ಬೆಂಗಳೂರು: ಬೈಕ್ ಟ್ಯಾಕ್ಸಿ ನಿಷೇಧದ ನಂತರ, ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಭಾರತದಾದ್ಯಂತ ಬೈಕ್ ಟ್ಯಾಕ್ಸಿಗಳು ಕಾರ್ಯನಿರ್ವಹಿಸುತ್ತಿರುವ ನಗರಗಳಿಗೆ ಭೇಟಿ ನೀಡಿದ್ದು, ಹಲವು ಸವಾಲುಗಳ ನಡುವೆಯೂ ಅವುಗಳನ್ನು ಹೇಗೆ ನಿರ್ವಹಿಸಲಾಗುತ್ತಿದೆ ಎಂಬುದರ ಕುರಿತು ಅಧ್ಯಯನ ನಡೆಸಲಿದ್ದಾರೆ. ತಂಡವು ವರದಿಯನ್ನು ಸಾರಿಗೆ ಕಾರ್ಯದರ್ಶಿ ಎನ್‌ವಿ ಪ್ರಸಾದ್ ನೇತೃತ್ವದ ಉನ್ನತ ಮಟ್ಟದ ಸಮಿತಿಗೆ ಸಲ್ಲಿಸಲಿದೆ ಎಂದು ಮೂಲಗಳು ತಿಳಿಸಿವೆ.
ನಂತರ ಸಮಗ್ರ ವರದಿಯನ್ನು ಸಿದ್ಧಪಡಿಸಲು ತೀರ್ಮಾನಿಸಲಾಗಿದ್ದು, ಇದು ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿಗಳ ಭವಿಷ್ಯವನ್ನು ನಿರ್ಧರಿಸುವ ಸಾಧ್ಯತೆಯಿದೆ.
ಇಬ್ಬರು ಸಾರಿಗೆ ಅಧಿಕಾರಿಗಳ ತಂಡವನ್ನು ರಚಿಸಲಾಗಿದ್ದು, ಸದ್ಯ ಬೈಕ್ ಟ್ಯಾಕ್ಸಿಗಳ ಸೇವೆ ಲಭ್ಯವಿರುವ ಐದು ನಗರಗಳಾದ ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್ ಮತ್ತು ಕೋಲ್ಕತ್ತಾಗಳಿಗೆ ಭೇಟಿ ನೀಡಲು ಸೂಚಿಸಲಾಗಿದೆ.
ಟ್ಯಾಕ್ಸಿಗಳನ್ನು ಯಾವ ಮಾರ್ಗಸೂಚಿಗಳ ಅಡಿಯಲ್ಲಿ ನಿರ್ವಹಿಸಲಾಗುತ್ತದೆ, ಪರವಾನಗಿಗಳನ್ನು ಹೇಗೆ ನೀಡಲಾಗುತ್ತದೆ, ಶುಲ್ಕ ಮತ್ತು ಬೈಕ್ ಟ್ಯಾಕ್ಸಿಗಳಾಗಿ ಬಳಸಲು ಅನುಮತಿಸಲಾದ ವಾಹನಗಳ ಪ್ರಕಾರ ಯಾವುದು ಎಂಬುದರ ಕುರಿತು ಕಾನೂನು ಅಂಶಗಳನ್ನು ತಂಡ ಪರಿಶೀಲಿಸಲಿದೆ. ಇದಲ್ಲದೆ, ಈ ನಗರಗಳಲ್ಲಿನ ಸರ್ಕಾರಗಳು ಬೈಕ್ ಟ್ಯಾಕ್ಸಿ ಬಳಕೆದಾರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಕ್ರಮಗಳನ್ನು ಸಹ ಅಧ್ಯಯನ ನಡೆಸುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಮ್ಮ ಭೇಟಿಯ ಸಮಯದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯಲ್ಲಿನ ಸವಾಲುಗಳನ್ನು ಸಹ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಈ ವಾರ ತಮ್ಮ ವರದಿಯನ್ನು ಉನ್ನತ ಮಟ್ಟದ ಸಮಿತಿಗೆ ಸಲ್ಲಿಸುವ ನಿರೀಕ್ಷೆಯಿದೆ. ನಂತರ ಸಾರಿಗೆ ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗೆ ಅನುಮತಿ ನೀಡಲು ಯಾವುದೇ ನೀತಿಗಳನ್ನು ರೂಪಿಸುತ್ತಿಲ್ಲ ಎಂದು ರಾಜ್ಯ ಸಾರಿಗೆ ಇಲಾಖೆ ಆರಂಭದಿಂದಲೂ ಹೇಳುತ್ತಾ ಬಂದಿದೆ. ಆಗಸ್ಟ್‌ನಲ್ಲಿ ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿ ನೀತಿಯ ಕುರಿತು ನಿರ್ಧರಿಸಲು ರಾಜ್ಯ ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಿದ ನಂತರ ಅದು ತನ್ನ ಅಧಿಕಾರಿಗಳನ್ನು ಇತರ ನಗರಗಳಿಗೆ ಕಳುಹಿಸಿದೆ.
ಭಾರತದಲ್ಲಿ ಮೊದಲ ಬಾರಿಗೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ನೀತಿಯನ್ನು ಜಾರಿಗೆ ತಂದ ರಾಜ್ಯ ಕರ್ನಾಟಕ. 'ಕರ್ನಾಟಕ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ 2021' ಇದು ಇ-ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಗೆ ಅವಕಾಶ ಮಾಡಿಕೊಟ್ಟಿತು. ಆದಾಗ್ಯೂ, 2024 ರಲ್ಲಿ ಈ ಯೋಜನೆಯನ್ನು ಹಿಂತೆಗೆದುಕೊಳ್ಳಲಾಯಿತು. ಆದರೆ, 2024 ರಲ್ಲಿ, ಸರ್ಕಾರ ಈ ಯೋಜನೆಯನ್ನು ಹಿಂತೆಗೆದುಕೊಂಡಿತು. ಇದರ ಪರಿಣಾಮವಾಗಿ, ಇ-ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕಾನೂನುಬಾಹಿರ ಎನಿಸಿಕೊಂಡಿತು. ಸಾಮಾನ್ಯ ಪೆಟ್ರೋಲ್ ಎಂಜಿನ್ ದ್ವಿಚಕ್ರ ವಾಹನಗಳ ಕಾರ್ಯಾಚರಣೆಯನ್ನು ಕಾನೂನುಬದ್ಧಗೊಳಿಸುವ ಯಾವುದೇ ನೀತಿ ಇರಲಿಲ್ಲ.