ಬೆಂಗಳೂರು: ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗುತ್ತಿರುವ ಬಿಡದಿ ಟೌನ್ ಶಿಪ್ ವಿಚಾರವಾಗಿ ಸರ್ಕಾರ ಮತ್ತು ಸ್ಥಳೀಯರ ನಡುವೆ ಹಗ್ಗ ಜಗ್ಗಾಟ ಮುಂದುವರೆದಿದ್ದು, ಈ ಬಹು ನಿರೀಕ್ಷಿತ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
ಹೌದು... ಸಂಚಾರ ದಟ್ಟಣೆ, ವಸತಿ ಕೊರತೆ, ನೀರಿನ ಸಮಸ್ಯೆ, ನಗರ ಮೂಲಸೌಕರ್ಯಗಳ ಮೇಲಿನ ಹೆಚ್ಚುತ್ತಿರುವ ಒತ್ತಡಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕರ್ನಾಟಕ ಸರ್ಕಾರ 'ಗ್ರೇಟರ್ ಬಿಡದಿ ಇಂಟಿಗ್ರೇಟೆಡ್ ಟೌನ್‌ಶಿಪ್ (GBIT)' ಯೋಜನೆಯನ್ನು ಪುನರುಜ್ಜೀವನಗೊಳಿಸಿದೆ.
ಬೆಂಗಳೂರು-ಮೈಸೂರು ಕಾರಿಡಾರ್‌ನಲ್ಲಿ ನಿರ್ಮಾಣವಾಗಲಿರುವ ಈ ಯೋಜನೆ, ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಮಗ್ರ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಗುರಿ ಹೊಂದಿದೆ. ಜೊತೆಗೆ, ಬೆಂಗಳೂರಿಗೆ ಪರ್ಯಾಯವಾಗಿ ಮತ್ತೊಂದು ಪ್ರಮುಖ ನಗರ ಕೇಂದ್ರವನ್ನು ನಿರ್ಮಿಸುವ ಉದ್ದೇಶವೂ ಸರ್ಕಾರಕ್ಕಿದೆ.
7,431 ಎಕರೆ ವ್ಯಾಪ್ತಿಯ ಮೆಗಾ ಟೌನ್‌ಶಿಪ್
ಈ ಯೋಜನೆ 7,431 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಯಾಗಲಿದ್ದು, ವಸತಿ, ಕೈಗಾರಿಕೆ, ಕಚೇರಿಗಳು, ಶಾಲೆಗಳು, ಆಸ್ಪತ್ರೆಗಳು, ಉದ್ಯಾನಗಳು ಹಾಗೂ ಇತರೆ ನಾಗರಿಕ ಸೌಲಭ್ಯಗಳನ್ನು ಒಳಗೊಂಡ ಸಮಗ್ರ ನಗರವಾಗಿ ರೂಪುಗೊಳ್ಳಲಿದೆ. ಇದರಲ್ಲಿ ಸುಮಾರು 2,000 ಎಕರೆ ಭೂಮಿಯನ್ನು AI ಕೈಗಾರಿಕೆಗಳು ಮತ್ತು ಸಂಬಂಧಿತ ವಲಯಗಳಿಗೆ ಮೀಸಲಿಡಲಾಗುತ್ತಿದೆ.
ಯೋಜನೆಯ ಇತಿಹಾಸ
2006: ಬೆಂಗಳೂರಿನ ಸುತ್ತ ಐದು ಉಪಗ್ರಹ ನಗರಗಳನ್ನು ನಿರ್ಮಿಸುವ ಪ್ರಸ್ತಾವನೆ; ಬಿಡದಿ ಕೂಡ ಇದರಲ್ಲಿ ಸೇರಿತ್ತು.
2007: ಡಿಎಲ್‌ಎಫ್ (DLF Ltd.) ಸಂಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವ (PPP) ಮಾದರಿಯಲ್ಲಿ ಅಭಿವೃದ್ಧಿ ಪಾಲುದಾರರನ್ನಾಗಿ ಆಯ್ಕೆ ಮಾಡಲಾಯಿತು. ಆದರೆ ಡಿಎಲ್‌ಎಫ್ ಹಿಂದೆ ಸರಿದ ಪರಿಣಾಮ ಯೋಜನೆ ಸ್ಥಗಿತಗೊಂಡಿತು.
2023: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಗರಾಭಿವೃದ್ಧಿ ಸಚಿವರಾಗಿದ್ದಾಗ ಯೋಜನೆಯನ್ನು ಮತ್ತೆ ಕೈಗೆತ್ತಿಕೊಂಡು ಜೀವಂತಗೊಳಿಸಿದರು.
2025-26: ಸರ್ಕಾರ 7,431 ಎಕರೆ ವ್ಯಾಪ್ತಿಯ AI ಆಧಾರಿತ ಸಮಗ್ರ ನಗರ ನಿರ್ಮಾಣಕ್ಕೆ ಅಂತಿಮ ಭೂಸ್ವಾಧೀನ ಅಧಿಸೂಚನೆ ಹೊರಡಿಸಿ, ಪರಿಹಾರ ಮತ್ತು ಪುನರ್ವಸತಿ ಪ್ಯಾಕೇಜ್ ಘೋಷಿಸಿತು.
ಬೆಂಗಳೂರಿಗೆ ಮತ್ತೊಂದು ಪರ್ಯಾಯ ನಗರ ಏಕೆ ಬೇಕು?
ಈ ಯೋಜನೆಯ ಉದ್ದೇಶ, ಜನರು ವಾಸ, ಉದ್ಯೋಗ ಹಾಗೂ ಅಗತ್ಯ ಸೇವೆಗಳನ್ನು ಒಂದೇ ನಗರದಲ್ಲಿ ಪಡೆಯುವಂತೆ ಮಾಡುವುದು. ಇದರಿಂದ ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಮೂಲಸೌಕರ್ಯಗಳ ಒತ್ತಡ ಕಡಿಮೆಯಾಗಲಿದೆ. ಜೊತೆಗೆ ಸಂಚಾರ ದಟ್ಟಣೆ, ಅಸಮತೋಲಿತ ನಗರೀಕರಣ, ಅಂತರ್ಜಲ ಕುಸಿತ ಹಾಗೂ ಪ್ರವಾಹದಂತಹ ಸಮಸ್ಯೆಗಳಿಗೆ ಸಮಗ್ರ ನಗರ ಯೋಜನೆಯ ಮೂಲಕ ಪರಿಹಾರ ಕಲ್ಪಿಸುವ ಗುರಿ ಹೊಂದಲಾಗಿದೆ ಎಂಬುದು ಸರ್ಕಾರದ ವಾದ.
ಬಿಡದಿಯನ್ನೇ ಏಕೆ ಆಯ್ಕೆ ಮಾಡಲಾಯಿತು?
ಬಿಡದಿ ಬೆಂಗಳೂರುದಿಂದ 35-40 ಕಿ.ಮೀ. ದೂರದಲ್ಲಿದ್ದು, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ರೈಲು ಮಾರ್ಗ ಹಾಗೂ ನೈಸ್ ರಸ್ತೆಯೊಂದಿಗೆ ಉತ್ತಮ ಸಂಪರ್ಕ ಹೊಂದಿದೆ. ಕೈಗಾರಿಕಾ ಚಟುವಟಿಕೆಗಳು ಈಗಾಗಲೇ ಇದ್ದು, ದೊಡ್ಡ ಪ್ರಮಾಣದ ನಿರಂತರ ಭೂಪ್ರದೇಶ ಲಭ್ಯವಿರುವುದು ಪ್ರಮುಖ ಕಾರಣವಾಗಿದೆ.
ಹಿಂದಿನ ಸ್ಯಾಟೆಲೈಟ್ ನಗರಗಳಿಗಿಂತ ಇದು ಹೇಗೆ ವಿಭಿನ್ನ?
ಹಿಂದಿನ ಸ್ಯಾಟೆಲೈಟ್ ನಗರಗಳು ಉದ್ಯೋಗಕ್ಕಾಗಿ ಬೆಂಗಳೂರಿನ ಮೇಲೆಯೇ ಅವಲಂಬಿತವಾಗಿದ್ದವು. ಆದರೆ GBIT ಅನ್ನು ಉದ್ಯೋಗ, ವಸತಿ ಮತ್ತು ಸಾರ್ವಜನಿಕ ಸೇವೆಗಳು ಒಂದೇ ಸ್ಥಳದಲ್ಲಿ ಲಭ್ಯವಾಗುವ ಸ್ವಾವಲಂಬಿ ನಗರವಾಗಿ ರೂಪಿಸಲಾಗುತ್ತಿದೆ.
7,400 ಎಕರೆಗೂ ಹೆಚ್ಚು ಭೂಮಿ ಏಕೆ ಬೇಕು?
ಇದು ಕೇವಲ ವಸತಿ ಯೋಜನೆಯಲ್ಲ. ವಸತಿ ಪ್ರದೇಶಗಳು, ಕೈಗಾರಿಕೆಗಳು, ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಗಳು, ಸಾರಿಗೆ ವ್ಯವಸ್ಥೆ, ಸಾರ್ವಜನಿಕ ಸೌಲಭ್ಯಗಳು, ಹಸಿರು ಪ್ರದೇಶಗಳು ಹಾಗೂ ಭವಿಷ್ಯದ ವಿಸ್ತರಣೆಯನ್ನು ಗಮನದಲ್ಲಿಟ್ಟುಕೊಂಡು ಈ ಪ್ರಮಾಣದ ಭೂಮಿ ಅಗತ್ಯವಿದೆ.
'AI-ಚಾಲಿತ ನಗರ'!
ಈ ನಗರದಲ್ಲಿ AI ಕೈಗಾರಿಕೆಗಳಿಗೆ ಆದ್ಯತೆ ನೀಡುವುದರ ಜೊತೆಗೆ, ಸಂಚಾರ ನಿರ್ವಹಣೆ, ನೀರು ಮತ್ತು ವಿದ್ಯುತ್ ಪೂರೈಕೆ, ತ್ಯಾಜ್ಯ ನಿರ್ವಹಣೆ, ಪರಿಸರ ಮೇಲ್ವಿಚಾರಣೆ, ಸಾರ್ವಜನಿಕ ಸುರಕ್ಷತೆ ಹಾಗೂ ಡಿಜಿಟಲ್ ಆಡಳಿತ ಸೇರಿದಂತೆ ನಗರ ಸೇವೆಗಳ ನಿರ್ವಹಣೆಯಲ್ಲೂ ಕೃತಕ ಬುದ್ಧಿಮತ್ತೆಯನ್ನು ಬಳಸುವ ಯೋಜನೆ ಇದೆ.
ಅಧಿಕಾರಿಗಳ ಪ್ರಕಾರ, ಈ ಯೋಜನೆ ನವಿ ಮುಂಬೈ ಮಾದರಿಯಲ್ಲಿ ಈ ಟೌನ್ ಶಿಪ್ ರೂಪುಗೊಳ್ಳಲಿದೆ. ಆದರೆ ಇದು ಅಮರಾವತಿಯಂತೆ ರಾಜಧಾನಿ ನಗರವಲ್ಲ ಹಾಗೂ ಗಿಫ್ಟ್ ಸಿಟಿಯಂತೆ ಕೇವಲ ಹಣಕಾಸು ಕೇಂದ್ರವೂ ಅಲ್ಲ ಎಂಬುದು ಸರ್ಕಾರದ ವಾದ.
ವೆಚ್ಚ ಮತ್ತು ಆರ್ಥಿಕ ಲಾಭವೇನು?
ಯೋಜನೆಯ ಅಂದಾಜು ವೆಚ್ಚ 18,133 ಕೋಟಿ ರೂ. ಇದಕ್ಕಾಗಿ HUDCO ಸಾಲ, 7,500 ಕೋಟಿ ರೂ ಬ್ಯಾಂಕ್ ಗ್ಯಾರಂಟಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (BDA) 2,000 ಕೋಟಿ ರೂ ಹಾಗೂ ಇತರೆ ಸರ್ಕಾರಿ ಸಂಪನ್ಮೂಲಗಳನ್ನು ಬಳಸುವ ಯೋಜನೆ ಇದೆ. ಸರ್ಕಾರದ ಅಂದಾಜಿನ ಪ್ರಕಾರ, ಈ ಯೋಜನೆಯಿಂದ 5 ರಿಂದ 6 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿದ್ದು, ದೊಡ್ಡ ಪ್ರಮಾಣದ ಹೂಡಿಕೆ ಹಾಗೂ ಆದಾಯವೂ ರಾಜ್ಯಕ್ಕೆ ಲಭಿಸಲಿದೆ.
ಯಾರ ಭೂಮಿ ಸ್ವಾಧೀನವಾಗಲಿದೆ?
ಯೋಜನೆ ಒಂಬತ್ತು ಗ್ರಾಮಗಳ 7,431 ಎಕರೆ ಪ್ರದೇಶವನ್ನು ಒಳಗೊಂಡಿದ್ದು, ಸುಮಾರು 5,704 ರೈತರಿಗೆ ಇದರ ಪರಿಣಾಮ ಬೀಳಲಿದೆ. ಇದರಲ್ಲಿ 830 ಎಕರೆ ಸರ್ಕಾರಿ ಭೂಮಿ, ಉಳಿದ 6,651 ಎಕರೆ ಖಾಸಗಿ ಭೂಮಿ ಸೇರಿದೆ.
ರೈತರಿಗೆ ನೀಡುತ್ತಿರುವ ಪರಿಹಾರವೇನು?
ಸರ್ಕಾರ ಘೋಷಿಸಿರುವ ಪ್ಯಾಕೇಜ್‌ನಲ್ಲಿ ಪ್ರತಿ ಎಕರೆಗೆ 2.07 ಕೋಟಿ ರಿಂದ 2.55 ಕೋಟಿವರೆಗೆ ಪರಿಹಾರ ನೀಡಲು ಉದ್ದೇಶಿಸಲಾಗಿದೆ. ಅಂತೆಯೇ ವಾರ್ಷಿಕ ಪುನರ್ವಸತಿ ಭತ್ಯೆ, ಭೂಹೀನ ಕುಟುಂಬಗಳಿಗೆ ವಿಶೇಷ ಸೌಲಭ್ಯಗಳು, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಮತ್ತು ಕೌಶಲ್ಯಾಭಿವೃದ್ಧಿ ತರಬೇತಿ ನೀಡುವುದಾಗಿ ಸರ್ಕಾರ ಹೇಳಿದೆ.
ರೈತರ ವಿರೋಧ ಏಕೆ?
ವಿರೋಧ ವ್ಯಕ್ತಪಡಿಸುತ್ತಿರುವ ರೈತರ ಪ್ರಕಾರ, ಈ ಯೋಜನೆಯಿಂದ ಫಲವತ್ತಾದ ಕೃಷಿ ಭೂಮಿ ಕಳೆದುಹೋಗಲಿದ್ದು, ಕೃಷಿ ಹಾಗೂ ಹೈನುಗಾರಿಕೆ ಆಧಾರಿತ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ. ಜೊತೆಗೆ, ಸಮರ್ಪಕ ಸಮಾಲೋಚನೆ ನಡೆಸದೇ ಭೂಸ್ವಾಧೀನ ಪ್ರಕ್ರಿಯೆ ಮುಂದುವರಿಸಲಾಗಿದೆ ಎಂಬ ಆರೋಪವನ್ನೂ ಅವರು ಮಾಡುತ್ತಿದ್ದಾರೆ.
ಪ್ರಸ್ತುತ ಸ್ಥಿತಿ ಏನು?
ಸರ್ಕಾರ ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಡಿನೋಟಿಫೈ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಮುಂದಿನ ಭೂಸ್ವಾಧೀನವನ್ನು ಭೂಮಾಲೀಕರ ಒಪ್ಪಿಗೆಯ ಆಧಾರದಲ್ಲೇ ನಡೆಸಲಾಗುವುದು ಎಂದು ಭರವಸೆ ನೀಡಿದೆ. ಇದರ ಜೊತೆಗೆ, ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದ್ದು, ಕಾನೂನು ಹಾಗೂ ಇತರೆ ಸಂಬಂಧಿತ ವಿಷಯಗಳನ್ನು ಪರಿಶೀಲಿಸಿ 2 ರಿಂದ 3 ತಿಂಗಳೊಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.