ಬೆಂಗಳೂರು: ಜಾಗತಿಕ ಮಟ್ಟದಲ್ಲಿ 5-ಸ್ಟಾರ್ ಸ್ಥಾನಮಾನ ಪಡೆದಿರುವ ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು, ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಆರಂಭಿಸುತ್ತಿದ್ದು, ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಮತ್ತೊಂದು ಜಾಗತಿಕ ಹೆಜ್ಜೆಯಾಗಿದೆ ಎಂದು ಕೈಗಾರಿಕೆ ಸಚಿವ ಎಂಬಿ ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯ(Lancaster University)ದ ಅಸೋಸಿಯೇಟ್ ಡೀನ್ ಮಾರ್ಕ್ ಸ್ಟೀವನ್ಸನ್ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗದೊಂದಿಗೆ ಮಹತ್ವದ ಮಾತುಕತೆ ನಡೆಸಿದೆ. ಲ್ಯಾಂಕಾಸ್ಟರ್ ವಿಶ್ವವಿದ್ಯಾಲಯವು, ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಆರಂಭಿಸುತ್ತಿದೆ. ಮುಂದಿನ ದಿನಗಳಲ್ಲಿ #KWINCity ಯಲ್ಲೂ ತನ್ನ ಕ್ಯಾಂಪಸ್ ಸ್ಥಾಪಿಸಲಿದೆ ಎಂದು ಹೇಳಿದ್ದಾರೆ.
ಬೆಂಗಳೂರು ಕ್ಯಾಂಪಸ್‌ನಲ್ಲಿ ಬಿಸಿನೆಸ್, ಮ್ಯಾನೇಜ್ಮೆಂಟ್ ಮತ್ತು ಕಂಪ್ಯೂಟಿಂಗ್ ವಿಷಯಗಳಲ್ಲಿ ಪದವಿ ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಯುನೈಟೆಡ್ ಕಿಂಗ್ಡಮ್ ನಲ್ಲಿ ಅನುಸರಿಸಲಾಗುತ್ತಿರುವ ಗುಣಮಟ್ಟದ ಪಠ್ಯಕ್ರಮವನ್ನು ಇಲ್ಲಿಯೂ ಅಳವಡಿಸಿಕೊಳ್ಳಲಾಗುವುದು. ಇದರಿಂದ ನಮ್ಮ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಶಿಕ್ಷಣವನ್ನು ಸ್ವದೇಶದಲ್ಲಿಯೇ ಪಡೆಯುವ ಅವಕಾಶ ದೊರೆಯಲಿದ್ದು, ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಹಭಾಗಿತ್ವ ಮತ್ತಷ್ಟು ಬಲಗೊಳ್ಳಲಿದೆ. ಇದರೊಂದಿಗೆ ಬೆಂಗಳೂರು ಜಾಗತಿಕ ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿ ಇನ್ನಷ್ಟು ಬೆಳೆಯುವ ವಿಶ್ವಾಸವಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದ್ದಾರೆ.