ಬೆಂಗಳೂರು: ಇತ್ತೀಚೆಗಷ್ಟೇ ನಿಯಮ ಉಲ್ಲಂಘನೆ ಆರೋಪದ ಮೇರೆಗೆ ಸ್ಥಗಿತವಾಗಿದ್ದ ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಅಭಿಮಾನಿಗಳಿಗೆ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಶೀಘ್ರದಲ್ಲೇ ಶೋ ಪುನಾರಂಭಗೊಳ್ಳಲಿದೆ.
ಹೌದು.. ಸರ್ಕಾರದ ನಿಯಮ ಉಲ್ಲಂಘನೆ ಆರೋಪದ ಮೇಲೆ ಸ್ಥಗಿತಗೊಂಡಿದ್ದ 'ಬಿಗ್ ಬಾಸ್ ಕನ್ನಡ ಸೀಸನ್ 12' ಶೋಗೆ ಡಿಸಿಎಂ ಡಿಕೆ ಶಿವಕುಮಾರ್ ಮಧ್ಯಸ್ಥಿಕೆ ವಹಿಸಿದ್ದು, ತಪ್ಪು ಸರಿಪಡಿಸಿಕೊಳ್ಳಲು ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಕಂದಾಯ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನು ಉಲ್ಲಂಘಿಸಿ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಆರೋಪದ ಮೇಲೆ ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ನಡೆಯುತ್ತಿದ್ದ ಜಾಲಿವುಡ್ ಸ್ಟುಡಿಯೋಸ್ ಮನೆಯನ್ನು ಸರ್ಕಾರದಿಂದ ಸೀಜ್ ಮಾಡಲಾಗಿತ್ತು.
ಇದೀಗ ಬಿಗ್ ಬಾಸ್ ಕಾರ್ಯಕ್ರಮದ ನಿರ್ಮಾಣ ಸಂಸ್ಥೆಯಾದ ಜಾಲಿವುಡ್ ಸ್ಟುಡಿಯೋಸ್‌ಗೆ ಮತ್ತೊಂದು ಅವಕಾಶ ನೀಡುವಂತೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ರವಾನಿಸಿದ್ದಾರೆ. ಈ ಮೂಲಕ ಬಿಗ್ ಬಾಸ್ ಕಾರ್ಯಕ್ರಮದ ಪುನಾರಂಭಕ್ಕೆ ಹಸಿರು ನಿಶಾನೆ ತೋರಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು, 'ಜಾಲಿವುಡ್ ಸ್ಟುಡಿಯೋಸ್‌ಗೆ 'ಇದೊಂದು ಬಾರಿ ಅನುಮತಿ ನೀಡುವಂತೆ' ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಮ್ಮೆ ತಪ್ಪು ಸರಿ ಮಾಡಿಕೊಳ್ಳಲು ಅವಕಾಶ ಕೊಡಿ ಎಂದಿದ್ದೇನೆ. ಉದ್ಯೋಗ ಮುಖ್ಯ, ಏನೇ ಇದ್ದರೂ ಅವರಿಗೊಂದು ಅವಕಾಶ ಕೊಡಿ. ಅವರು ಸಮಸ್ಯೆ ಬಗೆಹರಿಸಿಕೊಳ್ಳಲಿ. ನಮ್ಮಲ್ಲಿ ಮನೋರಂಜನೆ ಕೂಡ ಮುಖ್ಯ ಎಂದು ಹೇಳಿದ್ದಾರೆ.
ಇದೇ ವೇಳೆ 'ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಕೆಲವರು ದೂರು ನೀಡಿರುವುದು ವಿಚಾರಣೆಯಿಂದ ತಿಳಿದುಬಂದಿದೆ. ನಾನೇ ಫೋನ್ ಮಾಡಿ ಜಿಲ್ಲಾಧಿಕಾರಿ (ಡಿಸಿ) ಮತ್ತು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರಿಗೆ ಹೇಳಿದ್ದೇನೆ. ಕಾನೂನನ್ನ ನೋಡಿ ಸಮಸ್ಯೆ ಆಗಿದ್ರೆ ಅದನ್ನು ಬಗೆಹರಿಸಿಕೊಡಲು ಅವಕಾಶ ಕೊಡಬೇಕು ಅಂತ ಹೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಮನರಂಜನೆಯ ಅಗತ್ಯವನ್ನು ಒತ್ತಿಹೇಳಿದ ಅವರು, 'ಬಿಗ್ ಬಾಸ್ ಆಗಲಿ, ಯಾವುದೇ ಆಗಲಿ ಮನರಂಜನೆ ಇರಬೇಕು. ಖಾಸಗಿಯವರು ಹೂಡಿಕೆ ಮಾಡಿ ಏನೋ ತಪ್ಪು ಮಾಡಿರುತ್ತಾರೆ, ಅದನ್ನು ಸರಿ ಮಾಡಿಕೊಳ್ಳಲು ಅವಕಾಶ ಕೊಡಬೇಕು. ಇದು ನನ್ನ ಸಲಹೆ' ಎಂದು ಡಿಕೆ ಶಿವಕುಮಾರ್ ಹೇಳಿದರು.
ಜೆಡಿಎಸ್ ವಿರುದ್ಧ ಕಿಡಿ
ಇದೇ ವೇಳೆ ಜೆಡಿಎಸ್ ಆರೋಪದ ಕುರಿತು ಮಾತನಾಡಿದ ಡಿಕೆ ಶಿವಕುಮಾರ್, 'ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜಕೀಯ ಮಾಡುತ್ತಿದ್ದಾರೆ. ಅವರ ಹೇಳಿಕೆಗಳ ಬಗ್ಗೆ ನನಗೆ ಸ್ವಲ್ಪವೂ ಚಿಂತೆ ಇಲ್ಲ. ನನ್ನ ಹೆಸರನ್ನು ಹೇಳದೆ ಅವರಿಗೆ ನಿದ್ದೆ ಬರುವುದಿಲ್ಲ. ಕೆಎಸ್‌ಪಿಸಿಬಿ ಮೂಲಕ ನಡೆದ ಘಟನೆಯ ಬಗ್ಗೆ ನಾನು ವಿಚಾರಿಸಿದೆ. ಪರಿಶೀಲನೆ ನಡೆಸಲು ಅಧಿಕಾರಿಗಳನ್ನು ಕಳುಹಿಸಿದ್ದೇನೆ... ಮನರಂಜನಾ ಉದ್ಯಮದ ಹಿತಾಸಕ್ತಿಯನ್ನು ನಾವು ಕಾಪಾಡಬೇಕು... ನಾನು ವೈಯಕ್ತಿಕವಾಗಿ ಡಿಸಿ ಮತ್ತು ಎಸ್‌ಪಿಗೆ ಕರೆ ಮಾಡಿ ಕಾನೂನಿನ ಮೂಲಕ ಕ್ರಮ ಕೈಗೊಳ್ಳಲು ಮಾರ್ಗದರ್ಶನ ನೀಡಿದ್ದೇನೆ. ಅವರಿಗೆ ಅವಕಾಶ ನೀಡುವಂತೆ ಕೇಳಿದ್ದೇನೆ. ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷರನ್ನೂ ಸಂಪರ್ಕಿಸಿದ್ದೇನೆ. ಮನರಂಜನಾ ಉದ್ಯಮವನ್ನು ಉಳಿಸಿಕೊಳ್ಳಬೇಕು. ಇದು ಅವರಿಗೆ ನನ್ನ ಆದೇಶ" ಎಂದು ಹೇಳಿದರು.