ಬೀದರ್: ಜನಪ್ರಿಯ ಟಿವಿ ಕಾರ್ಯಕ್ರಮಗಳಾದ ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ಖ್ಯಾತಿಯ ನಟ ಸಿದ್ದಾರ್ಥ ಪರಸನೂರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಟೀಚರ್ ಕಾಲೋನಿಯಲ್ಲಿ ವಾಸಿಸುತ್ತಿದ್ದ ಸಿದ್ದಾರ್ಥ ಪರಸನೂರು ಅವರ ಶವ ಹುಮ್ನಾಬಾದ್ ಪಟ್ಟಣದ ಹೊರವಲಯದಲ್ಲಿನ ಖಾಲಿ ಜಾಗದಲ್ಲಿ ಪತ್ತೆಯಾಗಿದ್ದು, ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಿದ್ದಾರ್ಥ ಪರಸನೂರು ಅವರ ಮೃತ ದೇಹವನ್ನು ಗಮನಿಸಿದರೆ ಇದು ಸಹಜ ಸಾವಲ್ಲ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರಬಹುದು ಎಂದು ಮತ್ತೆ ಕೆಲವರು ಶಂಕಿಸಿದ್ದಾರೆ.
ಪ್ರಸ್ತುತ ಮ್ನಾಬಾದ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನುಮಾನ ಬರುವ ರೀತಿಯಲ್ಲಿ ಶವ ಪತ್ತೆ ಆಗಿರುವುದರಿಂದ ಹುಮ್ನಾಬಾದ್ ಪೊಲೀಸರು ತನಿಖೆ ನಡೆಸಿದ್ದಾರೆ.
ಅಂದಹಾಗೆ ಕಿರುತೆರೆಯ ಜನಪ್ರಿಯ ಕಾರ್ಯಕ್ರಮಗಳಾದ ‘ಕಾಮಿಡಿ ಕಿಲಾಡಿಗಳು’ ಹಾಗೂ ‘ಮಜಾ ಭಾರತ’ ಶೋನಲ್ಲಿ ಸಿದ್ದಾರ್ಥ ಪರಸನೂರು ಭಾಗವಹಿಸಿದ್ದರು. ತಮ್ಮ ಅಭಿನಯದ ಮೂಲಕ ಅವರು ಪ್ರೇಕ್ಷಕರಿಗೆ ಮನರಂಜನೆ ನೀಡಿದ್ದರು.