ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲೂಕಿನ ಗಡಿದಂ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಎಸ್.ಎನ್. ಚಾರಿಟೇಬಲ್ ಟ್ರಸ್ಟ್ ವತಿಯಿಂದ 23ನೇ ವರ್ಷದ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಬರೋಬ್ಬರಿ 106 ಜೋಡಿಗಳು ಸಾಮೂಹಿಕ ವಿವಾಹದ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ನೂತನ ದಂಪತಿಗಳಿಗೆ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಸೀಮೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸೀಮೆ ಹಸುವಿನ ಜೊತೆಗೆ 50 ಸಾವಿರ ರೂ. ನಗದು ಸಹಾಯ ನೀಡಿದ್ದಾರೆ. ಇನ್ನು ಸಾಮೂಹಿಕ ವಿವಾಹದ ಜೊತೆಗೆ ಶ್ರೀ ತಿರುಮಲ ತಿರುಪತಿ ದೇವಸ್ಥಾನದ ವತಿಯಿಂದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣೋತ್ಸವವನ್ನೂ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಸಚಿವ ಕೆ.ಹೆಚ್.ಮುನಿಯಪ್ಪ, ಮಾಜಿ ಸಂಸದ ಡಿ.ಕೆ. ಸುರೇಶ್, ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ, ಮಾಜಿ ಸಚಿವ ಶಿವಶಂಕರ ರೆಡ್ಡಿ, ಮಾಜಿ ಶಾಸಕ ಎನ್. ಸಂಪಂಗಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಸುಬ್ಬಾರೆಡ್ಡಿ ನೇತೃತ್ವದ ಟ್ರಸ್ಟ್ ಕಳೆದ 23 ವರ್ಷಗಳಿಂದ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇಲ್ಲಿಯವರೆಗೆ ಸುಮಾರು 10,000 ಜೋಡಿಗಳು ಸಾಮೂಹಿಕ ವಿವಾಹದ ಪ್ರಯೋಜನ ಪಡೆದಿವೆ.