ಮೈಸೂರು: ಕೃಷಿ ಸಾಲ ಮನ್ನಾಕ್ಕಿಂತ ಗ್ಯಾರಂಟಿ ಯೋಜನೆಗಳು ಹೆಚ್ಚು ಸಹಾಯಕವಾಗಿದೆ ಎಂದು ಚಲುವರಾಯಸ್ವಾಮಿಯವರು ಶುಕ್ರವಾರ ಹೇಳಿದ್ದಾರೆ.
ರೈತ ದಸರಾವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು, ಅಭಿವೃದ್ಧಿ ಹೊಂದಿದ ದೇಶಗಳ ಮಾದರಿಯಲ್ಲಿ ಸುಧಾರಿತ ಯಂತ್ರೋಪಕರಣಗಳನ್ನು ಬಳಸಿಕೊಂಡು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವಂತೆ ಕೃಷಿ ರೈತರಿಗೆ ಕರೆ ನೀಡಿದರು.
ಯಾಂತ್ರೀಕೃತ ಕೃಷಿಯು ಕಾರ್ಮಿಕರ ಕೊರತೆಯನ್ನು ನೀಗಿಸಲು ಮತ್ತು ರೈತರು ಉತ್ತಮ ಫಸಲು ಪಡೆಯಲು ಅನುವು ಮಾಡಿಕೊಡುವ ಮೂಲಕ ಆರ್ಥಿಕವಾಗಿ ಸಬಲೀಕರಣಗೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಿದರು.
ಪ್ರಸ್ತುತ ಸರ್ಕಾರದಿಂದ ರೈತರಿಗೆ ಅವಶ್ಯಕವಿರುವ ಸೌಲಭ್ಯ ಮತ್ತು ಮಾರ್ಗದರ್ಶನಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ರೈತ ದಸರಾ ಎಂಬ ಹೆಸರಿನಲ್ಲಿ ಕೃಷಿಗೆ ಸಂಬಂಧಿಸಿದ ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ ಸೇರಿದಂತೆ ಎಲ್ಲಾ ಇಲಾಖೆಗಳನ್ನು ಒಗ್ಗೂಡಿಸಿ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಭಾರತ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ರೈತ ಸಮುದಾಯದವರಿದ್ದು, ರೈತ ದಸರಾ ಹಮ್ಮಿಕೊಳ್ಳುವುದರಿಂದ ರೈತರಿಗೆ ಗೌರವ ಸಲ್ಲಿಸಲಾಗುತ್ತಿದೆ ಎಂದು ತಿಳಿಸಿದರು.
ಇನ್ನು ರೈತರು ಬೆಳೆಯುವ ಫಸಲಿಗೆ ಸಂಬಂಧಿಸಿದಂತೆ, ನಮ್ಮ ರೈತರಲ್ಲಿ ಕೆಲವರು ತಾವು ಸಂಗ್ರಹಿಸಿಟ್ಟುಕೊಂಡಂತಹ ಹಳೆ ತಳಿಯ ಬೀಜಗಳನ್ನೇ ಬೆಳೆ ಬೆಳೆಯಲು ಮುಂದಾಗುತ್ತಾರೆ. ಆದರೆ, ಸಂಗ್ರಹಿಸಲ್ಪಟ್ಟ ತಳಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ, ರೋಗನಿರೋಧಕ ಶಕ್ತಿ ಹೆಚ್ಚಿರುವಂತಹ ಮತ್ತು ಆಧುನಿಕ ಪದ್ಧತಿಯಿಂದ ಸಂಸ್ಕರಿಸಲ್ಪಟ್ಟ ತಳಿಗಳ ಬೇಸಾಯ ಮಾಡುವುದರಿಂದ ಉತ್ತಮ ಫಸಲನ್ನು ಬೆಳೆದು, ಹೆಚ್ಚಿನ ಇಳುವರಿ ಪಡೆದು ಆರ್ಥಿಕವಾಗಿ ಅಭಿವೃದ್ಧಿಗೊಳ್ಳಬೇಕು. ತಂತ್ರಜ್ಞಾನದ ಮೂಲಕ ಸಮಗ್ರ ಕೃಷಿಯನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಕಬ್ಬು ಕಟಾವು ಮಾಡುವ ಯಂತ್ರಕ್ಕೆ 1 ಕೋಟಿ ಬೆಲೆ ಇದ್ದು, ಸರ್ಕಾರದಿಂದ ಎಸ್ಸಿ- ಎಸ್ಪಿ ಸಮುದಾಯಗಳಿಗೆ ಶೇ.50 ರಷ್ಟು ಸಬ್ಸಿಡಿ ಆಧಾರದಲ್ಲಿ ಯಂತ್ರೋಪಕರಣ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆ ಯಂತ್ರೋಪಕರಣಕ್ಕಾಗಿಯೇ 1 ಸಾವಿರಕ್ಕೂ ಹೆಚ್ಚು ಕೋಟಿ ಮೀಸಲಿರಿಸಿದ್ದು, ಇದುವರೆಗೂ ಸುಮಾರು 334 ಫಲಾನುಭವಿಗಳು ಇದರ ಸೌಲಭ್ಯ ಪಡೆದುಕೊಂಡಿದ್ದಾರೆ ಎಂದರು.
ಇಲ್ಲಿಯವರೆಗೆ, 334 ರೈತರು ಭತ್ತ ನಾಟಿ ಯಂತ್ರಗಳು, ಕಳೆ ತೆಗೆಯುವ ಉಪಕರಣಗಳು, ಕೊಯ್ಲು ಯಂತ್ರಗಳು ಮತ್ತು ಇತರ ಆಧುನಿಕ ಉಪಕರಣಗಳನ್ನು ಖರೀದಿಸಲು ಸಬ್ಸಿಡಿಗಳ ಮೂಲಕ ಪ್ರಯೋಜನ ಪಡೆದಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾಲಯಗಳು ಮತ್ತು ಇಲಾಖೆಗಳು ರೈತರಿಗೆ ಲಭ್ಯವಿರುವ ಸೌಲಭ್ಯಗಳು-ಯೋಜನೆಗಳ ಬಗ್ಗೆ ನಿಯಮಿತವಾಗಿ ಶಿಕ್ಷಣ ನೀಡಬೇಕು, ಇದರಿಂದ ಅವರು ಅವುಗಳ ಸಂಪೂರ್ಣ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಿದರು.
ಬಳಿಕ ಕೃಷಿ ಸಾಲ ಮನ್ನಾ ಬೇಡಿಕೆ ಉಲ್ಲೇಖಿಸಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡುವಂತೆ ಕೆಲವರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಸಾಲ ಮನ್ನಾದಿಂದ ಎಷ್ಟು ಮಂದಿಗೆ ಅನುಕೂಲವಾಗುತ್ತದೆ? ನಮ್ಮ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದ ಶೇ.95 ಜನರಿಗೆ ಸೌಲಭ್ಯ ದೊರೆಯುತ್ತಿದೆ ಎಂದರು.
ರೈತರಿಗೆ ಸಾಲ ಮನ್ನಾಕ್ಕಿಂತ 5 ಗ್ಯಾರಂಟಿ ಯೋಜನೆಯಿಂದ ಹೆಚ್ಚು ಅನುಕೂಲವಾಗಿದೆ. ಹಿಂದಿನ ಯಾವುದೇ ಸರ್ಕಾರಗಳು ಸಾಲ ಮನ್ನಾಕ್ಕೆ 5 ರಿಂದ 12 ಸಾವಿರ ಕೋಟಿ ರೂ. ವ್ಯಯಿಸರಬಹುದು. ಗ್ಯಾರಂಟಿ ಯೋಜನೆ ಗಳಿಗೆ ಎರಡೂವರೆ ವರ್ಷದಲ್ಲಿ 3 ಲಕ್ಷ ಕೋಟಿ ರೂ. ಖರ್ಚು ಮಾಡಲಾಗಿದೆ. ಸೊಸೈಟಿಗೆ ಸರಿ ಯಾಗಿ ಸಾಲ ಪಾವತಿಸದವರು ಮಾತ್ರ ಮನ್ನಾ ಮಾಡುವಂತೆ ಕೇಳುತ್ತಾರೆ. ಇದು ಸರಿಯಲ್ಲ ಎಂದರು.
ರೈತರು ಸುಳ್ಳು ಹೇಳುವವರನ್ನು ನಾಟಕ ಮಾಡುವವರನ್ನು ನಂಬಬಾರದು. ನಾವು ಸರಿಯಾಗಿ ಕೆಲಸ ಮಾಡಿದ್ದರೆ ಮತ್ತೊಂದು ಬಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಇಡೀ ರಾಷ್ಟ್ರದಲ್ಲಿ ರಸಗೊಬ್ಬರದ ಕೊರೆತಿದೆ. ಆಮದು, ಉತ್ಪಾದನೆಯಿಲ್ಲದಂತಾಗಿ ಪೂರೈಕೆ ಕೆ ಕೊರತೆ ಎದುರಾಗಿದೆ. ಇದೆಲ್ಲವು ಕೇಂದ್ರ ಸರ್ಕಾರದ ಜವಾಬ್ದಾರಿಯಾದರೂ, ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತಿದೆ. ಸುಳ್ಳು ಹೇಳಿ ಗೊಂದಲ ಮೂಡಿಸುತ್ತಿದ್ದಾರೆ ಎಂದರು.
ಬಿಜೆಪಿ, ಜೆಡಿಎಸ್ ಪಕ್ಷದವರು ಯೋಜನೆಗಳ ಬಗ್ಗೆ ಮಾತನಾಡುವುದಿಲ್ಲ. ಮುಡಾ ಸೇರಿದಂತೆ ವಿವಿಧ ಹೋರಾಟ ಮಾಡಿದ್ದಾರೆ. ವಾಸ್ತವ ಸತ್ಯವನ್ನು ನಿಮ್ಮ ಮುಂದಿಡುವುದಿಲ್ಲ. ಈಗ ಜಾತಿಯನ್ನು ಮುಂದೆ ತಂದಿದ್ದಾರೆ. ನಮ್ಮದು ಜಾತ್ಯಾತೀಯ ರಾಷ್ಟ್ರವಾದರೂ ಆಗಾಗ ಕೋಮುದ್ವೇಷ, ಜಾತಿ ಹೆಸರಿನಲ್ಲಿ ಬೆಂಕಿ ಹಚ್ಚುತ್ತಿದ್ದಾರೆ. ಅವರಿಗೆ ಹಿಂದುತ್ವ ಬಿಟ್ಟರೇ ಜನರಿಗೆ ಅನುಕೂಲಕರವಾದ ಸ್ಲೋಗನ್ ಇಲ್ಲ ಎಂದು ಕಿಡಿಕಾರಿದರು.
ಬಿಜೆಪಿ ಕೇಂದ್ರ ಸರ್ಕಾರವೇ ಜಿಎಸ್ಟಿ ಜಾರಿಗೆ ತಂದು, ಈಗ ಕಡಿಮೆ ಮಾಡಿದ್ದಾರೆ. ನಾವ್ಯಾಕೆ ಅವರನ್ನು ಅಭಿನಂದಿಸಬೇಕು? ಇಲ್ಲಿ ಯಾರು ಶಾಶ್ವತವಲ್ಲ, ಎಲ್ಲರಿಗೂ ಕೊನೆಯಿದೆ ಎಂದರು.