ಬೆಂಗಳೂರು: ಎಲ್ಲ ಜಿಲ್ಲೆಗಳಿಂದ ದತ್ತಾಂಶ ಸಂಗ್ರಹಿಸಿದ ನಂತರ, 'ಜಾತಿ ಗಣತಿ' ಎಂದು ಕರೆಯಲ್ಪಡುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಗಡುವನ್ನು ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಧರಿಸುತ್ತಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ ಸೋಮವಾರ ಹೇಳಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಈ ಸಮೀಕ್ಷೆಯು ಸೆಪ್ಟೆಂಬರ್ 22 ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 7 ರಂದು ಮುಕ್ತಾಯಗೊಳ್ಳಬೇಕಿದೆ.
'ಮುಖ್ಯಮಂತ್ರಿ ಕೊಪ್ಪಳಕ್ಕೆ ಹೋಗಿದ್ದಾರೆ ಮತ್ತು ಅವರು ಹಿಂದಿರುಗಿದ ನಂತರ ಅಧಿಕಾರಿಗಳೊಂದಿಗೆ ಚರ್ಚಿಸಿ ಎಲ್ಲ ಜಿಲ್ಲೆಗಳಿಂದ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಪ್ರತಿಯೊಂದು ಜಿಲ್ಲೆಯಲ್ಲೂ ವಿಭಿನ್ನ ಶೇಕಡಾವಾರು ಸಮೀಕ್ಷೆ ಪೂರ್ಣಗೊಂಡಿದ್ದು, ಕೆಲವು ಸ್ಥಳಗಳಲ್ಲಿ ಇದು ಶೇ 70, ಶೇ 50 ಮತ್ತು ಇತರ ಕೆಲವು ಸ್ಥಳಗಳಲ್ಲಿ ಬಹುತೇಕ ಶೇ 80 ಅಥವಾ ಪೂರ್ಣಗೊಳ್ಳುವ ಹಂತದಲ್ಲಿದೆ. ಇಡೀ ರಾಜ್ಯದಲ್ಲಿ ಸರಾಸರಿ ಶೇ 70-80 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ' ಎಂದು ಸಮೀಕ್ಷೆಯ ಗಡುವನ್ನು ವಿಸ್ತರಿಸುವ ಕುರಿತ ಪ್ರಶ್ನೆಗೆ ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ತಾಂತ್ರಿಕ ದೋಷಗಳು ಮತ್ತು ಗಣತಿದಾರರಿಗೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ ಸಮೀಕ್ಷಾ ಪ್ರಕ್ರಿಯೆಯು ಕೆಲವು ಗೊಂದಲಗಳನ್ನು ಎದುರಿಸಿದೆ. ಆದರೆ, ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಸರ್ಕಾರವು ಅಕ್ಟೋಬರ್ 7 ಅನ್ನು ಕೊನೆಯ ದಿನಾಂಕವೆಂದು ಉಲ್ಲೇಖಿಸಿತ್ತು. ಇದೀಗ ಗಡುವನ್ನು ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿ ನಿರ್ಧರಿಸುತ್ತಾರೆ' ಎಂದು ಅವರು ಹೇಳಿದರು.
ಸಮೀಕ್ಷೆಯ ಸಮಯದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಕೇಂದ್ರ ಸಚಿವ ವಿ ಸೋಮಣ್ಣ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ರಾಜ್ಯದಾದ್ಯಂತ ಸಮೀಕ್ಷೆ ನಡೆಸುವಾಗ ಇಂತಹ ಸಣ್ಣ ಗೊಂದಲಗಳು ಉಂಟಾಗುತ್ತವೆ ಮತ್ತು ಎಲ್ಲರ ಸಹಕಾರದಿಂದ ಇದನ್ನು ಯಶಸ್ವಿಯಾಗಿ ನಡೆಸಬಹುದು ಎಂದು ಹೇಳಿದರು.
ಡಿಕೆ ಶಿವಕುಮಾರ್ ಮತ್ತು ಸೋಮಣ್ಣ ಇಬ್ಬರೇ ಅಲ್ಲ, ಎಲ್ಲರಿಗೂ ಅಭಿಪ್ರಾಯಗಳಿವೆ. ಕೆಲವು ವಿಷಯಗಳು ಸರಿಯಿಲ್ಲ ಎಂದು ನನಗೂ ಅನಿಸುತ್ತದೆ. ಗೊಂದಲಗಳಿಲ್ಲದೆ ಅದು ಸಂಭವಿಸುತ್ತದೆ ಎಂದು ನೀವು ನಿರೀಕ್ಷಿಸಲು ಸಾಧ್ಯವಿಲ್ಲ. ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.
ಸಮೀಕ್ಷೆ ನಡೆಯುತ್ತಿರುವ ವಿಧಾನ ಮತ್ತು ಸಮುದಾಯಗಳನ್ನು ವಿಭಜಿಸುವ ಆರೋಪಗಳ ಬಗ್ಗೆ ಬಿಜೆಪಿಯ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ, 'ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ, ನಾವು ಜವಾಬ್ದಾರಿಯುತ ಸರ್ಕಾರವಾಗಿ ನಮ್ಮಿಂದಾಗಬೇಕಾದ್ದನ್ನು ಮಾಡುತ್ತಿದ್ದೇವೆ' ಎಂದು ಹೇಳಿದರು.
'ಪ್ರತಿಯೊಬ್ಬರ ಅಭಿಪ್ರಾಯದ ಆಧಾರದ ಮೇಲೆ ನಾವು ಒಂದು ತೀರ್ಮಾನಕ್ಕೆ ಬರಬಹುದೇ? ಹಿಂದಿನ ಸಮೀಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಮತ್ತು ಸಾಧಕ-ಬಾಧಕಗಳನ್ನು ಪರಿಗಣಿಸಿ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಸುಮಾರು ಶೇ 80 ರಷ್ಟು ಸಮೀಕ್ಷೆ ಪೂರ್ಣಗೊಂಡಿದೆ. ಉಳಿದ ಶೇ 20-25 ರಷ್ಟಕ್ಕೆ ಸುಮಾರು ನಾಲ್ಕು ದಿನಗಳವರೆಗೆ ಗಡುವನ್ನು ವಿಸ್ತರಿಸಿದರೆ ಸಮೀಕ್ಷೆ ಪೂರ್ಣಗೊಳ್ಳುತ್ತದೆ' ಎಂದು ಅವರು ಹೇಳಿದರು.
ಅಂದಾಜು 420 ಕೋಟಿ ರೂ. ವೆಚ್ಚದಲ್ಲಿ ನಡೆಸಲಾದ ಈ ಸಮೀಕ್ಷೆಯಲ್ಲಿ 60 ಪ್ರಶ್ನೆಗಳ ಪ್ರಶ್ನಾವಳಿಯನ್ನು ಬಳಸಲಾಗುತ್ತದೆ ಮತ್ತು ಅಧಿಕಾರಿಗಳ ಪ್ರಕಾರ ಇದನ್ನು "ವೈಜ್ಞಾನಿಕವಾಗಿ" ನಡೆಸಲಾಗುತ್ತಿದೆ. 2015ರಲ್ಲಿ ಸರ್ಕಾರವು ಈ ಹಿಂದೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ 165.51 ಕೋಟಿ ರೂ.ಗಳನ್ನು ಖರ್ಚು ಮಾಡಿತ್ತು. ಆದರೆ, ನಂತರ ಅದನ್ನು ಕೈಬಿಡಲಾಯಿತು.