ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯುವಕನೊಬ್ಬ ಮದುವೆಯಾದ ಮೊದಲ ದಿನವೇ, ನೀ ನನಗೆ ಇಷ್ಟ ಇಲ್ಲ ಎಂದು ಪತ್ನಿಗೆ ಹೇಳುವ ಮೂಲಕ ಬಿಗ್ ಶಾಕ್ ನೀಡಿದ್ದು, ತಲಾಕ್ ಬ್ಯಾನ್ ಆಗಿದ್ರು ತಲಾಕ್ ನೀಡಿ ಪತ್ನಿಯಿಂದ ದೂರವಾಗಿದ್ದಾನೆ.
ಈ ಸಂಬಂಧ ನವ ವಿವಾಹಿತೆ ಪೊಲೀಸರಿಗೆ ದೂರು ನೀಡಿದ್ದು, ತನ್ನ ಪತಿ ಮತ್ತು ಕುಟುಂಬಸ್ಥರು ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ ದೂರು ನೀಡಿ 8 ತಿಂಗಳಾದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪವೂ ಕೇಳಿಬಂದಿದೆ.
ನಾನು ಪೊಲೀಸರಿಗೆ ದೂರು ನೀಡಿದ್ದಕ್ಕೆ ಮತ್ತು ಪರಿಹಾರ ಕೇಳಿದ್ದಕ್ಕೆ ಪತಿ ಕಡೆಯಿಂದ ನನಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ.
ಬೆಂಗಳೂರಿನ ಶೇಕ್ ಅಫ್ರಾನ್ ಎಂಬ ಯುವಕನ ವಿರುದ್ಧ ಪತ್ನಿ ದೂರು ನೀಡಿದ್ದು, 2025ರ ಜೂನ್ನಲ್ಲಿ ನಮ್ಮ ಮದುವೆ ಆಗಿದ್ದು, ಮದುವೆಯಾದ ಮೊದಲ ದಿನವೇ, ನೀ ನನಗೆ ಇಷ್ಟ ಇಲ್ಲ ಎಂದು ಪತಿ ಹೇಳಿದರು. ಆದರೆ ವಿವಾಹದ ವೇಳೆ ಕಾರು ಸೇರಿದಂತೆ ಸಾಕಷ್ಟು ವರದಕ್ಷಿಣೆಯನ್ನು ನೀಡಲಾಗಿದೆ. ಹೀಗಿದ್ದರೂ ಬೇರೆ ಯುವತಿ ಜೊತೆಗೆ ಆತ ಸಂಬಂಧ ಹೊಂದಿದ್ದ. ಇದೇ ಕಾರಣಕ್ಕೆ ಯುವತಿಗೆ ಹಿಂಸೆ ನೀಡುತ್ತಿದ್ದ. ಅಲ್ಲದೆ ಆತನ ಜೊತೆಗೆ ಕುಟುಂಬಸ್ಥರೂ ಮಸಾಜ್ ಮಾಡುವಂತೆ ಕಿರುಕುಳ ನೀಡುತ್ತಿದ್ದರು. ಕೈ ಮೇಲೆ ಬಿಸಿನೀರು ಸುರಿದು ಚಿತ್ರಹಿಂಸೆ ಕೊಟ್ಟಿದ್ದರು. ನಿನ್ನನ್ನು ಮದುವೆ ಮಾಡಿಸಿ ಮನೆಗೆ ಕರೆತಂದಿದ್ದು, ಮನೆ ಕೆಲಸ ಮಾಡಲು. ಇಲ್ಲದಿದ್ದರೆ ಮನೆ ಬಿಟ್ಟು ಹೋಗು ಎಂದು ಬೆದರಿಸಿರೋದಾಗಿ ಆರೋಪಿಸಿ ನವೆಂಬರ್ನಲ್ಲಿ ಯುವತಿ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದಾರೆ.
8 ತಿಂಗಳಾದರೂ ಕೇಸ್ ದಾಖಲಿಸಿದ ಪೊಲೀಸರು
ಇನ್ನು ಪತಿ ಮನೆಯವರ ಕಿರುಕುಳ ಸಂಬಂಧ ಪ್ರಕರಣ ದಾಖಲಿಸಲು ಸಂತ್ರಸ್ತ ಯುವತಿ ಬಳಿ ಅಂದಿನ ಆಗ್ನೇಯ ಮಹಿಳಾ ಠಾಣಾ ಇನ್ಸ್ಪೆಕ್ಟರ್ 1.2 ಲಕ್ಷ ರೂ. ಲಂಚ ಪಡೆದಿದ್ದರು ಎಂದೂ ಆರೋಪಿಸಲಾಗಿದೆ. ಅಲ್ಲದೆ ಆರೋಪಿಗಳು ಪ್ರಭಾವಿ ಸಚಿವರೊಬ್ಬರ ಕಡೆಯವರು ಎಂಬ ಕಾರಣಕ್ಕೆ ಅವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಲಾಗಿದೆ. ಸಚಿವರ ಆಪ್ತ ಸಹಾಯಕ(ಪಿಎ)ನೇ, ಈ ಹುಡುಗ ತಮ್ಮ ಅಣ್ಣನ ಮಗ ಎಂದು ಹೇಳಿ, ಮದುವೆ ಮಾಡಿಸಿದ್ದರು. ಹೀಗಾಗಿ ನಮಗಾದ ಅನ್ಯಾಯದ ಬಗ್ಗೆ ಕೇಳಲು ಹೋದರೆ ಯಾರೂ ಸಹಕಾರ ನೀಡುತ್ತಿಲ್ಲ ಎಂದು ಯುವತಿ ಕುಟುಂಬ ದೂರಿದೆ.