ಕಲಬುರಗಿ: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ನವೆಂಬರ್ 2 ರಂದು ಉದ್ದೇಶಿತ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್)ದ ರೂಟ್ ಮಾರ್ಚ್‌ನ ಆಯೋಜಕರೊಂದಿಗೆ ಮತ್ತೊಂದು ಶಾಂತಿ ಸಭೆ ನಡೆಸುವಂತೆ ಕರ್ನಾಟಕ ಹೈಕೋರ್ಟ್ ಗುರುವಾರ ಸೂಚಿಸಿದ್ದು, ಆರ್ ಎಸ್ಎಸ್ ಗೆ ತೀವ್ರ ಹಿನ್ನಡೆಯಾಗಿದೆ.
ನವೆಂಬರ್ 2ರಂದು ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥ ಸಂಚಲನಕ್ಕೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕಲಬುರಗಿ ಹೈಕೋರ್ಟ್ ವಿಭಾಗೀಯ ಪೀಠ, ಆ ಕುರಿತು ಚರ್ಚಿಸಲು ನವೆಂಬರ್ 5 ರಂದು ಅಡ್ವೊಕೇಟ್ ಜನರಲ್ ಕಚೇರಿಯಲ್ಲಿ ಜಿಲ್ಲಾ ಅಧಿಕಾರಿಗಳನ್ನು ಭೇಟಿ ಮಾಡುವಂತೆ ಆದೇಶಿಸಿದೆ.
ನವೆಂಬರ್ 5 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಅಡ್ವೊಕೇಟ್ ಜನರಲ್ ಕಚೇರಿಯಲ್ಲಿಯೇ ಶಾಂತಿ ಸಭೆ ನಡೆಸಲು ಸೂಚಿಸಿದ ಹೈಕೋರ್ಟ್, ವಿಚಾರಣೆಯನ್ನು ನವೆಂಬರ್ 7ಕ್ಕೆ ಮುಂದೂಡಿದೆ.
ಕಾರ್ಯಕ್ರಮದ ಲಾಜಿಸ್ಟಿಕ್ಸ್ ಮತ್ತು ಅನುಮತಿಗಳ ಕುರಿತ ಚರ್ಚೆಯಲ್ಲಿ ಭಾಗವಹಿಸುವಂತೆ ಅರ್ಜಿದಾರರನ್ನು ಪ್ರತಿನಿಧಿಸುವ ಅಡ್ವೊಕೇಟ್ ಜನರಲ್ ಶಶಿ ಕಿರಣ್ ಶೆಟ್ಟಿ ಮತ್ತು ಹಿರಿಯ ವಕೀಲ ಅರುಣಾ ಶ್ಯಾಮ್ ಅವರಿಗೆ ನ್ಯಾಯಾಲಯ ಸೂಚಿಸಿದೆ. ಅಲ್ಲದೆ ಈ ಸಭೆಯು ಒಂದು ನಿರ್ಣಯಕ್ಕೆ ದಾರಿ ಮಾಡಿಕೊಡುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.
ಅಕ್ಟೋಬರ್ 24 ರಂದು ಸಹ ಹೈಕೋರ್ಟ್ ಇದೇ ರೀತಿಯ ಶಾಂತಿ ಸಭೆಗೆ ನಿರ್ದೇಶನ ನೀಡಿತ್ತು. ಇದೀಗ ಮತ್ತೊಮ್ಮೆ ಶಾಂತಿ ಸಭೆ ನಡೆಸುವಂತೆ ಸೂಚಿಸಿದೆ. ಇದರೊಂದಿಗೆ ಚಿತ್ತಾಪುರದಲ್ಲಿ ನವೆಂಬರ್ 2ಕ್ಕೆ ನಡೆಯಬೇಕಿದ್ದ ಆರ್‌ಎಸ್‌ಎಸ್ ಪಥಸಂಚಲನಕ್ಕೆ ಬ್ರೇಕ್ ಬಿದ್ದಿದ್ದು, ನವೆಂಬರ್ 5ರ ಶಾಂತಿ ಸಭೆ ಆಧರಿಸಿ ಕೋರ್ಟ್ ತನ್ನ ತೀರ್ಪು ನೀಡಲಿದೆ.