ಪುತ್ತೂರು: ಧರ್ಮಸ್ಥಳ ಗ್ರಾಮದಿಂದ ಕಾಣೆಯಾಗಿದ್ದಾರೆ ಎಂದು ಹೇಳಲಾಗುವ ಯುವತಿಯರು ಮತ್ತು ಮಹಿಳೆಯರ ಬಗ್ಗೆ ಮಾಹಿತಿ ಸಿಗಲೇಬೇಕು. ಆ ನಿಟ್ಟಿನಲ್ಲಿ ತನಿಖೆ ಆಗಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಹೇಳಿದರು.
ನಗರದಲ್ಲಿ ಗುರುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು, ಧರ್ಮಸ್ಥಳ ಪ್ರಕರಣದಲ್ಲಿ ಮಹಿಳಾ ಆಯೋಗ ವರದಿ ಕೇಳಿದೆ. ಎಸ್‌ಐಟಿ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದು ಹಲವು ಬಾರಿ ಸಭೆಗಳನ್ನೂ ನಡೆಸಲಾಗಿದೆ ಎಂದರು.
ಕಾಣೆಯಾದವರು ಎಲ್ಲಿಗೆ ಹೋದರು? ಸಾವಿಗೀಡಾಗಿದ್ದರೆ ಅದು ಸಂಭವಿಸಿದ್ದು ಹೇಗೆ ಇತ್ಯಾದಿ ವಿವರಗಳು ಬೇಕು. ಇದು ಕಷ್ಟದ ಕೆಲಸ ನಿಜ. ಆದರೆ ಅಷ್ಟು ಮಾಹಿತಿ ತಿಳಿಯಲೇಬೇಕಾಗಿದೆ ಎಂದು ಹೇಳಿದರು.
ಅತ್ಯಾಚಾರಕ್ಕೆ ಪೋರ್ನೋಗ್ರಫಿ, ನಶೆ ಮತ್ತಿತರ ಕಾರಣಗಳೂ ಇವೆ. ಸ್ಮಾರ್ಟ್ ಫೋನ್‌ಗಳ ಬಳಕೆಯೂ ಕೆಟ್ಟ ಪಾತ್ರ ವಹಿಸುತ್ತದೆ. ರಾಜ್ಯದಲ್ಲಿ ಈಚೆಗೆ ಮಹಿಳೆಯರ ಮೇಲೆ ಆಗಿರುವ ದೌರ್ಜನ್ಯ ಪ್ರಕರಣ ಮತ್ತು ತಡೆಗೆ ಕೈಗೊಂಡ ಕ್ರಮಗಳ ಬಗ್ಗೆ ತಿಳಿದುಕೊಳ್ಳಲು ಪೊಲೀಸರ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ಮಾ.5ರಂದು ಪುತ್ತೂರಿಗೆ ಭೇಟಿ ನೀಡಿದ್ದು, ಈ ವೇಳೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು.
ಶಿಕ್ಷಣ ಮುಂದುವರಿಸುವಂತೆ ಸಂತ್ರಸ್ತೆಗೆ ನಾಗಲಕ್ಷ್ಮೀ ಅವರು ಸೂಚಿಸಿದರು. ಗಟ್ಟಿಯಾಗಿ ನಿಂತು ಸಂಕಷ್ಟ ಎದುರಿಸುವಂತೆ ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಮನವಿ ಮಾಡಿದರು. ಶಿಕ್ಷಣ ಮುಂದುವರಿಸಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡುವ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಜೀವನದಲ್ಲಿ ಕುಗ್ಗಿ ಕೆಟ್ಟ ನಿರ್ಧಾರ ತೆಗೆದುಕೊಳ್ಳದಂತೆ ಸಂತ್ರಸ್ತೆಗೆ ನಾಗಲಕ್ಷ್ಮಿ ಧೈರ್ಯ ತುಂಬಿದ್ದಾರೆ.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಮಹಿಳಾ ಆಯೋಗ ತಾಯಿಯಂತೆ ಸಂತ್ರಸ್ತೆಯ ಪರ ನಿಲ್ಲುತ್ತದೆ, ಎಲ್ಲಾ ಸಂತ್ರಸ್ತ ಮಹಿಳೆಯರಿಗೆ ಆಯೋಗ ತಾಯಿಯಿದ್ದಂತೆ. ತಾಯಿ ಸ್ಥಾನದಲ್ಲಿ ನಿಂತು ಮಹಿಳೆಯ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ. ಸಂತ್ರಸ್ತೆ ಯುವತಿಗೆ ಎಲ್ಲಾ ರೀತಿಯ ಸಹಾಯವನ್ನು ಆಯೋಗದ ಮುಖಾಂತರ ಮಾಡಲಾಗುವುದು ಎಂದರು.
ಮುಂದುವರಿದು, ಯುವತಿಯ ಮುಂದಿನ ಶಿಕ್ಷಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿ ಆಕೆಯನ್ನು ಆರ್ಥಿಕ, ಶೈಕ್ಷಣಿಕವಾಗಿ ಸದೃಢಗೊಳಿಸುವ ಪ್ರಯತ್ನವನ್ನೂ ಮಾಡುತ್ತೇನೆ. ಪ್ರಕರಣ ನ್ಯಾಯಾಲಯದ ಮುಂದೆ ಇರುವಾಗ ಇದಕ್ಕಿಂತ ಹೆಚ್ಚು ಮಾತನಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ನಗರದ ಸ್ಟೇಟ್ ಬ್ಯಾಂಕ್ ನ ಮಾರುಕಟ್ಟೆಯಲ್ಲಿ ಮೀನುಗಾರ ಮಹಿಳೆಯರು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ನೂತನವಾಗಿ ನಿರ್ಮಾಣವಾಗಿರುವ ಮೀನು ಮಾರುಕಟ್ಟೆಯಲ್ಲಿ ವ್ಯವಸ್ಥೆಗಳು ಅವೈಜ್ಞಾನಿಕವಾಗಿರುವುದಾಗಿ ಹೇಳಿಕೊಂಡಿರುವ ಮಹಿಳೆಯರು, ಅಲ್ಲಿಗೆ ತಮ್ಮ ವ್ಯಾಪಾರವನ್ನು ಸ್ಥಳಾಂತರಿಸಲು ನಿರಾಕರಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ ಮಾತ್ರವಲ್ಲದೆ ಸರಕಾರದ ಗಮನಕ್ಕೂ ತರುವುದಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
ಸ್ಟೇಟ್ ಬ್ಯಾಂಕ್ ಹಸಿ ಮೀನು ಮಾರುಕಟ್ಟೆಯಲ್ಲಿ ತಾವು ಹಲವು ದಶಕಗಳಿಂದ ವ್ಯಾಪಾರ ಮಾಡುತ್ತಿದ್ದು, ಇಲ್ಲಿಯೇ ವ್ಯಾಪಾರಕ್ಕೆ ಅವಕಾಶ ಮಾಡುವಂತೆ ಮಹಿಳೆಯರು ತಮ್ಮ ಬೇಡಿಕೆ ಇರಿಸಿದ್ದಾರೆ. ನೂತನವಾಗಿ ನಿರ್ಮಿಸಲಾಗಿರುವ ಮಾರುಕಟ್ಟೆಯಲ್ಲಿ ಸೂಕ್ತ ಗಾಳಿ, ಬೆಳಕಿನ ವ್ಯವಸ್ಥೆಯ ಕೊರತೆಯ ಜತೆಗೆ ಬಾಡಿಗೆಯೂ ದುಬಾರಿಯಾಗಿದೆ ಎಂದು ಹೇಳಿದ್ದಾರೆ. ದ.ಕ. ಜಿಲ್ಲಾಧಿಕಾರಿ ಹಾಗೂ ಇತರ ಜಿಲ್ಲಾ ಮಟ್ಟದ ಅಧಿಕಾರಿಗಳ ಜತೆ ನಾಳೆ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾವಿಸಲಿದ್ದೇನೆ. ಸಮಸ್ಯೆಯನ್ನು ಆಡಳಿತದ ಗಮನಕ್ಕೆ ತರುವ ನಿಟ್ಟಿನಲ್ಲಿ ಮಹಿಳಾ ಮೀನುಗಾರ ಪ್ರತಿನಿಧಿಗಳೂ ಭಾಗವಹಿಸುವಂತೆ ಕೋರಿದ್ದೇನೆ. ಮೀನುಗಾರ ಮಹಿಳೆಯರು ಲಿಖಿತವಾಗಿ ನೀಡುವ ಬೇಡಿಕೆಗಳ ಕುರಿತಂತೆ, ಸೂಕ್ತ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರಕಾರದ ಗಮನಕ್ಕೆ ತರಲಾಗುವುದು ಎಂದರು.