ಕರ್ನಾಟಕ - ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರು ಇತ್ತೀಚೆಗೆ ಮಂಡ್ಯ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿದಾಗ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. Photo | Express
ರಾಜ್ಯ

Lokayukta ಸಂಸ್ಥೆ ವಿರುದ್ಧ ಅವಹೇಳನಕಾರಿ ಕಾಮೆಂಟ್: ಇಬ್ಬರು ವೈದ್ಯರ ವಿರುದ್ಧ ಕೇಸ್ ದಾಖಲು..!

ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಲೋಕಾಯುಕ್ತ ಸಂಸ್ಥೆ ಹಾಗೂ ಉಪ ಲೋಕಾಯುಕ್ತರ ಕುರಿತು ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ ಆರೋಪದ ಮೇಲೆ ಇಬ್ಬರು ವೈದ್ಯರ ವಿರುದ್ಧ ಲೋಕಾಯುಕ್ತ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ಆರೋಪಿಗಳನ್ನು ವಿಜಯಪುರದ ಆದರ್ಶ ನಗರ ನಿವಾಸಿ ಡಾ. ಅಮಿತ್ ಪುಂಡಲೀಕ್ ಕಾಳೆ ಹಾಗೂ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ಕೌಠಾ (ಬಿ) ಗ್ರಾಮದ ಡಾ. ಸಿದ್ದು ಎಂದು ಗುರುತಿಸಲಾಗಿದೆ.

ಇವರು ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (BIMS) ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ವಿಡಿಯೊಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು ಎನ್ನಲಾಗಿದೆ.

ಜೂನ್ 19 ಮತ್ತು 20ರಂದು ಬೀದರ್ ಜಿಲ್ಲಾ ಪ್ರವಾಸದ ವೇಳೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಬಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಪ್ರಯೋಗಾಲಯ ತಂತ್ರಜ್ಞ ಸಂಜುಕುಮಾರ್ ಅವರ ಬಳಿ ರೂ.90 ಸಾವಿರ ನಗದು, ರೂ.8.61 ಲಕ್ಷ ಮೌಲ್ಯದ ಚೆಕ್‌ಗಳ ದಾಖಲೆಗಳು, 10 ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್‌ಗಳು ಪತ್ತೆಯಾಗಿದ್ದವು.

ಈ ಪೈಕಿ ಏಳು ಡೆಬಿಟ್ ಕಾರ್ಡ್‌ಗಳು ಸಂಜುಕುಮಾರ್ ಹೆಸರಿನಲ್ಲಿದ್ದು, ಉಳಿದವು ಅವರ ಪತ್ನಿಯ ಹೆಸರಿನಲ್ಲಿದ್ದವು. ಈ ಬಗ್ಗೆ ಪ್ರಶ್ನಿಸಿದಾಗ ಅವರು ಸಮರ್ಪಕ ಉತ್ತರ ನೀಡದೆ ಅಧಿಕಾರಿಗಳೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ವರದಿಯಾಗಿದೆ.

ಪರಿಶೀಲನೆ ವೇಳೆ ಆಸ್ಪತ್ರೆಯ ವಾರ್ಡ್‌ಗಳಲ್ಲಿ ರೋಗಿಗಳಿಗೆ ನೀಡಲಾಗುತ್ತಿದ್ದ ದಿಂಬು, ಹಾಸಿಗೆ ಹಾಗೂ ಬೆಡ್‌ಶೀಟ್‌ಗಳು ಹರಿದು ಹೋಗಿದ್ದು, ಕೆಟ್ಟ ಸ್ಥಿತಿಯಲ್ಲಿರುವುದು ಬೆಳಕಿಗೆ ಬಂದಿತ್ತು.

ಆಸ್ಪತ್ರೆಗೆ ಪ್ರತಿವರ್ಷ ಹಾಸಿಗೆ, ದಿಂಬು, ಬೆಡ್‌ಶೀಟ್ ಹಾಗೂ ಇತರ ಅಗತ್ಯ ವಸ್ತುಗಳ ಖರೀದಿಗೆ ರೂ.14.40 ಕೋಟಿ ಅನುದಾನ ಬಿಡುಗಡೆಯಾಗುತ್ತಿದ್ದರೂ, 2023ರಿಂದ ಯಾವುದೇ ಖರೀದಿ ನಡೆದಿಲ್ಲ ಎಂಬುದು ತನಿಖೆಯಲ್ಲಿ ತಿಳಿದುಬಂದಿತ್ತು.

ಈ ನಿರ್ಲಕ್ಷ್ಯಕ್ಕೆ ಆಸ್ಪತ್ರೆ ಅಧಿಕಾರಿಗಳನ್ನು ನ್ಯಾಯಮೂರ್ತಿ ಬಿ. ವೀರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು. ಅದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಈ ವೈರಲ್ ವಿಡಿಯೊಗೆ ಇಬ್ಬರು ವೈದ್ಯರು ಅವಹೇಳನಕಾರಿ ಹಾಗೂ ನಿಂದನಾತ್ಮಕ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಇದರ ಬೆನ್ನಲ್ಲೇ ಸೈಬರ್ ಕ್ರೈಂ ಪೊಲೀಸರ ಸಹಾಯದಿಂದ ಅವರ ಗುರುತು ಪತ್ತೆಹಚ್ಚಿದ ಉಪ ಲೋಕಾಯುಕ್ತರು, ಇಬ್ಬರ ವಿರುದ್ಧವೂ ಪ್ರತ್ಯೇಕ ದೂರು ದಾಖಲಿಸಿ ನೋಟಿಸ್ ಜಾರಿಗೊಳಿಸಿದ್ದಾರೆ.

ದೂರಿನಲ್ಲಿ, ವೈದ್ಯರಾಗಿರುವ ಆರೋಪಿಗಳು ಯಾವುದೇ ಜವಾಬ್ದಾರಿಯಿಲ್ಲದೆ ಲೋಕಾಯುಕ್ತ ಸಂಸ್ಥೆಯ ಘನತೆಗೆ ಧಕ್ಕೆ ತರುವ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ. ಇದರಿಂದ ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳ ಮನೋಸ್ಥೈರ್ಯ ಕುಗ್ಗಿದ್ದು, ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ. ಅಲ್ಲದೆ, ತಮ್ಮ ಸಾಂವಿಧಾನಿಕ ಹಾಗೂ ಸಂಸ್ಥೆಯ ಜವಾಬ್ದಾರಿಗಳನ್ನು ನಿರ್ವಹಿಸುವ ಅಧಿಕಾರಿಗಳನ್ನು ನಿರುತ್ಸಾಹಗೊಳಿಸುವ ಪ್ರಯತ್ನವಾಗಿದೆ ಎಂದು ಉಲ್ಲೇಖಿಸಲಾಗಿದೆ.

ಈ ಕೃತ್ಯವು ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 17 ಹಾಗೂ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 132 ಮತ್ತು 353(2) ಅಡಿಯಲ್ಲಿ ಅಪರಾಧವಾಗಿದ್ದು, ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರಿಗೆ ಉದ್ದೇಶಪೂರ್ವಕವಾಗಿ ಅವಮಾನ ಮಾಡಿದರೆ ಅಥವಾ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ಬೆಂಗಳೂರಿನಲ್ಲಿ ಜಪಾನಿಗನ ಬಂಧನ: 19 ದಿನ ಜೈಲುವಾಸ, 7 ವರ್ಷಗಳ ಬಳಿಕ ಕರ್ನಾಟಕ ಸರ್ಕಾರದಿಂದ 75 ಸಾವಿರ ಪರಿಹಾರ!

ಬಂಟ್ವಾಳದಲ್ಲಿ ಕಸ ಗುಡಿಸಲು ಫಾರ್ಚೂನರ್‌ ಕಾರಲ್ಲಿ ಬರುತ್ತಾನೆ ಪೌರಕಾರ್ಮಿಕ: ಸೈಕಲ್​ನಿಂದ ಐಷರಾಮಿ ಕಾರಿನವರೆಗೆ 'ಸೇಸಪ್ಪ'ರ ಯಶೋಗಾಥೆ!

ನಮ್ಮ ಹೋರಾಟ ಉದ್ಯಮಿಗಳ ವಿರುದ್ಧ ಅಲ್ಲ: CM ಡಿಕೆ ಶಿವಕುಮಾರ್ - ಗೌತಮ್ ಅದಾನಿ ಭೇಟಿ ಸಮರ್ಥಿಸಿಕೊಂಡ ಪವನ್‌ ಖೇರಾ

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್