ಗದಗ: ರಾಜ್ಯ ಸರ್ಕಾರದ ಬಹು ನಿರೀಕ್ಷಿತ ಜಾತಿ ಗಣತಿ ಸೋಮವಾರದಿಂದ ಆರಂಭವಾಗಲಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ಕ್ರಿಶ್ಚಿಯನ್ ಧರ್ಮದಡಿ ವಿವಿಧ ಜಾತಿಗಳ ಉಲ್ಲೇಖವನ್ನುತೋರಿಸುವ ಕಾಲಮ್ ಅನ್ನು ತೆಗೆದುಹಾಕಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಹೇಳಿದ್ದಾರೆ.
ಇಂದು ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಈ ವಿಷಯದಲ್ಲಿ "ರಾಜಕೀಯ ಮಾಡುತ್ತಿದೆ" ಎಂದು ಆರೋಪಿಸಿದರು.
ಉಪಜಾತಿ ವರ್ಗದಲ್ಲಿ 'ಕ್ರಿಶ್ಚಿಯನ್' ಧರ್ಮದಡಿ ವಿವಿಧ ಜಾತಿಗಳನ್ನು ಉಲ್ಲೇಖದ ಗೊಂದಲದ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, "ಈಗ ಅದನ್ನು ತೆಗೆದುಹಾಕಲಾಗಿದೆ" ಎಂದು ಹೇಳಿದರು.
ಮತ್ತಷ್ಟು ಸ್ಪಷ್ಟಪಡಿಸುತ್ತಾ, "ಅದನ್ನು ತೆಗೆದುಹಾಕಿದ್ದು ನಾನಲ್ಲ. ಹಿಂದುಳಿದ ವರ್ಗಗಳ ಆಯೋಗ. ಆಯೋಗವು ಶಾಸನಬದ್ಧ ಸಂಸ್ಥೆಯಾಗಿದ್ದು, ಸಮೀಕ್ಷೆ ನಡೆಸಲು ಮಾರ್ಗಸೂಚಿಗಳನ್ನಷ್ಟೇ ಸರ್ಕಾರ ನೀಡಿದೆ. 1,75,000 ಶಿಕ್ಷಕರನ್ನು ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿದ್ದಾರೆ. ಒಬ್ಬ ಶಿಕ್ಷಕರು ತಲಾ 150 ಮನೆಗಳಿಂದ ಮಾಹಿತಿ ಸಂಗ್ರಹಿಸಲಿದ್ದು, ಈ ಸಮೀಕ್ಷಾ ಕಾರ್ಯ 15 ದಿನಗಳ ಕಾಲ ನಡೆಯಲಿದೆ. ಸಮೀಕ್ಷೆಯಲ್ಲಿ ಧರ್ಮ, ಜಾತಿ, ಉಪಜಾತಿ, ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಮಾಹಿತಿಗಳನ್ನು ಕಲೆಹಾಕಲಿದ್ದಾರೆ ಎಂದರು.
ಬಿಜೆಪಿ ನಾಯಕರು ಸಲ್ಲಿಸಿದ ಪತ್ರವನ್ನು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ತಮಗೆ ಕಳುಹಿಸಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
"ಇದನ್ನು ಹೇಳಿದ್ದು ರಾಜ್ಯಪಾಲರಲ್ಲ. ನಾನು ಪತ್ರವನ್ನು ನೋಡಿದ್ದೇನೆ. ಬಿಜೆಪಿ ರಾಜಕೀಯ ಕಾರಣಗಳಿಗಾಗಿ ಇದನ್ನು ಮಾಡುತ್ತಿದೆ. ನಾನು ಬಿಜೆಪಿಗೆ ಉತ್ತರಗಳನ್ನು ನೀಡುತ್ತಲೇ ಇರಬೇಕೇ?" ಎಂದು ಸಿಎಂ ಪ್ರಶ್ನಿಸಿದರು.
ಕಾಂಗ್ರೆಸ್ ಜಾತಿಗಳನ್ನು ವಿಭಜಿಸುತ್ತಿದೆ ಎಂಬ ಬಿಜೆಪಿ ಆರೋಪದ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, "ನಾವು ಯಾವಾಗ ಜಾತಿಗಳನ್ನು ಒಡೆದಿದ್ದೇವೆ? ಸರ್ಕಾರ ನಿಮ್ಮ(ಜನರ) ಸಾಮಾಜಿಕ-ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಯನ್ನು ತಿಳಿದುಕೊಳ್ಳಬೇಕು. ಅದನ್ನು ತಿಳಿಯದೆ ನಾವು ನಿಮಗಾಗಿ ನೀತಿಗಳನ್ನು ಹೇಗೆ ರೂಪಿಸಬಹುದು?" ಎಂದು ಪ್ರಶ್ನಿಸಿದರು.
ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಈ ಸಮೀಕ್ಷೆ ಒಂದು ಪಿತೂರಿ ಎಂದು ಹೇಳಿರುವ ಬಗ್ಗೆ ಪ್ರತ್ರಿಯಿಸಿದ ಸಿಎಂ, ಕೇಂದ್ರ ಸರ್ಕಾರದ ಸಹ ಜಾತಿ ಜನಗಣತಿ ನಡೆಸುತ್ತಿದೆ. ಅದನ್ನು ಸಹ ಪಿತೂರಿ ಎಂದು ಪರಿಗಣಿಸಬಹುದೇ? ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರವೂ ಜಾತಿಸಮೀಕ್ಷೆ ನಡೆಸಲಿದ್ದು, ಅದರಲ್ಲಿಯೂ ಷಡ್ಯಂತ್ರವಿರಲಿದೆಯೇ? ಸಮೀಕ್ಷೆಗೆ ಯಾವುದೇ ಸಚಿವರು ವಿರೋಧ ವ್ಯಕ್ತಪಡಿಸಿಲ್ಲ. ಸಮಾಜದಲ್ಲಿ ಸಮಾನತೆ ತರಲು, ಬಡವರಿಗೆ ಸರ್ಕಾರಿ ಯೋಜನೆಗಳಲ್ಲಿ ಆದ್ಯತೆ ನೀಡಬೇಕಾಗುತ್ತದೆ. ಇದಕ್ಕಾಗಿ ಸಮೀಕ್ಷೆ ಅಗತ್ಯವಾಗಿದೆ. ಸಮೀಕ್ಷೆಯಿಂದ ಜಾತಿ ಒಡೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದರು.
ಕುರುಬ ಸಮಾಜವನ್ನು ಎಸ್ ಟಿ ಗೆ ಸೇರಿಸುವ ಶಿಫಾರಸ್ಸನ್ನು ಹಿಂದಿನ ಬಿಜೆಪಿ ಸರ್ಕಾರವೇ ಮಾಡಿತ್ತು. ಆದರೆ ಈ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ವಾಪಸ್ಸು ಕಳಿಸಿದ್ದು, ಅದಕ್ಕೆ ವಿವರಣೆಯನ್ನು ಸರ್ಕಾರ ನೀಡಲಿದೆ. ಯಾವುದೇ ಸಮುದಾಯವನ್ನು ಎಸ್ ಟಿ ಗೆ ಸೇರಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರವೇ ತೆಗೆದುಕೊಳ್ಳುತ್ತದೆ ಎಂದರು.