ಬೆಂಗಳೂರು: ಮದುವೆಯಾಗುವುದು, ಕುಟುಂಬದಲ್ಲಿ ಕಲಹ ಸೃಷ್ಟಿಸುವುದು, ಒಂದರ ನಂತರ ಮತ್ತೊಂದು ಪ್ರಕರಣ ದಾಖಲಿಸುವುದು, ಬಳಿಕ ರಾಜಿ ಮಾಡಿಕೊಳ್ಳುವುದು, ಅದರಿಂದ ಹಣ ಪಡೆಯುವುದು- ಇಂತಹ ಆರೋಪದ ಪ್ರಕರಣದಲ್ಲಿ, ಪತ್ನಿ ತಬಸ್ಸುಂ (30)ಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಹುಸೇನ್ (47) ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ರದ್ದುಗೊಳಿಸಿದೆ. ತಬಸ್ಸುಂಗೆ ಒಟ್ಟು ಒಂಬತ್ತು ಮದುವೆಗಳಾಗಿದ್ದು, ಹುಸೇನ್ ಅವರ ಏಳನೇ ಪತಿ ಎಂದು ಆರೋಪಿಸಲಾಗಿದೆ.
ಅರ್ಜಿದಾರರು ಮುಂದಿಟ್ಟಿರುವ ಘಟನೆಗಳ ಸರಣಿಯು ಗಮನಾರ್ಹವಾಗಿದೆ. ಒಂದರ ನಂತರ ಮತ್ತೊಂದು ಮದುವೆ ನಡೆಯುತ್ತದೆ. ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಉಂಟಾದ ಬಳಿಕ ಕಾನೂನು ಹೋರಾಟ ಆರಂಭವಾಗುತ್ತದೆ. ಹಲವು ಪ್ರಕರಣಗಳಲ್ಲಿ ರಾಜಿ ಸಂಧಾನದೊಂದಿಗೆ ಅದು ಅಂತ್ಯಗೊಳ್ಳುತ್ತದೆ. ಬಳಿಕ ಮತ್ತೊಂದು ವಿವಾಹದೊಂದಿಗೆ ದಾಂಪತ್ಯ ಜೀವನ ಮುಂದುವರಿಯುತ್ತದೆ.
ಇದು ಆಕಸ್ಮಿಕವಾಗಿ ಸಂಭವಿಸಿದ ವೈವಾಹಿಕ ದುರಂತಗಳ ಸರಣಿಯಲ್ಲ; ಹಣಕಾಸಿನ ಲಾಭ ಪಡೆಯುವ ಉದ್ದೇಶದಿಂದ ಕ್ರಿಮಿನಲ್ ಕಾನೂನು ಪ್ರಕ್ರಿಯೆಯನ್ನು ಬಳಸಿಕೊಳ್ಳುವ ಮಾದರಿಯನ್ನು ಈ ಘಟನೆಗಳು ತೋರಿಸುತ್ತವೆ ಎಂಬುದು ಅರ್ಜಿದಾರರ ವಾದವಾಗಿದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ತಮ್ಮ ವಿರುದ್ಧ ತಬಸ್ಸುಂ ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ಪ್ರಶ್ನಿಸಿ ಹುಸೇನ್ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿ ನ್ಯಾಯಮೂರ್ತಿಗಳು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರ ಹುಸೇನ್ 2022ರಲ್ಲಿ ತಬಸ್ಸುಂ ಅವರನ್ನು ವಿವಾಹವಾಗಿದ್ದರು. ಪರಸ್ಪರ ಪರಿಚಯವಿದ್ದ ಸ್ನೇಹಿತರೊಬ್ಬರು ಈ ವಿವಾಹಕ್ಕೆ ಮಧ್ಯಸ್ಥಿಕೆ ವಹಿಸಿದ್ದರು ಎನ್ನಲಾಗಿದೆ. ಮದುವೆಯ ಬಳಿಕ ಸ್ವಲ್ಪ ಸಮಯದವರೆಗೆ ಹುಸೇನ್ ಮತ್ತು ತಬಸ್ಸುಂ ಹಾಗೂ ಹುಸೇನ್ ಕುಟುಂಬದ ಇತರ ಸದಸ್ಯರು ಒಂದೇ ಮನೆಯಲ್ಲಿ ವಾಸವಾಗಿದ್ದರು.
ಆದರೆ, ದಿನಗಳದಂತೆ ದಂಪತಿ ನಡುವಿನ ಸಂಬಂಧ ಹದಗೆಟ್ಟು ಪತಿ-ಪತ್ನಿ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು. ಪತಿ ಮತ್ತು ಅವರ ಕುಟುಂಬದ ಇತರ ಸದಸ್ಯರ ವಿರುದ್ಧ ತಬಸ್ಸುಂ ಕೆಲವು ಪ್ರಕರಣಗಳನ್ನು ದಾಖಲಿಸಿದ್ದರು. ಪೊಲೀಸರು ಪತಿ ಹುಸೇನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿ, ಕುಟುಂಬದ ಇತರ ಸದಸ್ಯರ ವಿರುದ್ಧದ ಪ್ರಕರಣಗಳನ್ನು ಕೈಬಿಟ್ಟಿದ್ದರು. ವಿಚಾರಣಾ ನ್ಯಾಯಾಲಯ ಆರೋಪಗಳ ಕುರಿತು ವಿಚಾರಣೆ ಕೈಗೆತ್ತಿಕೊಂಡಿತ್ತು. ಇದನ್ನು ಪ್ರಶ್ನಿಸಿ ಹುಸೇನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ತಬಸ್ಸುಂ ಪರ ವಕೀಲರು ವಾದ ಮಂಡಿಸಿ, ಹುಸೇನ್ ತನ್ನ ಏಳನೇ ಪತಿ ಎಂಬುದನ್ನು ಸಾಬೀತುಪಡಿಸಲು ಸಲ್ಲಿಸಿರುವ ಮದುವೆ ಪ್ರಮಾಣಪತ್ರಗಳು ನಕಲಿ ಎಂದು ಆಕ್ಷೇಪಿಸಿದರು. ಛಾಯಾಚಿತ್ರಗಳನ್ನು ತಿರುಚಲಾಗಿದೆ. ಅರ್ಜಿದಾರರು ರಾಜಕಾರಣಿಯಾಗಿರುವುದರಿಂದ ತಮಗೆ ಬೇಕಾದ ರೀತಿಯಲ್ಲಿ ಇಂತಹ ದಾಖಲೆಗಳನ್ನು ಸೃಷ್ಟಿಸಿಕೊಳ್ಳಬಹುದು ಎಂದು ವಾದಿಸಿದರು.
ದೂರುದಾರರಿಗೆ ಈ ಹಿಂದೆ ಕೆಲವು ಮದುವೆಗಳಾಗಿರುವುದನ್ನು ಒಪ್ಪಿಕೊಂಡ ಅವರು, ಹಿಂದಿನ ಪ್ರತಿಯೊಂದು ಮದುವೆಯಲ್ಲೂ ವಿಚ್ಛೇದನ, ತಲಾಖ್ ಅಥವಾ ಖುಲಾ ಪಡೆದ ಬಳಿಕವೇ ಮತ್ತೊಂದು ಮದುವೆಯಾಗಿದ್ದಾರೆ. ಹೀಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಮದುವೆಗಳು ಅಸ್ತಿತ್ವದಲ್ಲಿರಲಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ, ತಬಸ್ಸುಂ ಅವರು ತಮ್ಮ 1, 3, 5 ಮತ್ತು 7ನೇ ಮದುವೆಗಳನ್ನು ಒಪ್ಪಿಕೊಂಡಿದ್ದಾರೆ. ಆದರೂ, ವರದಕ್ಷಿಣೆ ಬೇಡಿಕೆಯ ಹಿನ್ನೆಲೆಯಲ್ಲಿ ಹುಸೇನ್ ಕಿರುಕುಳ ನೀಡಿದ್ದಾರೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿರುವುದರಿಂದ ಅವರ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಬಾರದು ಎಂದು ವಾದಿಸಿದರು.
ದೂರು ಮತ್ತು ತನಿಖೆಯ ವೇಳೆ ಸಂಗ್ರಹಿಸಲಾದ ದಾಖಲೆಗಳಲ್ಲಿನ ಆರೋಪಗಳನ್ನು ಅವುಗಳ ಯಥಾವತ್ತಾದ ರೂಪದಲ್ಲೇ ಪರಿಗಣಿಸಿದರೂ, ಆರೋಪಿತ ಕೃತ್ಯ ನಡೆದಿರುವುದನ್ನು ಸಾಬೀತುಪಡಿಸಲು ಸಾಧ್ಯವಾಗದಿದ್ದರೆ, ಅರ್ಜಿದಾರರನ್ನು ಕ್ರಿಮಿನಲ್ ವಿಚಾರಣೆಯ ಸಂಕಷ್ಟಕ್ಕೆ ಸಿಲುಕಿಸುವುದರಿಂದ ಯಾವುದೇ ಕಾನೂನುಬದ್ಧ ಉದ್ದೇಶ ಈಡೇರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.