ಡಿ.ಕೆ ಸುರೇಶ್ 
ರಾಜ್ಯ

ಕೇಂದ್ರಕ್ಕೆ ಆದಾಯ ತೆರಿಗೆ ಕಟ್ಟುವ ಬದಲು ರೈತರಿಗೆ ಪ್ರೋತ್ಸಾಹಧನ ಹಂಚಿಕೆ; ಹಾವುಗಳಿಗಿಂತ ಇಲಿ-ಹೆಗ್ಗಣ, ಇರುವೆಗಳ ಗೂಡು ಹೆಚ್ಚಿದೆ: ಡಿ.ಕೆ ಸುರೇಶ್

ನಾನು ಲಾಭ ತೋರಿಸಿದರೆ ಮಾತ್ರ ಅಲ್ಲವೇ ತೆರಿಗೆ ಕಟ್ಟಬೇಕು. ನಮ್ಮ ರೈತರ ಹಣ ರೈತರಿಗೆ ಮರಳಿ ಹೋಗಬೇಕು ಎಂದು 60 ಕೋಟಿ ಹಣವನ್ನು ಮರಳಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ .

ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಕಟ್ಟುವ ಬದಲು ಅದನ್ನು ರೈತರಿಗೆ ಹಂಚಲಾಗುತ್ತಿದೆ. ಅಧಿಕಾರಿಗಳು ಆದಾಯ ತೆರಿಗೆ ಕಟ್ಟಬೇಕು ಎಂದರು. ನಾನು ಲಾಭ ತೋರಿಸಿದರೆ ಮಾತ್ರ ಅಲ್ಲವೇ ತೆರಿಗೆ ಕಟ್ಟಬೇಕು. ನಮ್ಮ ರೈತರ ಹಣ ರೈತರಿಗೆ ಮರಳಿ ಹೋಗಬೇಕು ಎಂದು 60 ಕೋಟಿ ಹಣವನ್ನು ಮರಳಿ ಪ್ರೋತ್ಸಾಹ ಧನ ನೀಡಲಾಗುತ್ತಿದೆ ಎಂದು ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್ ಹೇಳಿದರು.

ಬೆಂಗಳೂರಿನ ಡಾ. ಬಾಬು ಜಗಜೀವನ್ ರಾಮ್ ಭವನದಲ್ಲಿ ಬುಧವಾರ ನಡೆದ ಬಮೂಲ್ ಒಕ್ಕೂಟ ವ್ಯಾಪ್ತಿಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಿಬ್ಬಂದಿಗೆ ವಿಶೇಷ ಪ್ರೋತ್ಸಾಹ ಧನದ ಚೆಕ್‌ ವಿತರಣಾ ಸಮಾರಂಭದಲ್ಲಿ ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಮಾತನಾಡಿದರು.

ನಾನು ಲಾಭ ತೋರಿಸಿಲ್ಲ. 1,28,400 ರೈತರಿಗೆ 1 ರೂಪಾಯಿ ಹಣವನ್ನು ಹೆಚ್ಚುವರಿಯಾಗಿ ನೀಡುತ್ತಿದ್ದೇನೆ. 2025 ರ ಏಪ್ರಿಲ್ 1 ರಿಂದ 2026 ಮಾರ್ಚ್ 31 ರವರೆಗೆ ಲೆಕ್ಕಾಚಾರ ಹಾಕಿ ಪ್ರೋತ್ಸಾಹ ಧನ ನೀಡಲಾಗಿದೆ. ಆನೇಕಲ್, ಬೆಂಗಳೂರು ದಕ್ಷಿಣ, ಕನಕಪುರಕ್ಕೆ ಮೊದಲು ನೀಡಲಾಗಿದೆ ಏಕೆಂದರೆ ಇವರು ಎಲ್ಲಾ ದತ್ತಾಂಶಗಳನ್ನು ಮೊದಲಿಗೆ ಸಲ್ಲಿಕೆ ಮಾಡಿದ್ದರು.‌ ಯಾರಿಗೂ ಮೋಸವಾಗದಂತೆ ಪ್ರತಿಯೊಬ್ಬರಿಗೂ ಹಣ ತಲುಪಿಸಬೇಕು. ಇದಕ್ಕೆ ರೈತರೇ ಜವಾಬ್ದಾರರುಎಂದರು.

ಮಾರುಕಟ್ಟೆಯ ಬಗ್ಗೆ ತಿಳಿದುಕೊಂಡು ಹೊಸ ನಿಯಮಗಳನ್ನು ಮಾಡಿ ಬಮುಲ್ 70 ಕೋಟಿ ರೂ. ಲಾಭ ಗಳಿಸಿದೆ. ಕಳೆದ ವರ್ಷ ಕೆಎಂಎಫ್ 180 ಕೋಟಿ ಲಾಭ ಗಳಿಸಿದೆ. ಆದರೆ 60- 70 ಕೋಟಿ ಆದಾಯ ತೆರಿಗೆಯನ್ನು ಕೇಂದ್ರಕ್ಕೆ ಕಟ್ಟಿದೆ. ಇದು ಯಾರ ಹಣ? ಬೆವರು ಸುರಿಸಿ ದುಡಿದ ನಮ್ಮ ರೈತರ ಹಣ. ಆಗ ನಾನು ಅಧಿಕಾರಿಗಳಿಗೆ ಹೇಳಿದೆ.‌ ನಿಮಗೆ ಯಾರಿಗೂ ಲೆಕ್ಕಾಚಾರ ಗೊತ್ತಿಲ್ಲ ಎಂದು ಹೇಳಿದ್ದೇ ಎಂದರು.

ಬಮುಲ್ ಈ ಹಿಂದೆ ಹೇಗೆ ಕಾರ್ಯನಿರ್ವಹಣೆ ಮಾಡುತ್ತಾ ಇತ್ತು ಎನ್ನುವ ವ್ಯಾಖ್ಯಾನ ಬೇಡ. ಮುಂದಿನ ಪ್ರಗತಿಯ ಬಗ್ಗೆ ಮಾತ್ರ ಚಿಂತನೆ ಬೇಕು. ರೈತರ ಉದ್ದಾರದ ಬಗ್ಗೆ ಆಲೋಚನೆ ಮಾಡಬೇಕು. ನನ್ನ ನಂಬಿದ ನಾಯಕರ ನಂಬಿಕೆ ಉಳಿಯಬೇಕು" ಎಂದರು‌.

"ಬಮುಲ್ ಬಗ್ಗೆ ಇನ್ನೂ ತಿಳಿದುಕೊಳ್ಳುತ್ತಲೇ ಇದ್ದೇನೆ. ಹಾವು ಬುಸುಗುಡುತ್ತಾ ಓಡಾಡಿದರೆ ಎಚ್ಚರಿಕೆವಹಿಸಬಹುದು. ಆದರೆ ಇಲ್ಲಿ ಇಲಿ ಹೆಗ್ಗಣಗಳು ಸೇರಿಕೊಂಡಿವೆ. ಜೊತೆಗೆ ಇರುವೆಗಳ ಗೂಡೇ ಇದೆ. ಒಂದೊಂದು ಇರುವೆಯನ್ನು ಪೈಸೆಗೆ ಹೋಲಿಸಿದರೂ ಕೋಟಿ ಲೆಕ್ಕಾಚಾರ. ಆದರೂ ಮುಖಂಡರುಗಳು ಇನ್ನೂ ಇದೆ ಎನ್ನುತ್ತಾರೆ" ಎಂದು ಮಾರ್ಮಿಕವಾಗಿ ನುಡಿದರು.

ಸರ್ಕಾರ ಹಾಲಿನ ಬೆಲೆಯನ್ನು 4 ರೂಪಾಯಿ ಹೆಚ್ಚಳ ಮಾಡಿತು ಆದರೆ ಈ ಹಣವನ್ನು ನೇರ ರೈತರಿಗೆ ನೀಡಬೇಕು ಎಂದು ತಿಳಿಸಿತು. ಈ ಸಂದರ್ಭದಲ್ಲಿ 14 ಹಾಲು ಒಕ್ಕೂಟಗಳಿಂದ 1.5 ಕೋಟಿ ಲೀಟರ್ ಹಾಲನ್ನು ನಾವು ಸಂಗ್ರಹ ಮಾಡುತ್ತಿದ್ದೆವು. ಬಮುಲ್ 18 ಲಕ್ಷ ಲೀ. ಹಾಲು ಸಂಗ್ರಹ ಮಾಡುತ್ತಿತ್ತು. ನೇರ ಹಾಲಿನ ಮಾರಾಟ 9-10 ಲಕ್ಷ ಲೀಟರ್ ಮಾತ್ರ. ಮಿಕ್ಕ 8 ಲಕ್ಷ ಲೀಟರ್ ಹಾಲಿಗೆ 4 ರೂಪಾಯಿಯನ್ನು ಒಕ್ಕೂಟವೇ ಪಾವತಿ ಮಾಡಬೇಕಾಗಿತ್ತು.

ಇದರಿಂದ ತಿಂಗಳಿಗೆ 10 ಕೋಟಿ ರೂ. ನಷ್ಟ ಅಂದಾಜು ಮಾಡಲಾಗಿತ್ತು. ಆಗ ನಿರ್ದೇಶಕರು ಹಣ ಕಡಿತದ ಬಗ್ಗೆ ಹೇಳಿದರು. ನಾನು ಯಥಾಸ್ಥಿತಿ ಮುಂದುವರೆಯುಲಿ ಎಂದು ಮನವಿ ಮಾಡಿದೆ. ನಂತರ ಎಲ್ಲಾ ವಿಭಾಗಗಳ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸಿ. ಕಳೆದ ಡಿಸೆಂಬರ್ ನಲ್ಲಿ 3 ಕೋಟಿ ರೂ. ಲಾಭ ಮಾಡಿದೆವು. ನಂತರ ಕ್ರಮೇಣ ತಿಂಗಳಿಗೆ 10 ಕೋಟಿ ರೂ.ಗೆ ತಲುಪಿದೆವು" ಎಂದರು.

ಒಂದು ಲೀಟರ್ ಹಾಲಿನ ಪುಡಿ ಮಾಡಿದರೆ 7 ರೂಪಾಯಿ ನಷ್ಟವಾಗುತ್ತದೆ. ಎಲ್ಲಾ ಹಾಲು ಒಕ್ಕೂಟಗಳಿಗೆ ಹೋಲಿಸಿದರೆ ಬಮುಲ್ ನಲ್ಲಿ ಉತ್ಪಾದನಾ ವೆಚ್ಚ ಹೆಚ್ಚಿದೆ. 300 ರೂಪಾಯಿಗಿಂತ ಹೆಚ್ಚು ದರಕ್ಕೆ ಮಾರಾಟ ಮಾಡಿದರೆ ಮಾತ್ರ ಹಾಲಿನ ಪುಡಿ ಲಾಭ ಮಾಡಬಹುದು. ಆದರೆ ಸರ್ಕಾರಿ ಸಂಸ್ಥೆ ಕಡಿಮೆಗೆ ನೀಡಬೇಕು. ಜೊತೆಗೆ ಗುಣಮಟ್ಟ ಉಳಿಸಿಕೊಳ್ಳಬೇಕು ಎಂಬುದು ನಮ್ಮ ಧ್ಯೇಯ" ಎಂದರು.

6 ಸಾವಿರ ಸಿಬ್ಬಂದಿಗಳು ಸರಿಯಾಗಿ ಕೆಲಸ ಮಾಡಿದರೆ, ಒಂದೊಂದು ಕೇಂದ್ರದಿಂದ 200 ಲೀಟರ್ ಹಾಲು ಉತ್ಪಾದನೆ ಹೆಚ್ಚಳವಾದರೆ, 20 ಲಕ್ಷ ಹಾಲು ಉತ್ಪಾದನೆ ಕಷ್ಟವೇನಲ್ಲ. ಮಂಡ್ಯದಿಂದ 75 ಸಾವಿರ, ಶಿವಮೊಗ್ಗ ವಿಭಾಗದಿಂದ 50 ಸಾವಿರ, ಖಾಸಗಿಯವರಿಂದ ವಾರಕ್ಕೆ 1.5 ಲಕ್ಷ ಲೀಟರ್ ಹಾಲು ಪಡೆಯಲಾಗುತ್ತಿದೆ. ಅದರ ಬದಲು ನಮ್ಮ ರೈತರೇ ಹೆಚ್ಚು ಹಾಲು ನೀಡುವಂತಾಗಬೇಕು. ಕನಕಪುರವೊಂದರಲ್ಲೇ 12 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸುವ ಗುರಿ ಹೊಂದಲಾಗಿದೆ" ಎಂದು ತಿಳಿಸಿದರು.

*ಬೇರೆ ಕಂಪೆನಿಗಳಿಗೆ ವಿಮೆ ನೀಡುವ ಬದಲು ಬಮುಲ್ ನಿಂದಲೇ ಜಾನುವಾರು ವಿಮೆಯನ್ನು ಈ ವರ್ಷದಿಂದ ನೀಡಲಾಗುವುದು. 60-80 ಸಾವಿರಕ್ಕೆ ಒಂದು ದರ, 1 ಲಕ್ಷದ ಮೇಲೆ ಇನ್ನೊಂದು ದರ ಹೀಗೆ ಚರ್ಚೆ ಮಾಡಿ ನಿಗದಿ ಮಾಡಲಾಗುವುದು. ರೈತರು ಒಳ್ಳೆಯ ಬ್ರೀಡ್ ಹಸುಗಳನ್ನು ಸಾಕಿ 15,20 ಲೀಟರ್ ಗಿಂತ ಹೆಚ್ಚು ಹಾಲು ಪಡೆದರೆ ಲಾಭ ಕಾಣಬಹುದು ಎಂದು ನಾವು ಈ ವಿಚಾರವಾಗಿ ಮಾರ್ಗದರ್ಶನ ನೀಡುತ್ತಿದ್ದೇವೆ" ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಭಟ್ಕಳ ದುರಂತ: ತಟ್ಟೆಹಕ್ಕಲು ನದಿಯಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ 10ಕ್ಕೇರಿಕೆ, ತಲಾ 5 ಲಕ್ಷ ಪರಿಹಾರ ಘೋಷಿಸಿದ ಸರ್ಕಾರ!

ಎಚ್ ಡಿ ಕುಮಾರಸ್ವಾಮಿ ಸಮ್ಮುಖದಲ್ಲಿ ಜೆಡಿಎಸ್‌ಗೆ ಸೇರಿದ Biggboss ಮಾಜಿ ಸ್ಪರ್ಧಿ ಜಾಹ್ನವಿ!

ಬೆಂಗಳೂರು: ಲೀಗ್ ಪಂದ್ಯದ ವೇಳೆ ಹೃದಯಾಘಾತದಿಂದ 39ನೇ ವಯಸ್ಸಿಗೆ ಕರ್ನಾಟಕದ ಕ್ರಿಕೆಟಿಗ ನಿಧನ!

ಶೀಘ್ರದಲ್ಲೇ ವಿಶ್ವಕ್ಕೆ ಸಿಹಿ ಸುದ್ದಿ: ಅಮೆರಿಕಾ–ಇರಾನ್ ಸಂಘರ್ಷ ಅಂತ್ಯ ಸಾಧ್ಯತೆ, ಮಾರ್ಕೊ ರುಬಿಯೊ ಮಹತ್ವದ ಹೇಳಿಕೆ..!

KL Rahul ಆಯ್ತು ಇದೀಗ ರಿಷಬ್ ಪಂತ್ ನಾಯಕತ್ವಕ್ಕೆ ಕುತ್ತು?: LSG ಡೈರೆಕ್ಟರ್ ಟಾಮ್ ಮೂಡಿ ಸುಳಿವು!

SCROLL FOR NEXT