎಂದು ಮಸೀದಿ ಸದಸ್ಯರು ಹೇಳಿದ್ದಾರೆ. ಆದಾಗ್ಯೂ, ಬಾಲ್ಯ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಿರುವ ಫೋಟೊಗಳು ಮತ್ತು ವಿಡಿಯೋಗಳು ಅಧಿಕಾರಿಗಳಿಗೆ ಲಭ್ಯವಾಗಿವೆ. ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿಯಲ್ಲಿ, ಅಂತಹ ವಿವಾಹಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಸಹ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಈಮಧ್ಯೆ, ವಕೀಲ ಹುಸೇನ್ ಓವೈಸಿ ಅವರು ಪೊಲೀಸ್ ಮಹಾನಿರ್ದೇಶಕರು ಮತ್ತು ಇನ್ಸ್‌ಪೆಕ್ಟರ್ ಜನರಲ್ ಮತ್ತು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯುಸಿ) ಸೇರಿದಂತೆ ಇತರ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಈ ಆರೋಪಗಳ ಕುರಿತು ದೂರು ಸಲ್ಲಿಸಿದ್ದಾರೆ. ಎಫ್‌ಐಆರ್‌ನಲ್ಲಿ, ಪೋಷಕರ ಹೆಸರುಗಳು ಸೇರಿದಂತೆ ಯಾವುದೇ ಹೆಸರನ್ನು ಉಲ್ಲೇಖಿಸದಿದ್ದರೂ, ಅವರು ಭಾಗಿಯಾಗಿದ್ದಾರೆಂದು ಹೇಳಲಾದ ಆರೋಪಿಗಳ ಹೆಸರನ್ನು ಸಹ ಹೆಸರಿಸಿದ್ದಾರೆ.