ಬೆಂಗಳೂರು: ಸ್ವಚ್ಛ ಮತ್ತು ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನವೆಂಬರ್ ಒಳಗೆ ನಗರದ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಬುಧವಾರ ಹೇಳಿದ್ದಾರೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ) ಗುಂಡಿಗಳಿಗೆ ಆದಷ್ಟು ಬೇಗ ಮುಕ್ತಿ ನೀಡಲಿದೆ ಎಂದು ಡಿಸಿಎಂ ಭರವಸೆ ನೀಡಿದ್ದಾರೆ.
"ಸಮಸ್ಯೆಯನ್ನು ಪರಿಹರಿಸಲು ನವೆಂಬರ್ ಒಳಗೆ ಗುಂಡಿಗಳನ್ನು ಮುಚ್ಚಲು ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಮತ್ತು ಸುಗಮ ಸಂಚಾರ ನಮ್ಮ ಗುರಿಯಾಗಿರುವುದರಿಂದ, ಜಿಬಿಎ ಸಾಧ್ಯವಾದಷ್ಟು ಬೇಗ ಗುಂಡಿಗಳ ಸಮಸ್ಯೆ ಪರಿಹರಿಸುತ್ತದೆ" ಎಂದು ಡಿಸಿಎಂ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ ಅವರು, ಸೆಪ್ಟೆಂಬರ್ 14 ರಂದು ನಗರವು ರಸ್ತೆ ಅಭಿವೃದ್ಧಿಯಲ್ಲಿ ಪ್ರಮುಖ ಪ್ರಗತಿಗೆ ಸಿದ್ಧವಾಗಿದೆ. ದುರಸ್ತಿ ಮತ್ತು ನಿರ್ಮಾಣಕ್ಕಾಗಿ ರೂ 1,100 ಕೋಟಿ ಹಂಚಿಕೆ ಮಾಡಲಾಗಿದೆ ಎಂದು ಹೇಳಿದ್ದರು.
ಏತನ್ಮಧ್ಯೆ, ಬೆಂಗಳೂರು ಕೇಂದ್ರ ನಗರ ನಿಗಮ ಆಯುಕ್ತ ರಾಜೇಂದ್ರ ಚೋಳನ್ ಬುಧವಾರ ಸಿ.ವಿ. ರಾಮನ್ ನಗರ ವಿಭಾಗದ ವಿವಿಧ ಪ್ರದೇಶಗಳನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ಅವರು ಹಾನಿಗೊಳಗಾದ ಪಾದಚಾರಿ ಮಾರ್ಗಗಳು, ಗುಂಡಿಗಳಿಂದ ಕೂಡಿದ ರಸ್ತೆಗಳು, ತ್ಯಾಜ್ಯ ಮತ್ತು ಪರಿಣಾಮಕಾರಿಯಲ್ಲದ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಗುರುತಿಸಿದರು.
ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಲು ವಿಫಲರಾದ ಎಂಜಿನಿಯರ್‌ಗಳು ಮತ್ತು ಅಧಿಕಾರಿಗಳನ್ನು ಅಮಾನತುಗೊಳಿಸಲಾಗುವುದು ಎಂದು ಚೋಳನ್ ಎಚ್ಚರಿಸಿದರು.
ಜೀವನ್ ಬಿಮಾ ನಗರ ಮುಖ್ಯ ರಸ್ತೆಯಲ್ಲಿ ತ್ಯಾಜ್ಯದಿಂದ ತುಂಬಿದ ಖಾಲಿ ಜಾಗದ ಭೂಮಾಲೀಕರಿಗೆ ನೋಟಿಸ್ ನೀಡಬೇಕೆಂದು ಆಯುಕ್ತರು ಸೂಚಿಸಿದ್ದಾರೆ.
ಇದಲ್ಲದೆ, ಪಾದಚಾರಿ ಮಾರ್ಗಗಳು ಮತ್ತು ರಸ್ತೆಗಳನ್ನು ಅತಿಕ್ರಮಿಸಿ ನಿರ್ಮಿಸಲಾದ ಅನಧಿಕೃತ ಶೆಡ್‌ಗಳನ್ನು ತಕ್ಷಣವೇ ತೆರವುಗೊಳಿಸಲು ಮತ್ತು ಅತಿಕ್ರಮಣದಾರರಿಗೆ ದಂಡ ವಿಧಿಸಲು ಅವರು ಆದೇಶಿಸಿದರು.