ಬೆಂಗಳೂರು: ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮಳೆ ಮತ್ತು ಪ್ರವಾಹದಿಂದ ಹಾನಿಗೊಳಗಾದ ರೈತರು ಸಂಕಷ್ಟಕ್ಕೊಳಗಾಗಿದ್ದಾರೆ, ಆದರೆ ಸರ್ಕಾರ ಸಮಸ್ಯೆ ಪರಿಹರಿಸುವ ಬದಲು "ಕಣ್ಮರೆಯಾಗಿದೆ" ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಮೌನ ವಹಿಸಿದ್ದಾರೆ. ಜಾತಿ ಸಮೀಕ್ಷೆಗೆ ಸರ್ಕಾರ ನೂರಾರು ಕೋಟಿ ಖರ್ಚು ಮಾಡುತ್ತಿದೆ, ಆದರೆ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಹತಾಶೆಯಲ್ಲಿ ಮುಳುಗಿದ್ದಾರೆ ಎಂದು ಆರೋಪಿಸಿದರು.
ಭೀಮಾ ಜಲಾನಯನ ಪ್ರದೇಶದ ರೈತರು ಹತಾಶೆಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕಣ್ಮರೆಯಾಗಿದೆ. ಪ್ರವಾಹ ಮತ್ತು ನಿರಂತರ ಮಳೆಯಿಂದ ಕಲಬುರಗಿ, ಯಾದಗಿರಿ ಮತ್ತು ಬೀದರ್‌ನಾದ್ಯಂತ ಸಾವಿರಾರು ಎಕರೆ ಬೆಳೆ ನಾಶವಾಗಿದೆ, ಇದರಿಂದಾಗಿ 3.5 ಲಕ್ಷಕ್ಕೂ ಹೆಚ್ಚು ರೈತರು ಸಂಕಷ್ಟದಲ್ಲಿದ್ದಾರೆ ಎಂದು ಅಶೋಕ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮಳೆ, ನೆರೆ ಹಾವಳಿಯಿಂದ ರೈತರ ಲಕ್ಷಾಂತರ ಹೆಕ್ಟೇರ್ ಭೂಮಿ ನಾಶವಾಗಿದೆ. ಆದರೆ ಸರ್ಕಾರ ಇನ್ನೂ ಸ್ಪಂದನೆ ನೀಡುತ್ತಿಲ್ಲ. ಅಂದು ಬಿಜೆಪಿ ಸರ್ಕಾರ ರೈತರಿಗೆ, ಸಂತ್ರಸ್ಥರಿಗೆ ತಕ್ಷಣವೇ ಪರಿಹಾರ ನೀಡಿತ್ತು. ಆದರೆ ಕಾಂಗ್ರೆಸ್ ಸರ್ಕಾರ ದ್ರೋಹ ಬಗೆದಿದೆ ಎಂದಿದ್ದಾರೆ.
ಗುತ್ತಿಗೆ ಪಡೆದ ಭೂಮಿಯಲ್ಲಿ ಲಕ್ಷಗಟ್ಟಲೆ ಹೂಡಿಕೆ ಮಾಡಿದ ಬಾಡಿಗೆದಾರರು ಎಲ್ಲವನ್ನೂ ಕಳೆದುಕೊಂಡಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಎಲ್ಲಿಯೂ ಕಾಣುತ್ತಿಲ್ಲ ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ತಿಂಗಳುಗಟ್ಟಲೆ ಶ್ರಮವಹಿಸಿ ದುಡಿದ ರೈತರಿಗೆ ಈ ಬಾರಿ ಈರುಳ್ಳಿ ಕಣ್ಣೀರು ತರಿಸುತ್ತಿದೆ. ಪ್ರತಿ ಕ್ವಿಂಟಲ್ ಗೆ 3,000- 4,000 ರೂಪಾಯಿ ಸಿಗುತ್ತಿದ್ದದ್ದು ಈಗ ಕ್ವಿಂಟಲ್ಗೆ 100-200 ರೂಪಾಯಿಗಳಿಗೆ ದಿಢೀರನೆ ಕುಸಿದಿದ್ದು ಸಾಗಾಟದ ವೆಚ್ಚಕ್ಕೂ ಸಾಲದೆ ರೈತರು ಕಂಗಾಲಾಗಿದ್ದಾರೆ. ಇದೇ ರೀತಿ ಬೆಲೆ ಕಡಿಮೆಯಾದರೆ ಈರುಳ್ಳಿ ಬೆಳೆಗಾರರು ಬೀದಿಗೆ ಬೀಳುತ್ತಾರೆ. ಕೂಡಲೇ ರಾಜ್ಯ ಸರ್ಕಾರ ರೈತರಿಗೆ ಉತ್ತಮ ಬೆಲೆ ಸಿಗುವಂತಹ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸುತ್ತೇನೆ.
ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಯೋಜನೆ ಇಲ್ಲ, ಪರಿಹಾರವಿಲ್ಲ, ಸಹಾನುಭೂತಿ ಇಲ್ಲ. ಇದು ರೈತ ಪರ ಕಾಂಗ್ರೆಸ್ ಎಂದು ಕರೆಯಲ್ಪಡುವ ಪಕ್ಷದ ನಿಜವಾದ ಮುಖ - ರೈತರು ಸಾಲ ಮತ್ತು ಹತಾಶೆಯಲ್ಲಿ ಮುಳುಗುತ್ತಿರುವಾಗ ಜಾತಿ ಸಮೀಕ್ಷೆಗಳಿಗೆ ನೂರಾರು ಕೋಟಿ ಖರ್ಚು ಮಾಡುವ ಪಕ್ಷ." "ನ್ಯಾಯ ಮತ್ತು ಕರುಣೆಯ ಬಗ್ಗೆ ರಾಷ್ಟ್ರಕ್ಕೆ ಉಪನ್ಯಾಸ ನೀಡುವ ರಾಹುಲ್ ಗಾಂಧಿ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಕಲ್ಯಾಣ ಕರ್ನಾಟಕವು ಕಾಂಗ್ರೆಸ್‌ನ ದ್ರೋಹದಿಂದ ಬಳಲುತ್ತಿದೆ ಎಂದು ಅವರು ಮತ್ತಷ್ಟು ಆರೋಪಿಸಿದರು.