ರಾಮನಗರ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಯಾವ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸುತ್ತಾರೋ, ನಂತರವೇ ಅದರ ಬೆಲೆ ಹೆಚ್ಚಾಗುತ್ತದೆ. ಪಾಪ, ಅವರ ಕೈ ಗುಣವೇ ಸರಿ ಇಲ್ಲ ಎನಿಸುತ್ತದೆ ಎಂದು ಪೌರಾಡಳಿತ ಸಚಿವ ಎಚ್‌ಸಿ ಬಾಲಕೃಷ್ಣ ಬುಧವಾರ ವ್ಯಂಗ್ಯವಾಡಿದರು.
ರಾಜ್ಯ ಸರ್ಕಾರದ ಹಾಲಿನ ದರ ಏರಿಕೆ ವಿರೋಧಿಸಿ ಸೋಮವಾರ ಫ್ರೀಡಂ ಪಾರ್ಕ್‌ನಲ್ಲಿ ಹಾಲಿನ ಕ್ಯಾನ್ ಹಿಡಿದು ಹೋರಾಟ ಮಾಡಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ಮಾಡಿರುವ ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಕ್ರಾಂತಿಯಾಗುವ ಮುನ್ನವೇ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಕೆಳಗಿಳಿಯಬೇಕು. ಇಲ್ಲವೇ ಎಲ್ಲ ಬೆಲೆ ಏರಿಕೆಗಳನ್ನು ಹಿಂಪಡೆದು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದ್ದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಾಲಕೃಷ್ಣ, ಈ ಹಿಂದೆ ಶೋಭಾ ಅವರು ಅಡುಗೆ ಅನಿಲ ದರ ಹೆಚ್ಚಾಗಿದೆ ಎಂದು ಸಿಲಿಂಡರ್ ಹಿಡಿದುಕೊಂಡು ಹೋರಾಟ ಮಾಡಿದ್ದರು. ಅದಾದ ನಂತರ ಅನಿಲ ದರ ಮತ್ತಷ್ಟು ಏರಿಕೆಯಾಯಿತು. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಾಲಿನ ದರ ತೀರಾ ಕಡಿಮೆ ಇದೆ. ರೈತರಿಗೆ ಅನುಕೂಲವಾಗಲಿ ಎಂದೇ ಬೆಲೆಯನ್ನು ಹೆಚ್ಚಿಸಲಾಗಿದೆ. ಅಮಾಯಕ ರೈತರಿಗೆ ಸಹಾಯವಾಗಲಿ ಬಿಡಿ ಎಂದು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳವಾದರೆ ಸ್ವಾಭಾವಿಕವಾಗಿಯೇ ಬಸ್ ಟಿಕೆಟ್ ದರ ಕೂಡ ಏರಿಕೆಯಾಗುತ್ತದೆ. ಬಸ್‌ಗಳನ್ನು ನೀರಿನಲ್ಲಿ ಓಡಿಸಲು ಆಗುವುದಿಲ್ಲ. ಕೇಂದ್ರ ಸರ್ಕಾರದವರು ಇಂಧನ ದರ ಇಳಿಸಿದರೆ ನಾವು ಕೂಡ ಟಿಕೆಟ್ ಬೆಲೆಯನ್ನು ಇಳಿಸುತ್ತೇವೆ ಎಂದರು
ಎಲ್ಲಿ ಅನುಕೂಲವಿದೆಯೋ ಅಲ್ಲಿಗೆ ರಾಜಣ್ಮ ಹೋಗಲಿ
ನಾವು ಯಾವ ಪಕ್ಷದಲ್ಲಿರುತ್ತೇವೆಯೋ ಆ ಪಕ್ಷಕ್ಕೆ ನಿಷ್ಠರಾಗಿರಬೇಕು. ರಾಜಣ್ಣ ಅವರು ಕಾಂಗ್ರೆಸ್‌ನಲ್ಲಿದ್ದರೂ ಪಕ್ಷಕ್ಕೆ ಅನುಕೂಲವಾಗುವಂತಹ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ಅವರಿಗೆ ಎಲ್ಲಿ ಅನುಕೂಲವಿದೆಯೋ ಅಲ್ಲಿಗೆ ಹೋಗಲಿ ಎಂದು ತಿಳಿಸಿದರು.
‘ಒಂದೇ ಪಕ್ಷದಲ್ಲಿರುವ ನಾವೆಲ್ಲರೂ ಪಕ್ಷಕ್ಕೆ ನಿಯತ್ತಾಗಿರಬೇಕು. ಹಿಂದೆ ನಾನು ಜೆಡಿಎಸ್‌ನಲ್ಲಿದ್ದಾಗ ಆ ಪಕ್ಷಕ್ಕೆ ನಿಷ್ಠನಾಗಿದ್ದೆ. ನನಗೆ ಬೇಜಾರಾಗಿದ್ದಕ್ಕೆ ಪಕ್ಷ ಬಿಟ್ಟು ಬಂದೆ. ಅಲ್ಲಿದ್ದುಕೊಂಡೇ ಕಥೆ ಕಟ್ಟಿಲ್ಲ. ರಾಜಣ್ಣ ಅವರು ಇನ್ನಾದರೂ ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ಕೊಡಬಾರದು ಎಂದು ಮನವಿಮಾಡುತ್ತೇನೆ’ ಎಂದರು.
‘ಗೃಹಲಕ್ಷ್ಮಿ ಹಣವನ್ನು ಹಿರಿಯೂರು ಉಪ ಚುನಾವಣೆಗೆ ದುರ್ಬಳಕೆಮಾಡಲಾಗುತ್ತಿದೆ’ ಎಂಬ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ‘ಯಾವ ಹಣ, ಯಾವ ರೀತಿ ದುರ್ಬಳಕೆಯಾಗುತ್ತಿದೆ ಎಂಬುದರ ಕುರಿತು ಅವರ ಬಳಿ ದಾಖಲೆ ಇದ್ದರೆ ಕೊಡಲು ಹೇಳಿ. ಸುಮ್ಮನೆ ಬುರುಡೆ ಬಿಡೋದು ಬೇಡ’ ಎಂದು ತಿರುಗೇಟು ನೀಡಿದರು.