ಮೃತರ ಆಭರಣಗಳನ್ನೇ ಬಳಸಿ ಶವಗಳನ್ನು ವಿಲೇವಾರಿ ಮಾಡಿದ ಆರೋಪಿ 
ರಾಜ್ಯ

ಬೆಂಗಳೂರಿನಲ್ಲಿ 7 ಮಂದಿ ಹತ್ಯೆ: ಮೃತರ ಆಭರಣಗಳನ್ನೇ ಬಳಸಿ ಶವಗಳನ್ನು ಸಾಗಿಸಿ ವಿಲೇವಾರಿ ಮಾಡಿದ ಆರೋಪಿ !

ಪತ್ನಿ ಹಾಗೂ ಅತ್ತೆಯ ಮೃತದೇಹಗಳ ಮೇಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು, ಕೆಲವು ಆಭರಣಗಳನ್ನು ಮಾರಾಟ ಮಾಡಿ ಮೃತದೇಹಗಳನ್ನು ಸಾಗಿಸಲು ಮತ್ತು ವಿಲೇವಾರಿ ಮಾಡಲು ಹಣ ಇಂದುಶೇಖರ್ ಹಣ ಹೊಂದಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಬೆಂಗಳೂರು: ಕಾರು ಚಾಲಕ ಇಂದುಶೇಖರ್ ಎಂಬಾತ ಒಂದೇ ಕುಟುಂಬದ ಏಳು ಮಂದಿಯನ್ನು ಹತ್ಯೆಗೈದ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮತ್ತಷ್ಟು ಮಹತ್ವದ ಸಂಗತಿಗಳು ತಿಳಿದುಬಂದಿವೆ.

ಪತ್ನಿ ಹಾಗೂ ಅತ್ತೆಯ ಮೃತದೇಹಗಳ ಮೇಲಿದ್ದ ಚಿನ್ನಾಭರಣಗಳನ್ನು ಅಡವಿಟ್ಟು, ಕೆಲವು ಆಭರಣಗಳನ್ನು ಮಾರಾಟ ಮಾಡಿ ಮೃತದೇಹಗಳನ್ನು ಸಾಗಿಸಲು ಮತ್ತು ವಿಲೇವಾರಿ ಮಾಡಲು ಹಣ ಇಂದುಶೇಖರ್ ಹಣ ಹೊಂದಿಸಿದ್ದ ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಪೊಲೀಸ್ ಮೂಲಗಳ ಪ್ರಕಾರ, ಆರೋಪಿಯು ಮೃತದೇಹಗಳ ಮೇಲಿದ್ದ ರಕ್ತಸಿಕ್ತ ಆಭರಣಗಳನ್ನು ತೆಗೆದು, ಅವುಗಳನ್ನು ತೊಳೆದಿದ್ದಾನೆ. ಬಳಿಕ ಕೆಲವು ಆಭರಣಗಳನ್ನು ಆಭರಣ ಮಳಿಗೆಗಳಲ್ಲಿ ಅಡವಿಟ್ಟಿದ್ದಾನೆ. ಈ ಮೂಲಕ ಬಂದ ಹಣವನ್ನು ಕೃತ್ಯಕ್ಕೆ ಸಂಬಂಧಿಸಿದ ಖರ್ಚುಗಳಿಗೆ ಬಳಸಿದ್ದಾನೆ ಎನ್ನಲಾಗಿದೆ. ಇನ್ನು ಕೆಲವು ಆಭರಣಗಳನ್ನು ಮಾರಾಟ ಮಾಡಿ, ಮೃತದೇಹಗಳನ್ನು ಸಾಗಿಸಲು ಬಳಸಿದ ಕಾರಿಗೆ ಡೀಸೆಲ್ ಖರೀದಿಸಿದ್ದಾನೆ. ಉಳಿದ ಆಭರಣಗಳನ್ನು ತನ್ನ ಮಗಳಿಗೆ ನೀಡಿದ್ದಾನೆ ಎಂದು ತಿಳಿದುಬಂದಿದೆ.

ಮೃತದೇಹಗಳನ್ನು ವಿಲೇವಾರಿ ಮಾಡಲು ಆರೋಪಿ ಹಲವು ಪ್ರದೇಶಗಳಿಗೆ ಪ್ರಯಾಣಿಸಿದ್ದಾನೆ ಎಂಬುದೂ ತನಿಖೆಯಿಂದ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಮಂಗಳೂರಿಗೆ ಕಾರಿನಲ್ಲಿ ತೆರಳಿ ವಾಪಸಾಗಿದ್ದಾನೆ. ಬಳಿಕ ಚೆನ್ನೈಗೆ ಪ್ರಯಾಣಿಸಿ, ನಂತರ ನಂದಿ ಬೆಟ್ಟಕ್ಕೆ ತೆರಳಿದ್ದಾನೆ ಎನ್ನಲಾಗಿದೆ.

ಅಕ್ಟೋಬರ್ 16ರಿಂದ ನವೆಂಬರ್ 3ರ ನಡುವೆ ತನ್ನ ಮನೆಯಲ್ಲೇ ಕುಟುಂಬದ ಏಳು ಮಂದಿಯನ್ನು ಪ್ರತ್ಯೇಕ ದಿನಗಳಲ್ಲಿ ಗ್ರೈಂಡಿಂಗ್ ಸ್ಟೋನ್‌ನಿಂದ ತಲೆಗೆ ಹೊಡೆದು ಹತ್ಯೆಗೈದಿದ್ದಾನೆ. ಹತ್ಯೆಯಾದವರಲ್ಲಿ ಆತನ ಪತ್ನಿ ಸುನೀತಾ, ಅತ್ತೆ ರೂಪಾವತಿ, ಭಾವ ಶಿವಕುಮಾರ್, ಶಿವಕುಮಾರ್ ಪತ್ನಿ ದಿವ್ಯಾ ಹಾಗೂ ಅವರ ಏಳು ವರ್ಷದ ಪುತ್ರ ಪುನೀತ್, ಮತ್ತೊಬ್ಬ ಭಾವ ಶಂಕರ್ ಮತ್ತು ಶಂಕರ್ ಪತ್ನಿ ನಳಿನಿ ಸೇರಿದ್ದಾರೆ.

ಊಟ ಹಾಗೂ ಮದ್ಯ ನೀಡುವ ನೆಪದಲ್ಲಿ ಆರೋಪಿ ಕುಟುಂಬ ಸದಸ್ಯರನ್ನು ಮನೆಗೆ ಕರೆಸಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೂ ಮುನ್ನ ಪಾನೀಯಗಳಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿದ್ದ ಎನ್ನಲಾಗಿದೆ. ಹತ್ಯೆ ಮಾಡುವ ಸಂದರ್ಭದಲ್ಲಿ ಅಕ್ಕಪಕ್ಕದವರಿಗೆ ಶಬ್ದ ಕೇಳಿಸದಂತೆ ಟಿವಿ ಸೌಂಡನ್ನು ಜೋರಾಗಿ ಇಟ್ಟಿದ್ದ.

ಪ್ರತಿಯೊಂದು ಹತ್ಯೆಯ ಬಳಿಕ ಗ್ರೈಂಡಿಂಗ್ ಸ್ಟೋನ್ ನ್ನು ಸ್ವಚ್ಛಗೊಳಿಸಿ, ಮನೆಯಲ್ಲಿದ್ದ ರಕ್ತದ ಕಲೆಗಳನ್ನು ರಾಸಾಯನಿಕ ಬಳಸಿ ಅಳಿಸಿಹಾಕಿದ್ದಾನೆ. ಮೃತದೇಹಗಳನ್ನು ಬೆಡ್‌ಶೀಟ್‌ಗಳಲ್ಲಿ ಸುತ್ತಿ, ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ, ರಾತ್ರಿ ವೇಳೆ ತನ್ನ ಕಾರಿನಲ್ಲಿ ಸಾಗಿಸುತ್ತಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ 17 ವರ್ಷದ ಮಗಳು ಮೃತದೇಹಗಳನ್ನು ಪ್ಯಾಕ್ ಮಾಡಲು ಹಾಗೂ ಸಾಗಿಸಲು ಸಹಕರಿಸಿರುವ ಶಂಕೆ ವ್ಯಕ್ತವಾಗಿದೆ. ಆದರೆ, ತಂದೆ ಹೇಳಿದಂತೆ ತಾನು ನಡೆದುಕೊಂಡಿದ್ದೇನೆ. ಆತನ ಕೃತ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ತನಗೆ ತಿಳಿದಿರಲಿಲ್ಲ ಎಂದು ಆಕೆ ತನಿಖಾಧಿಕಾರಿಗಳಿಗೆ ತಿಳಿಸಿದ್ದಾಳೆ ಎನ್ನಲಾಗಿದೆ.

ಪ್ರಕರಣದಲ್ಲಿ ಮಗಳ ಪಾತ್ರದ ಕುರಿತು ಹಾಗೂ ಸುಳ್ಳು ಪೋಕ್ಸೊ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಜನರನ್ನು ಬ್ಲ್ಯಾಕ್‌ಮೇಲ್ ಮಾಡಲು ಆಕೆಯನ್ನು ಬಳಸಿಕೊಂಡಿದ್ದ ಎಂಬ ಆರೋಪ ಸೇರಿದಂತೆ ಆತನ ಇತರ ಚಟುವಟಿಕೆಗಳ ಬಗ್ಗೆಯೂ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 483ಕ್ಕೆ ತಲುಪಿದ AQI, ವಿಷಾನಿಲದ ಹೊದಿಕೆಯಲ್ಲಿ ರಾಷ್ಟ್ರ ರಾಜಧಾನಿ..!

ರಾಹುಲ್ ಗಾಂಧಿ, ಸೋನಿಯಾ ಗಾಂಧಿ ವಿರುದ್ಧ ಅವಹೇಳನಕಾರಿ ಪೋಸ್ಟ್: 85 ವರ್ಷದ ವೃದ್ಧನ ವಿರುದ್ಧ ಕೇಸ್!

ನಾಗಮಂಗಲ ಕೋಟೆ ಗಣೇಶ ವಿಸರ್ಜನೆ ವೇಳೆ ಅವಾಂತರ; ಯುವತಿಯರತ್ತ ಹಾವು ಎಸೆದ ಯುವಕ! ಧರ್ಮದೇಟು, Video

ಹಳ್ಳಿ ಗುಗ್ಗು v/s ಬಲಿತ ದಲಿತ ಸಮರ: ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಜೆಡಿಎಸ್ ಕಚೇರಿ ಮುಂದೆ ಪ್ರಿಯಾಂಕ್ ಖರ್ಗೆ ಪರ ಯುವ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಶಿವಮೊಗ್ಗ ಜಿಲ್ಲೆಗೂ ವ್ಯಾಪಿಸಿದ ಪೋಸ್ಟರ್ ವಾರ್: 'ಈ ನನ್ನ ಮಕ್ಕಳು' ಹೇಳಿಕೆಗೆ ವಿಜಯೇಂದ್ರ ನಿವಾಸ, ಬಿಜೆಪಿ ಕಚೇರಿಗೆ ಪೋಸ್ಟರ್ ಅಂಟಿಸಿದ ಕಾಂಗ್ರೆಸ್