ಬೀದರ್: ಬೀದರ್ ನಲ್ಲಿ ಸಂಭವಿಸಿದ ನಿಗೂಢ ಸ್ಫೋಟದಲ್ಲಿ 4 ಮಕ್ಕಳು ಸೇರಿ ಕನಿಷ್ಟ 6 ಮಂದಿ ಮಕ್ಕಳು ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಬೀದರ್ ನ ಹುಮ್ನಾಬಾದ್ ತಾಲೂಕಿನ ಮೋಳಕೇರಾ ಗ್ರಾಮದಲ್ಲಿ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟದಲ್ಲಿ ನಾಲ್ವರು ಮಕ್ಕಳು ಸೇರಿದಂತೆ ಆರು ಜನರು ಗಾಯಗೊಂಡಿದ್ದಾರೆ. ಶಾಲೆಗೆ ತೆರಳುತ್ತಿದ್ದ 4 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರು ವಯಸ್ಕರು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.
ಮೂಲಗಳ ಪ್ರಕಾರ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ನಡೆದ ಈ ಘಟನೆ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ. ಗಾಯಗೊಂಡವರನ್ನು ಹೈದ್ರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಆರು ತಿಂಗಳಲ್ಲಿ ಇದು ಎರಡನೇ ಸ್ಫೋಟವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಶುಕ್ರವಾರ ಬೆಳಂಬೆಳಿಗ್ಗೆ ಸಂಭವಿಸಿದ ಅನುಮಾನಾಸ್ಪದ ವಸ್ತು ಸ್ಫೋಟದಿಂದ ಗ್ರಾಮದಲ್ಲಿ ಆತಂಕ ಮೂಡಿದೆ.
ಹೈದ್ರಾಬಾದ್ ಆಸ್ಪತ್ರೆಗೆ ಗಾಯಾಳುಗಳ ರವಾನೆ
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೊಲೀಸರು, "ಸ್ಫೋಟದಿಂದಾಗಿ ಆರು ಜನರು (ವ್ಯಕ್ತಿಗಳು) ಗಾಯಗೊಂಡಿದ್ದಾರೆ. ಅವರಲ್ಲಿ ನಾಲ್ವರು ಮಕ್ಕಳು. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಇಬ್ಬರು ವಯಸ್ಕರು ತೀವ್ರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ" ಎಂದು ಪೊಲೀಸ್ ವರಿಷ್ಠಾಧಿಕಾರಿ (ಬೀದರ್) ಪ್ರದೀಪ್ ಗುಂಟಿ ತಿಳಿಸಿದ್ದಾರೆ.
ಸ್ಫೋಟದಲ್ಲಿಅನ್ವರ್ ಸಾಬ್(18) ಮತ್ತು ಜಬ್ಬಾರ್ ಸಾಬ್(65) ಎಂಬ ಯುವಕರಿಗೆ ತೀವ್ರ ಗಾಯಗಳಾಗಿದ್ದು,ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದ್ರಾಬಾದ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದಂತೆ ಪರಿಜಾರ್(8), ಅಜೀಜ್(5), ಬುಶ್ರಾ(4)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಮಕ್ಕಳಿಗೆ ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ಹುಮ್ನಾಬಾದ್ ತಾಲ್ಲೂಕಿನ ಮೋಲ್ಖೇರಾ ಗ್ರಾಮದ ಮೋಳಿಗೆ ಮಾರಯ್ಯ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಈ ಘಟನೆ ಸಂಭವಿಸಿದೆ. ಮಕ್ಕುಳ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಹಠಾತ್ ಸ್ಫೋಟ ಸಂಭವಿಸಿ ಆರು ಜನರು ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪರಾಧ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಸ್ಥಳವನ್ನು ಪರಿಶೀಲಿಸುತ್ತಿದ್ದಾರೆ ಎಂದು ಎಸ್ಪಿ ಹೇಳಿದರು.
ಸ್ಫೋಟಗೊಂಡ ವಸ್ತುವಿನ ಸ್ವರೂಪ ಮತ್ತು ಇತರ ವಿವರಗಳನ್ನು ಪ್ರಸ್ತುತ ಪರಿಶೀಲಿಸಲಾಗುತ್ತಿದೆ ಮತ್ತು ತನಿಖೆಯ ಭಾಗವಾಗಿದೆ ಎಂದು ಅಧಿಕಾರಿ ಹೇಳಿದರು.
6 ತಿಂಗಳಲ್ಲಿ 2ನೇ ಬಾರಿಗೆ ಸ್ಫೋಟ
ಕಳೆದ ಆರು ತಿಂಗಳ ಅವಧಿಯಲ್ಲಿ ಇದೇ ಗ್ರಾಮದಲ್ಲಿ ಇದು ಎರಡನೇ ಬಾರಿ ಸಂಭವಿಸಿರುವ ಸ್ಫೋಟವಾಗಿದೆ. ಪದೇ ಪದೇ ನಡೆಯುತ್ತಿರುವ ಇಂತಹ ಘಟನೆಗಳಿಂದ ಗ್ರಾಮಸ್ಥರಲ್ಲಿ ಭೀತಿ ಮತ್ತು ಆತಂಕ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.