ಬರ (ಸಂಗ್ರಹ ಚಿತ್ರ) online desk
ರಾಜ್ಯ

ಮೊದಲ ಕಂತಿನಲ್ಲಿ ಕಡಿಮೆ ಹಣ: ಅರ್ಹ ಪ್ರತಿಯೊಬ್ಬ ಅನ್ನದಾತನಿಗೂ ಕನಿಷ್ಠ 5,000 ರೂ. ಪರಿಹಾರ; ಬರದಿಂದ ಕಂಗೆಟ್ಟ ರೈತರಿಗೆ ಸರ್ಕಾರ ಅಭಯ..!

ಕೇಂದ್ರ ಸರ್ಕಾರ ರೂಪಿಸಿರುವ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಕೃಷಿ ಭೂಮಿಯ ವಿಸ್ತೀರ್ಣ ಮತ್ತು ವರ್ಗಕ್ಕೆ ಅನುಗುಣವಾಗಿ ಇನ್‌ಪುಟ್ ಸಬ್ಸಿಡಿ ನಿಗದಿಪಡಿಸಲಾಗಿದೆ.

ಬೆಂಗಳೂರು: ರಾಜ್ಯದ ಬರಪೀಡಿತ ಅರ್ಹ ಪ್ರತಿಯೊಬ್ಬ ರೈತರಿಗೂ ಕನಿಷ್ಠ 5,000 ರೂ. ಪರಿಹಾರ ನೀಡಲಾಗುವುದು. ಮೊದಲ ಕಂತಿನಲ್ಲಿ 2,000 ಅಥವಾ 2,500 ರೂ. ಪಡೆದಿರುವ ರೈತರಿಗೆ ಉಳಿದ ಮೊತ್ತವನ್ನು ಮುಂದಿನ ಕಂತುಗಳಲ್ಲಿ ಪಾವತಿಸಲಾಗುವುದು ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

ಬರ ಪರಿಹಾರದ ಮೊದಲ ಕಂತಿನಲ್ಲಿ ನಿರೀಕ್ಷಿತ 2,500 ರೂ. ಬದಲಿಗೆ ಕೆಲ ರೈತರಿಗೆ 2,000 ರೂ. ಮಾತ್ರ ಪಾವತಿಯಾಗಿರುವ ಕುರಿತು ಉಂಟಾಗಿರುವ ಗೊಂದಲಕ್ಕೆ ಪ್ರತಿಕ್ರಿಯಿಸಿದ ಅವರು, ಇದುವರೆಗೆ ಪಾವತಿಸಿರುವ ಮೊತ್ತವೇ ಅಂತಿಮ ಪರಿಹಾರವಲ್ಲ ಎಂದು ಹೇಳಿದ್ದಾರೆ.

ಮೊದಲ ಕಂತಿನಲ್ಲಿ ಕಡಿಮೆ ಮೊತ್ತ ಪಡೆದಿರುವ ಹಲವು ರೈತರು ಆತಂಕ ವ್ಯಕ್ತಪಡಿಸಿದ್ದರು. ಇದೇ ವಿಚಾರವಾಗಿ ಪ್ರತಿಪಕ್ಷ ಬಿಜೆಪಿ ಕೂಡ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿತ್ತು. ಈ ಹಿನ್ನೆಲೆಯಲ್ಲಿ ಪರಮೇಶ್ವರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬರದಿಂದ ತೊಂದರೆಗೊಳಗಾದ ಅರ್ಹ ಪ್ರತಿಯೊಬ್ಬ ರೈತರಿಗೂ ಕನಿಷ್ಠ 5,000 ರೂ. ನೆರವು ನೀಡಲು ಸರ್ಕಾರ ನಿರ್ಧರಿಸಿದೆ. ಈ ಭರವಸೆಯನ್ನು ಈಡೇರಿಸಲಾಗುವುದು ದು ತಿಳಿಸಿದ್ದಾರೆ.

ಅಕ್ಟೋಬರ್ 23ರಂದು ಹೊರಡಿಸಿದ ಆದೇಶದ ಮೂಲಕ ಅರ್ಹ ಪ್ರತಿಯೊಬ್ಬ ರೈತರಿಗೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿಯಾಗಿ 2,500 ರೂ. ಬಿಡುಗಡೆ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಅದರಂತೆ, ಬರ ಪರಿಹಾರ ಕಾರ್ಯಕ್ರಮದ ಭಾಗವಾಗಿ ನವೆಂಬರ್ 5ರಂದು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ 17.43 ಕೋಟಿ ರೂ. ವಿತರಿಸುವ ಪ್ರಕ್ರಿಯೆಗೆ ಸರ್ಕಾರ ಚಾಲನೆ ನೀಡಿತ್ತು ಎಂದು ಹೇಳಿದ್ದಾರೆ.

ಇದೇ ವೇಳೆ ಪರಿಹಾರದ ಮೊತ್ತದಲ್ಲಿ ವ್ಯತ್ಯಾಸವಾಗಿರುವುದಕ್ಕೆ ಕಾರಣ ವಿವರಿಸಿದ ಪರಮೇಶ್ವರ್ ಅವರು, ಕೇಂದ್ರ ಸರ್ಕಾರ ರೂಪಿಸಿರುವ ಎಸ್‌ಡಿಆರ್‌ಎಫ್/ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಕೃಷಿ ಭೂಮಿಯ ವಿಸ್ತೀರ್ಣ ಮತ್ತು ವರ್ಗಕ್ಕೆ ಅನುಗುಣವಾಗಿ ಇನ್‌ಪುಟ್ ಸಬ್ಸಿಡಿ ನಿಗದಿಪಡಿಸಲಾಗಿದೆ. ಮಳೆಯಾಶ್ರಿತ ಬೆಳೆಗಳಿಗೆ ಕನಿಷ್ಠ 1,500 ರೂ., ನೀರಾವರಿ ಬೆಳೆಗಳಿಗೆ 2,600 ರೂ. ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3,200 ರೂ. ನೆರವು ನಿಗದಿಯಾಗಿದೆ ಎಂದಿದ್ದಾರೆ.

ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ತಾವು ಈ ನಿಗದಿತ ಮಾನದಂಡಗಳನ್ನು ಮೀರಿ, ಜಮೀನಿನ ವಿಸ್ತೀರ್ಣವನ್ನು ಪರಿಗಣಿಸದೆ ಅರ್ಹ ಪ್ರತಿಯೊಬ್ಬ ರೈತರಿಗೂ ಕನಿಷ್ಠ 5,000 ರೂ. ನೆರವು ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.

ಅರ್ಧ ಎಕರೆ ಜಮೀನಿನಲ್ಲಿ ಕೃಷಿ ಮಾಡುವ ರೈತನೂ ಹಲವು ಎಕರೆ ಜಮೀನು ಹೊಂದಿರುವ ರೈತನಷ್ಟೇ ಬರ, ಅನಿಶ್ಚಿತತೆ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಾನೆ. ರೈತನ ಜಮೀನಿನ ವಿಸ್ತೀರ್ಣದ ಆಧಾರದ ಮೇಲೆ ಸರ್ಕಾರದ ಕಾಳಜಿ ನಿರ್ಧಾರವಾಗಬಾರದು ಎಂದು ತಿಳಿಸಿದ್ದಾರೆ.

ಇದೇ ವೇಳೆ ಪಾವತಿ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮೊದಲ ಕಂತಿನಲ್ಲಿ 2,000 ರೂ. ಪಡೆದಿರುವ ರೈತರಿಗೆ ಉಳಿದ 3,000 ರೂ. ಹಾಗೂ 2,500 ರೂ. ಪಡೆದಿರುವವರಿಗೆ ಇನ್ನೂ 2,500 ರೂ. ಪಾವತಿಸಲಾಗುವುದು ಎಂದಿದ್ದಾರೆ.

ಇದು ಕನಿಷ್ಠ ನೆರವಿನ ಮೊತ್ತವಾಗಿದ್ದು, ಬೆಳೆ ನಷ್ಟದ ಪ್ರಮಾಣ ಮತ್ತು ಅನ್ವಯವಾಗುವ ನಿಯಮಗಳ ಆಧಾರದ ಮೇಲೆ ಅರ್ಹ ರೈತರಿಗೆ 5,000 ರೂ.ನಿಂದ 60,000 ರೂ.ವರೆಗೆ ಹೆಚ್ಚುವರಿ ಇನ್‌ಪುಟ್ ಸಬ್ಸಿಡಿ ದೊರೆಯಬಹುದು ಎಂದು ತಿಳಿಸಿದ್ದಾರೆ.

ಪಾವತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವಂತೆ ಹಾಗೂ ಬಾಕಿ ಕಂತುಗಳನ್ನು ಶೀಘ್ರ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಉಪಮುಖ್ಯಮಂತ್ರಿ ಹೇಳಿದ್ದಾರೆ.

ಸರ್ಕಾರದ ಮಾರ್ಗಸೂಚಿಗಳು ರೈತರ ಹಿತಾಸಕ್ತಿಗೆ ಪೂರಕವಾಗಿರಬೇಕೇ ಹೊರತು ಪರಿಹಾರ ನೀಡಲು ಅಡ್ಡಿಯಾಗಬಾರದು. ರೈತರ ಸಂಕಷ್ಟ ನಿವಾರಿಸಲು ಅಸ್ತಿತ್ವದಲ್ಲಿರುವ ನಿಯಮಗಳು ಸಾಕಾಗದಿದ್ದರೆ, ಅವರ ಹಿತಾಸಕ್ತಿ ಕಾಪಾಡಲು ನಮ್ಮ ಸರ್ಕಾರ ಅಗತ್ಯ ನಿರ್ಧಾರಗಳನ್ನು ಕೈಗೊಳ್ಳಲಿದೆ ಎಂದು ತಿಳಿಸಿದ್ದಾರೆ.

ವದಂತಿ ಮತ್ತು ತಪ್ಪು ಮಾಹಿತಿಗಳಿಗೆ ರೈತರು ಕಿವಿಗೊಡಬಾರದು ಎಂದು ಮನವಿ ಮಾಡಿದ ಪರಮೇಶ್ವರ್, ಪ್ರತಿಪಕ್ಷದ ನಾಯಕರು ಈ ವಿಚಾರವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.

ರೈತರಿಂದ ಬರುವ ನೈಜ ದೂರುಗಳನ್ನು ಪರಿಶೀಲಿಸಲು ಸರ್ಕಾರ ಸಿದ್ಧವಿದೆ. ಅರ್ಹ ರೈತರಿಗೆ ಸಿಗಬೇಕಾದ ಪರಿಹಾರಕ್ಕಿಂತ ಕಡಿಮೆ ಮೊತ್ತ ಪಾವತಿಯಾಗಿದ್ದರೆ ಅಂತಹ ಪ್ರಕರಣಗಳನ್ನು ಪರಿಶೀಲಿಸಲಾಗುವುದು ಎಂದಿದ್ದಾರೆ.

ನಮ್ಮ ರೈತರಿಗೆ ರಾಜಕೀಯ ಆರೋಪಗಳ ಅಗತ್ಯವಿಲ್ಲ. ಅವರಿಗೆ ಸಕಾಲದಲ್ಲಿ ನೆರವು, ಆರ್ಥಿಕ ಭದ್ರತೆ ಹಾಗೂ ಸರ್ಕಾರ ತಮ್ಮೊಂದಿಗಿದೆ ಎಂಬ ವಿಶ್ವಾಸ ಬೇಕು ಎಂದು ಹೇಳಿದ್ದಾರೆ.

ಇದೇ ವೇಳೆ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಬರದಿಂದ ಕಂಗೆಟ್ಟಿರುವ ರೈತರ ಬೆಂಬಲಕ್ಕೆ ನಿಂತು ಅವರಿಗೆ ಸಾಂತ್ವನ ಹೇಳಬೇಕಿದ್ದ ಸರ್ಕಾರ, ಅವರ ಸಂಕಷ್ಟದೊಂದಿಗೆ ಆಟವಾಡುತ್ತಿದೆ. ಇದರಲ್ಲಿ ಕಿಂಚಿತ್ತೂ ಮಾನವೀಯತೆ ಕಾಣುತ್ತಿಲ್ಲ ಎಂದು ಟೀಕಿಸಿದ್ದಾರೆ.

ಯಾದಗಿರಿ ಸೇರಿದಂತೆ ರಾಜ್ಯದ ತೀವ್ರ ಬರಪೀಡಿತ ಪ್ರದೇಶಗಳ ರೈತರಿಗೆ 5,000 ರೂ. ಪರಿಹಾರ ನೀಡಲಾಗುವುದು ಮತ್ತು ಮೊದಲ ಕಂತಿನಲ್ಲಿ 2,500 ರೂ. ಜಮೆ ಮಾಡಲಾಗುವುದು ಎಂದು ಸ್ವತಃ ಮುಖ್ಯಮಂತ್ರಿಯವರೇ ಭರವಸೆ ನೀಡಿದ್ದರು. ಆದರೆ, ರೈತರ ಬ್ಯಾಂಕ್ ಖಾತೆಗಳಿಗೆ 1,500 ರೂ., 2,000 ರೂ. ಸೇರಿದಂತೆ ಬೇರೆ ಬೇರೆ ಮೊತ್ತಗಳನ್ನು ಜಮೆ ಮಾಡುತ್ತಿರುವುದು ದಿವಾಳಿಯಾಗಿರುವ ಸರ್ಕಾರದ ಬೇಜವಾಬ್ದಾರಿ, ನಿರ್ಧಾರ ಕೈಗೊಳ್ಳುವಲ್ಲಿನ ಗೊಂದಲ ಮತ್ತು ರೈತ ವಿರೋಧಿ ಧೋರಣೆಗೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ್ದಾರೆ.

ಸಾಲದ ಸುಳಿಯಲ್ಲಿ ಸಿಲುಕಿ ಬೆಳೆ ಕಳೆದುಕೊಂಡಿರುವ ರೈತರಿಗೆ ಸರ್ಕಾರ ನೀಡುವ ಪರಿಹಾರ ದಾನವಲ್ಲ, ಅದು ಅವರ ಹಕ್ಕು ಎಂದು ವಿಜಯೇಂದ್ರ ಹೇಳಿದ್ದಾರೆ. ಖಜಾನೆ ಖಾಲಿ ಮಾಡಿಕೊಂಡಿರುವ ರಾಜ್ಯ ಸರ್ಕಾರ ಆರಂಭದಲ್ಲೇ ರೈತರಿಗೆ ಅತ್ಯಲ್ಪ ನೆರವು ಘೋಷಿಸಿತ್ತು. ಈಗ ಭರವಸೆ ನೀಡಿದ ಮೊತ್ತವನ್ನೂ ಪೂರ್ಣವಾಗಿ ಬಿಡುಗಡೆ ಮಾಡದಿರುವುದು ರೈತರ ಕಣ್ಣೀರು ಮತ್ತು ಸಂಕಷ್ಟವನ್ನು ಅಣಕಿಸಿದಂತಾಗಿದೆ ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರ ಕೊಟ್ಟ ಮಾತಿನಿಂದ ಹಿಂದೆ ಸರಿದು ರೈತರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ. ಉಳಿದೆಲ್ಲ ವಿಷಯಗಳನ್ನು ಬದಿಗಿಟ್ಟು ಮೊದಲು ನಿಮ್ಮ ಭರವಸೆ ಈಡೇರಿಸಿ. ಬಾಕಿ ಇರುವ ಮೊತ್ತವನ್ನೂ ಒಳಗೊಂಡಂತೆ ಬರಪೀಡಿತ ಪ್ರತಿಯೊಬ್ಬ ರೈತರಿಗೂ ಪೂರ್ಣ 5,000 ರೂ. ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಿ. ದೇಶಕ್ಕೆ ಅನ್ನ ನೀಡುವ ರೈತರ ಶಾಪಕ್ಕೆ ಗುರಿಯಾಗಬೇಡಿ ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Babri ಧ್ವಂಸದ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದೆ: ಇಂದಿರಾ ಹತ್ಯೆ ನಂತರ ಪ್ರತಿಕ್ಷಣವೂ ಭಯದಲ್ಲೇ ಬದುಕಿದ್ದೆವು: ‘Belonging’ ಆತ್ಮಚರಿತ್ರೆಯಲ್ಲಿ ಹಳೇ ನೆನಪುಗಳ ಕೆದಕಿದ ಸೋನಿಯಾ ಗಾಂಧಿ..!

ಅಮೆರಿಕ ರಾಜಕೀಯದಲ್ಲಿ ಹೈಡ್ರಾಮಾ: ರಕ್ಷಣಾ ಕಾರ್ಯದರ್ಶಿ ಹೆಗ್ಸೆತ್ ವಿರುದ್ಧದ ವಾಗ್ದಂಡನೆ ನಿರ್ಣಯಕ್ಕೆ ಸೋಲು, Trump ಬೆಂಬಲಕ್ಕೆ ನಿಂತ ರಿಪಬ್ಲಿಕನ್ನರು..!

ಮಗುವನ್ನು ನದಿಗೆ ಬಿಡಲು ಒಪ್ಪದ ಸೋನಿಯಾ: ಮೆಹ್ರೌಲಿ ತೋಟದಲ್ಲಿ ನಡೆದಿತ್ತು ಆ ಪುಟ್ಟ ಕಂದನ ಅಂತ್ಯಕ್ರಿಯೆ, 57 ವರ್ಷಗಳ ಬಳಿಕ ಮನದ ನೋವು ಬಿಚ್ಚಿಟ್ಟ ಕಾಂಗ್ರೆಸ್ ನಾಯಕಿ..!

ಆರ್ಥಿಕ ನಿರ್ಬಂಧಗಳು ಪರಿಣಾಮಕಾರಿಯಾಗಿವೆ, ಇರಾನ್ ವಿರುದ್ಧ ಯುದ್ಧ ಕಾರ್ಯಾಚರಣೆ ಅಗತ್ಯವಿಲ್ಲ: US ವಿದೇಶಾಂಗ ಸಚಿವ ರೂಬಿಯೊ

ಅಜ್ಜನ ಆಸ್ತಿಯಲ್ಲಿ ಮೊಮ್ಮಗನಿಗೆ ಜನ್ಮಸಿದ್ಧ ಹಕ್ಕು ಇದೆಯೇ?: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು