ಕಲಬುರಗಿ: ಪ್ರವಾಹ ಮತ್ತು ಅತಿವೃಷ್ಟಿಯ ಹಿನ್ನೆಲೆಯಲ್ಲಿ ಜಿಲ್ಲೆಗೆ ವಿಶೇಷ ಪ್ಯಾಕೇಜ್ ಮತ್ತು ಇತರ ರಿಯಾಯಿತಿಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ಹಲವು ಸಂಘಟನೆಗಳು ಸೋಮವಾರ ಕಲಬುರಗಿ ಬಂದ್‌ಗೆ ಕರೆ ನೀಡಲಾಗಿತ್ತು.
ಭಾರೀ ಮಳೆಯಿಂದ ತೀವ್ರ ಬೆಳೆ ಹಾನಿಯಾಗಿದ್ದು, ಕಲಬುರಗಿ ಜಿಲ್ಲೆಯನ್ನು ತಕ್ಷಣವೇ 'ಹಸಿ ಬರಗಾಲ' ಪ್ರದೇಶವೆಂದು ಘೋಷಿಸಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ನೇತೃತ್ವದಲ್ಲಿ ರೈತ, ದಲಿತ, ಕನ್ನಡಪರ, ಮಹಿಳಾ ಪರ ಸಂಘಟನೆಗಳು ಇಂದು ಕಲಬುರಗಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದವು.
ನಗರದ ಕೇಂದ್ರ ಬಸ್ ನಿಲ್ದಾಣದ ಬಳಿ ಬೆಳ್ಳಂಬೆಳ್ಳಗೆ ನೂರಾರು ರೈತರು ಜಮಾವಣೆಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನಾಕಾರರು ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಸಾಲ ಮನ್ನಾ, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ನಿಧಿ(NDRF) ಅಡಿಯಲ್ಲಿ ಹಣ ಮತ್ತು ರೈತರಿಗೆ ಎಕರೆಗೆ 25,000 ರೂ. ಪರಿಹಾರ ನೀಡಬೇಕು ಎಂದು ರೈತ ನಾಯಕ ದಯಾನಂದ ಪಾಟೀಲ್ ಅವರು ಎಎನ್ಐಗೆ ತಿಳಿಸಿದ್ದಾರೆ.
ಇದಕ್ಕೂ ಮೊದಲು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್(RDPR) ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ಮಳೆ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸ್ಥಳೀಯರು ಮತ್ತು ಸಂತ್ರಸ್ತ ಜನರ ಕುಂದುಕೊರತೆಗಳನ್ನು ಆಲಿಸಿದ್ದಾರೆ ಎಂದು RDPR ಇಲಾಖೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ(PRO) ತಿಳಿಸಿದ್ದರು.
ಅಕಾಲಿಕ ಮಳೆಯಿಂದ ರೈತರ ಬೆಳೆಗಳಿಗೆ ಅಪಾರ ಹಾನಿಯಾಗಿದೆ. ಆದರೆ ಸರ್ಕಾರ ಹಾನಿಯನ್ನು ನಿರ್ಣಯಿಸಲು ಸಮೀಕ್ಷೆ ನಡೆಸುತ್ತಿದೆ ಮತ್ತು ಶೀಘ್ರವೇ ರೈತರಿಗೆ ಪರಿಹಾರ ನೀಡಲಾಗುವುದು ಎಂದು ಖರ್ಗೆ ಹೇಳಿದ್ದಾರೆ.
ಬಸ್ ಇಲ್ಲದೆ ಪ್ರಯಾಣಿಕರ ಪರದಾಟ
ಬಂದ್ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ಕಲಬುರಗಿಯಿಂದ ಬೇರೆ ಊರಿಗೆ ಪ್ರಯಾಣ ಮಾಡಲು ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕರಿಗೆ ಬಂದ್ ಬಿಸಿ ತಟ್ಟಿದೆ. ಬಸ್‌ಗಾಗಿ ಕಾದು ಕಾದು ಸಾಕಾದ ಜನರು, ಖಾಸಗಿ ಬಸ್ ಸಹ ಸಿಗೋದಿಲ್ಲ ಎಂದು ವಾಪಸ್ ಮೆನಗಳತ್ತ ತೆರಳಿದರು.