ಬೆಳಗಾವಿ: ನರೇಗಾ ಯೋಜನೆ ಹೆಸರಿನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಲು ರಾಜ್ಯ ಸರ್ಕಾರ ಸದನವನ್ನು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಆರೋಪಿಸಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಬಹಳ ಚಾಣಾಕ್ಷತನದ ನಡೆ ಅನುಸರಿಸುತ್ತಿದ್ದಾರೆ. ತಮ್ಮ ಕುರ್ಚಿ ಉಳಿಸಿಕೊಳ್ಳಲು ಕಾಲಹರಣ ಮಾಡಲು, ಡಿ ಕೆ ಶಿವಕುಮಾರ್ ಗೆ ಕೈಕೊಡಲು ಸದನವನ್ನು ಬಳಸಿಕೊಳ್ಳುತ್ತಿದ್ದಾರೆ. ಈ ಸರ್ಕಾರ ಬಂದು ಮೂರು ವರ್ಷಗಳಾಗುತ್ತಾ ಬಂದಿದೆ. ಈ ಅವಧಿಯಲ್ಲಿ ನೀವು ಏನು ಕಡೆದು ಕಟ್ಟಿಹಾಕಿದ್ದೀರಿ ಎಂಬುದನ್ನು ಹೇಳಲಿ ಎಂದರು.
ಸದನದಲ್ಲಿ ಈ ನಾಡಿನ ಜನರ ಒಳಿತಿನ ಬಗೆಗಿನ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ, ಕೇಂದ್ರ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟಲು ಸದನ ಬಳಸಿಕೊಳ್ಳುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ. ಶಾಸನ ಸಭೆಯ ಪಾವಿತ್ರ್ಯತೆ ಹಾಳು ಮಾಡಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆ ಬಗ್ಗೆ ಪದೇ ಪದೆ ಮಾತನಾಡುವ ಸಿದ್ದರಾಮಯ್ಯ ಅವರು ಒಕ್ಕೂಟ ವ್ಯವಸ್ಥೆ ಹಾಳು ಮಾಡುವಂತ ಕುತಂತ್ರವನ್ನು ನಡೆಸುತ್ತಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ. ನಾಡಿನ ಹಿತವನ್ನು ಮರೆತು ಪದೇ ಪದೆ ಕೇಂದ್ರ ಸರ್ಕಾರದ ವಿರುದ್ಧ ವಿಷ ಕಾರುವ ರಾಜ್ಯದ ಮುಖ್ಯಮಂತ್ರಿಗಳು ರಾಜ್ಯದ ಒಳಿತಿನ ಬಗ್ಗೆ ಚಿಂತನೆ ಮಾಡದೇ ಜನರನ್ನು ಎತ್ತಿ ಕಟ್ಟುವುದರಲ್ಲೇ ಎರಡೂವರೇ ವರ್ಷ ಕಳೆದಿದ್ದಾರೆ ಎನ್ನುವುದು ಸತ್ಯ ಎಂದು ವಿಜಯೇಂದ್ರ ಕಿಡಿಕಾರಿದರು.
ಸಿದ್ದರಾಮಯ್ಯ ಅವರು ಚಾಣಾಕ್ಷ ನಡೆ ಅನುಸರಿಸುತ್ತಿದ್ದಾರೆ. ಒಂದು ಕಡೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವುದು ಒಂದು ಆದ್ಯತೆಯಾದರೆ, ಮತ್ತೊಂದು ಕಡೆ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಕಾಲಹರಣ ಮಾಡುತ್ತಾ, ಡಿ.ಕೆ.ಶಿವಕುಮಾರ ಅವರಿಗೆ ಕೈ ಕೊಡುವುದಕ್ಕೆ ಈ ವಿಶೇಷ ಅಧಿವೇಶನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ವಿಜಯೇಂದ್ರ ದೂರಿದರು.
ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಸಮೀಪಿಸುತ್ತಿದೆ. ನೀವೇನು ಸಾಧನೆ ಮಾಡಿದ್ದೀರಿ? ಜನಪರ ಯೋಜನೆಗಳನ್ನು ಏನು ಕೊಟ್ಟಿದ್ದೀರಿ? ಏನು ಕಡೆದು ಕಟ್ಟೆ ಹಾಕಿದ್ದೀರಿ? ಇದರ ಬಗ್ಗೆ ಚರ್ಚೆ ಮಾಡಿದರೆ ಒಳಿತು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಜಯೇಂದ್ರ ಹರಿಹಾಯ್ದರು.
ರಾಜ್ಯ ರಾಜಕಾರಣಕ್ಕೆ ಹೆಚ್ಡಿಕೆ ಮರಳಿದರೆ ತಪ್ಪೇನು? ರಾಜ್ಯ ರಾಜ್ಯ ರಾಜಕಾರಣಕ್ಕೆ ಮರಳುವುದಾಗಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ಅದರಲ್ಲಿ ತಪ್ಪೇನಿದೆ? ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಈ ನಾಡಿಗೆ ಅವರದ್ದೇ ಆದ ಕೊಡುಗೆ ನೀಡಿದ್ದಾರೆ. ಹಾಗಾಗಿ, ಮತ್ತೆ ರಾಜ್ಯ ರಾಜಕಾರಣಕ್ಕೆ ಬರುತ್ತೇನೆ ಎಂದರೆ ಅದರಲ್ಲಿ ತಪ್ಪೇನಿದೆ ಎಂದು ವಿಜಯೇಂದ್ರ ಸಮರ್ಥಿಸಿಕೊಂಡರು.
ಬಳ್ಳಾರಿ ಪಾದಯಾತ್ರೆ ವಿಚಾರಕ್ಕೆ ಯಾವುದೇ ಗೊಂದಲ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಂಗಳೂರಿನಿಂದ ಮೈಸೂರು ಪಾದಯಾತ್ರೆ ಮಾಡುವಾಗ ಕೆಲವು ಗೊಂದಲಗಳಿಗೆ ಕಾರಣವಾಗಿತ್ತು. ಹಾಗಾಗಿ, ಈ ರೀತಿ ಯಾವುದೇ ಗೊಂದಲಗಳಿಗೆ ಅವಕಾಶ ಕೊಡಬಾರದು. ನಾನು ರಾಜ್ಯದ ಅಧ್ಯಕ್ಷನಾಗಿ ಹೋರಾಟ, ಪಾದಯಾತ್ರೆ ಸೇರಿ ಏನೇ ನಿರ್ಧಾರ ತೆಗೆದುಕೊಂಡರೂ ಕೂಡ ಕೇಂದ್ರದ ವರಿಷ್ಠರ ಗಮನಕ್ಕೆ ತಂದು ಆ ಮೇಲೆ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಈಗಾಗಲೇ ರಾಜ್ಯದ ನಾಯಕರ ಜೊತೆಗೆ ಚರ್ಚಿಸಿದ್ದೇನೆ. ಅವರ ಅಭಿಪ್ರಾಯವನ್ನು ಕೇಂದ್ರದ ವರಿಷ್ಠರಿಗೆ ತಿಳಿಸಿದ್ದೇನೆ. ಇದೇ ಜ.19, 20ರಂದು ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿರುವುದರಿಂದ ತಡವಾಗಿದೆ. ಆ ವೇಳೆ ನಾನು ದೆಹಲಿಯಲ್ಲಿ ಇರುತ್ತೇನೆ. ಅದಾದ ಬಳಿಕ ವರಿಷ್ಠರ ಜೊತೆಗೆ ಚರ್ಚಿಸುತ್ತೇನೆ ಎಂದರು.