ಸಿಎಂ DK ಶಿವಕುಮಾರ್ 
ರಾಜ್ಯ

ಜಾಗತಿಕ ತಂತ್ರಜ್ಞಾನ ಹಬ್ ಆಗಲಿದೆ ಕರ್ನಾಟಕ; 'AI, ರೋಬೋಟಿಕ್ಸ್, ಚಿಪ್ ಉತ್ಪಾದನೆಗೆ ಆದ್ಯತೆ': ಸಿಎಂ DK ಶಿವಕುಮಾರ್

ರಾಜ್ಯದಲ್ಲಿ ಹೂಡಿಕೆ, ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಐ ಅಂಡ್ ಬಿಯಾಂಡ್' (ಎಐ ಮತ್ತು ಅದಕ್ಕೂ ಮೀರಿದ ತಂತ್ರಜ್ಞಾನ) ಎಂಬ ವಿಷಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ..

ಬೆಂಗಳೂರು: ಕೃತಕ ಬುದ್ಧಿಮತ್ತೆ (ಎಐ), ಡೀಪ್‌ಟೆಕ್, ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ 29ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದ ಅವರು, 'ರಾಜ್ಯದಲ್ಲಿ ಹೂಡಿಕೆ, ಸಂಶೋಧನೆ, ಸ್ಟಾರ್ಟ್‌ಅಪ್‌ಗಳು ಮತ್ತು ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಎಐ ಅಂಡ್ ಬಿಯಾಂಡ್' (ಎಐ ಮತ್ತು ಅದಕ್ಕೂ ಮೀರಿದ ತಂತ್ರಜ್ಞಾನ) ಎಂಬ ವಿಷಯದಡಿ ನಡೆಯುತ್ತಿರುವ ಈ ಶೃಂಗಸಭೆಯಲ್ಲಿ 75ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ' ಎಂದರು.

ಕರ್ನಾಟಕವು ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿದೆ. ಮುಂದಿನ ಜಾಗತಿಕ ತಂತ್ರಜ್ಞಾನ ಕ್ರಾಂತಿಗೂ ನಾಯಕತ್ವ ವಹಿಸಲು ರಾಜ್ಯ ಸಿದ್ಧವಾಗುತ್ತಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ದೇಶದ ಸಾಫ್ಟ್‌ವೇರ್ ಆದಾಯದಲ್ಲಿ ಕರ್ನಾಟಕದ ದೊಡ್ಡ ಪಾಲು

ಭಾರತದ ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತಿನಿಂದ ಬರುವ ಪ್ರತಿ 5 ಡಾಲರ್ ಆದಾಯದಲ್ಲಿ 2 ಡಾಲರ್ ಕರ್ನಾಟಕದ ಪಾಲಾಗಿದೆ. ಕಳೆದ ವರ್ಷ ರಾಜ್ಯದ ಸಾಫ್ಟ್‌ವೇರ್ ಮತ್ತು ಸೇವೆಗಳ ರಫ್ತು ಆದಾಯ ಸುಮಾರು 173 ಬಿಲಿಯನ್ ಡಾಲರ್ ಆಗಿತ್ತು ಎಂದು ಅವರು ತಿಳಿಸಿದರು.

2025-26ನೇ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಕರ್ನಾಟಕಕ್ಕೆ 9.4 ಬಿಲಿಯನ್ ಡಾಲರ್ ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ಬಂದಿದೆ. ಇದು ದೇಶದ ಒಟ್ಟು ಹೂಡಿಕೆಯ ಶೇ.26.7ರಷ್ಟಾಗಿದೆ. ಬೆಂಗಳೂರಿನಲ್ಲಿ 1,000ಕ್ಕೂ ಹೆಚ್ಚು ಜಾಗತಿಕ ಸಾಮರ್ಥ್ಯ ಕೇಂದ್ರಗಳು (ಜಿಸಿಸಿ) ಕಾರ್ಯನಿರ್ವಹಿಸುತ್ತಿವೆ. 2025ರಲ್ಲೇ 30ಕ್ಕೂ ಹೆಚ್ಚು ಹೊಸ ಜಿಸಿಸಿಗಳು ರಾಜ್ಯಕ್ಕೆ ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಹೂಡಿಕೆ ತಂದಿವೆ ಎಂದು ವಿವರಿಸಿದರು.

ರಾಜ್ಯದಲ್ಲಿ 24,000ಕ್ಕೂ ಹೆಚ್ಚು ಮಾನ್ಯತೆ ಪಡೆದ ಸ್ಟಾರ್ಟ್‌ಅಪ್‌ಗಳಿವೆ. ಭಾರತದ ಪ್ರತಿ ಐದು ಯುನಿಕಾರ್ನ್‌ಗಳಲ್ಲಿ (ಒಂದು ಬಿಲಿಯನ್ ಡಾಲರ್‌ಗೂ ಅಧಿಕ ಮೌಲ್ಯದ ಸ್ಟಾರ್ಟ್‌ಅಪ್) ಸುಮಾರು ಎರಡು ಕರ್ನಾಟಕದಿಂದಲೇ ಬಂದಿವೆ ಎಂದು ಹೇಳಿದರು.

ಬೆಂಗಳೂರು ಜಾಗತಿಕ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯಲ್ಲಿ ಎಂಟನೇ ಸ್ಥಾನದಲ್ಲಿದ್ದು, ಏಷ್ಯಾದಲ್ಲಿ ಎಐ ಆಧಾರಿತ ಸ್ಟಾರ್ಟ್‌ಅಪ್‌ಗಳ ವಿಚಾರದಲ್ಲಿ ಎರಡನೇ ಸ್ಥಾನದಲ್ಲಿದೆ. ಬೆಂಗಳೂರಿನ ತಂತ್ರಜ್ಞಾನ ಕ್ಷೇತ್ರಕ್ಕೆ 4.4 ಬಿಲಿಯನ್ ಡಾಲರ್ ಹೂಡಿಕೆ ಬಂದಿದ್ದು, ಇದು ಭಾರತದ ಮುಂದಿನ ಐದು ನಗರಗಳ ಒಟ್ಟು ಹೂಡಿಕೆಗೆ ಬಹುತೇಕ ಸಮಾನವಾಗಿದೆ ಎಂದರು.

ಸ್ಟಾರ್ಟ್‌ಅಪ್‌ಗಳಿಗೆ ₹25 ಕೋಟಿ ಮೀಸಲು

ಕರ್ನಾಟಕದ ಸ್ಟಾರ್ಟ್‌ಅಪ್‌ಗಳು ಒಟ್ಟಾರೆಯಾಗಿ ಸುಮಾರು 79 ಬಿಲಿಯನ್ ಡಾಲರ್ ಹೂಡಿಕೆ ಸಂಗ್ರಹಿಸಿವೆ. ಬೆಂಗಳೂರಿನ ಮಹಿಳಾ ಉದ್ಯಮಿಗಳು 13.4 ಬಿಲಿಯನ್ ಡಾಲರ್ ಹೂಡಿಕೆ ಪಡೆದಿದ್ದಾರೆ ಎಂದು ಡಿಕೆಶಿ ಮಾಹಿತಿ ನೀಡಿದರು.

ಸರ್ಕಾರದ 'ಎಲಿವೇಟ್' (ELEVATE) ಯೋಜನೆಯಡಿ ಕಳೆದ 10 ವರ್ಷಗಳಲ್ಲಿ ಸುಮಾರು 1,500 ಸ್ಟಾರ್ಟ್‌ಅಪ್‌ಗಳಿಗೆ 41 ಮಿಲಿಯನ್ ಡಾಲರ್ ಮೊತ್ತದ ಅನುದಾನ ನೀಡಲಾಗಿದೆ. 'ಎಲಿವೇಟ್ ನೆಕ್ಸ್ಟ್' ಯೋಜನೆಯಡಿ ಡೀಪ್‌ಟೆಕ್ ಸ್ಟಾರ್ಟ್‌ಅಪ್‌ಗಳಿಗೆ ತಲಾ ₹1 ಕೋಟಿ ಅನುದಾನ ನೀಡಲಾಗುತ್ತಿದೆ. ಕಳೆದ ವರ್ಷದಿಂದ ಈವರೆಗೆ 33 ಸ್ಟಾರ್ಟ್‌ಅಪ್‌ಗಳಿಗೆ ಒಟ್ಟು ₹30 ಕೋಟಿ ಅನುದಾನ ನೀಡಲಾಗಿದೆ.

ಇದಲ್ಲದೆ, 'ಇನ್ನೋವರ್ಸ್' (Innoverse) ಹೆಸರಿನ ಡೀಪ್‌ಟೆಕ್ ವೇಗವರ್ಧಕ ಕಾರ್ಯಕ್ರಮದ ಮೂಲಕ ಮುಂದಿನ ಐದು ವರ್ಷಗಳಲ್ಲಿ 35 ಬೆಳವಣಿಗೆಯ ಹಂತದಲ್ಲಿರುವ ಉದ್ಯಮಗಳಿಗೆ ನೆರವು ನೀಡಲಾಗುತ್ತದೆ. 'ಗವರ್ನಮೆಂಟ್ ಫಸ್ಟ್' ಯೋಜನೆಯಡಿ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸುವ ನವೀನ ಉತ್ಪನ್ನಗಳಿಗೆ ಸರ್ಕಾರವೇ ಮೊದಲ ಗ್ರಾಹಕವಾಗಲಿದೆ. ಇದಕ್ಕಾಗಿ ₹25 ಕೋಟಿ ಮೀಸಲಿಡಲಾಗಿದೆ ಎಂದು ಘೋಷಿಸಿದರು.

ಬೆಂಗಳೂರಿನಲ್ಲಿ ಭಾರತದ ಮೊದಲ ಎಐ ವಿಶ್ವವಿದ್ಯಾಲಯ

ಕರ್ನಾಟಕದ ಮುಂದಿನ ತಂತ್ರಜ್ಞಾನ ಬೆಳವಣಿಗೆಯಲ್ಲಿ ಕೃತಕ ಬುದ್ಧಿಮತ್ತೆ ಪ್ರಮುಖ ಪಾತ್ರ ವಹಿಸಲಿದೆ. ದೇಶದ ಒಟ್ಟು ಎಐ ಮತ್ತು ಮಷಿನ್ ಲರ್ನಿಂಗ್ ಪ್ರತಿಭೆಗಳಲ್ಲಿ ಸುಮಾರು ಶೇ.50ರಷ್ಟು ಬೆಂಗಳೂರಿನಲ್ಲಿದ್ದಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಭಾರತದ ಮೊದಲ ಎಐ ವಿಶ್ವವಿದ್ಯಾಲಯ ಸ್ಥಾಪಿಸುವ ಕಾರ್ಯ ನಡೆಯುತ್ತಿದೆ. ಇದರ ಭಾಗವಾಗಿ ಎಐ ಹಬ್ ನಿರ್ಮಿಸಿ ಸ್ಟಾರ್ಟ್‌ಅಪ್‌ಗಳು, ಸಂಶೋಧಕರು ಮತ್ತು ಉದ್ಯಮಗಳನ್ನು ಒಂದೇ ವೇದಿಕೆಗೆ ತರಲಾಗುವುದು. ರಾಯಚೂರಿನ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (IIIT)ಯಲ್ಲಿ ಮತ್ತೊಂದು ಅತ್ಯಾಧುನಿಕ ಎಐ ಕೇಂದ್ರ ಸ್ಥಾಪಿಸಲಾಗುವುದು. ಇದರ ಮೂಲಕ ಉತ್ತರ ಕರ್ನಾಟಕದ 13 ಜಿಲ್ಲೆಗಳಲ್ಲಿ ಕೃಷಿ, ಆರೋಗ್ಯ, ಶಿಕ್ಷಣ ಮತ್ತು ಸಣ್ಣ ಉದ್ಯಮಗಳಿಗೆ ಎಐ ತಂತ್ರಜ್ಞಾನವನ್ನು ಬಳಸಲು ನೆರವು ನೀಡಲಾಗುವುದು.

ಬೆಂಗಳೂರಿನಲ್ಲಿ 'ಬ್ರೈನ್ಸ್' (BRAINZ - Bengaluru Robotics and AI Innovation Zone) ಯೋಜನೆ ಜಾರಿಗೊಳಿಸುವ ಉದ್ದೇಶವಿದೆ. ಇದರಡಿ ರೋಬೋಟಿಕ್ಸ್ ಮತ್ತು ಎಐ ಸಂಶೋಧನೆ, ಮಾದರಿ ಉತ್ಪನ್ನಗಳ ಅಭಿವೃದ್ಧಿ ಹಾಗೂ ಉತ್ಪಾದನೆಗೆ ಅಗತ್ಯವಾದ ವ್ಯವಸ್ಥೆ ರೂಪಿಸಲಾಗುವುದು.

ಸೆಮಿಕಂಡಕ್ಟರ್ ಉತ್ಪಾದನೆಗೆ ₹23 ಸಾವಿರ ಕೋಟಿ ಹೂಡಿಕೆ

ಸೆಮಿಕಂಡಕ್ಟರ್ ಕ್ಷೇತ್ರದಲ್ಲೂ ಕರ್ನಾಟಕ ಮಹತ್ವದ ಸ್ಥಾನ ಹೊಂದಿದೆ. ರಾಜ್ಯದಲ್ಲಿ 100ಕ್ಕೂ ಹೆಚ್ಚು ಚಿಪ್ ವಿನ್ಯಾಸ ಕಂಪನಿಗಳಿವೆ. ದೇಶದ ಸೆಮಿಕಂಡಕ್ಟರ್ ಸಾಮರ್ಥ್ಯ ಕೇಂದ್ರಗಳಲ್ಲಿ ಕೆಲಸ ಮಾಡುವ ಪ್ರತಿ ಐದು ಎಂಜಿನಿಯರ್‌ಗಳಲ್ಲಿ ಮೂವರು ಬೆಂಗಳೂರಿನಲ್ಲಿದ್ದಾರೆ ಎಂದು ಡಿಕೆಶಿ ತಿಳಿಸಿದರು.

ದೇಶದ ಎಲೆಕ್ಟ್ರಾನಿಕ್ಸ್ ರಫ್ತಿನಲ್ಲಿ ಕರ್ನಾಟಕದ ಪಾಲು ಶೇ.20ರಷ್ಟಿದೆ. ಇದುವರೆಗೆ ಚಿಪ್ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ರಾಜ್ಯ ಈಗ ಸೆಮಿಕಂಡಕ್ಟರ್ ಉತ್ಪಾದನೆಯತ್ತ ಹೆಜ್ಜೆ ಇಡುತ್ತಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಸೆಮಿಕಂಡಕ್ಟರ್ ಸಂಶೋಧನೆ ಹಾಗೂ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಾಗತಿಕ ಕಂಪನಿಗಳು ₹23 ಸಾವಿರ ಕೋಟಿಗೂ ಅಧಿಕ ಹೂಡಿಕೆ ಮಾಡುತ್ತಿವೆ ಎಂದು ಹೇಳಿದರು.

ಧಾರವಾಡದಿಂದ ಮೈಸೂರಿನವರೆಗೆ ನಾಲ್ಕು ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಈ ಕ್ಲಸ್ಟರ್‌ಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಜಮೀನು, ವಿದ್ಯುತ್, ಮೂಲಸೌಕರ್ಯ ಮತ್ತು ನುರಿತ ಮಾನವ ಸಂಪನ್ಮೂಲ ಒದಗಿಸಲಾಗುವುದು. ಇದಲ್ಲದೆ, ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿನ 2D ಇನ್ನೋವೇಷನ್ ಹಬ್, SFAL ಸೆಮಿಕಂಡಕ್ಟರ್ ವೇಗವರ್ಧಕ ಕೇಂದ್ರ ಮತ್ತು ಇನ್ಫಿಫ್ಯಾಬ್ ಮೈಕ್ರೋಫ್ಯಾಬ್ರಿಕೇಶನ್ ಕೇಂದ್ರಗಳ ಮೂಲಕ ಸಂಶೋಧನೆ ಹಾಗೂ ಉತ್ಪಾದನೆಗೆ ಉತ್ತೇಜನ ನೀಡಲಾಗುವುದು.

ಜೈವಿಕ ತಂತ್ರಜ್ಞಾನಕ್ಕೂ ವಿಶೇಷ ಆದ್ಯತೆ

ಜೈವಿಕ ಆರ್ಥಿಕತೆಯಲ್ಲೂ ಕರ್ನಾಟಕ ಪ್ರಮುಖ ಕೊಡುಗೆ ನೀಡುತ್ತಿದೆ. ಕಳೆದ ವರ್ಷ ರಾಜ್ಯದ ಜೈವಿಕ ಆರ್ಥಿಕತೆಯ ಮೌಲ್ಯ 39.2 ಬಿಲಿಯನ್ ಡಾಲರ್ ಆಗಿದ್ದು, ಇದು ದೇಶದ ಒಟ್ಟು ಜೈವಿಕ ಆರ್ಥಿಕತೆಯ ಐದನೇ ಒಂದು ಭಾಗವಾಗಿದೆ. ರಾಜ್ಯದ ಆರ್ಥಿಕತೆಯಲ್ಲೂ ಶೇ.10ಕ್ಕೂ ಹೆಚ್ಚು ಪಾಲು ಹೊಂದಿದೆ ಎಂದು ಡಿಕೆಶಿ ತಿಳಿಸಿದರು.

ಸಮುದ್ರ ಜೈವಿಕ ತಂತ್ರಜ್ಞಾನ, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಮೆರೈನ್ ಬಯೋಟೆಕ್ನಾಲಜಿ ನೀತಿ, ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಮೆರೈನ್ ಬಯೋಟೆಕ್ನಾಲಜಿ, ಬ್ಲೂ ಎಕಾನಮಿ, ಅಗ್ರಿ ಇನ್ನೋವೇಷನ್ ಪಾರ್ಕ್ ಮತ್ತು ಕೃಷಿಕಲ್ಪ ಸೆಂಟರ್ ಆಫ್ ಎಕ್ಸಲೆನ್ಸ್ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಜೀನೋಮ್ ಎಡಿಟಿಂಗ್ ಮತ್ತು ಜೀನ್ ಥೆರಪಿ ಕ್ಷೇತ್ರಕ್ಕೆ ಹೊಸ ಸಂಸ್ಥೆ, ಆರೋಗ್ಯ ಮತ್ತು ವೈದ್ಯಕೀಯ ತಂತ್ರಜ್ಞಾನಕ್ಕಾಗಿ ಚರಕ ಸೆಂಟರ್ ಆಫ್ ಎಕ್ಸಲೆನ್ಸ್ ಹಾಗೂ ಬಯೋಟೆಕ್ನಾಲಜಿಯಲ್ಲಿ ಎಐ ಬಳಕೆಗೆ ಮತ್ತೊಂದು ಅತ್ಯುನ್ನತ ಕೇಂದ್ರ ಸ್ಥಾಪಿಸುವ ಯೋಜನೆಯೂ ಇದೆ. ಸಂಶೋಧನೆಗಳನ್ನು ವಾಣಿಜ್ಯ ಉತ್ಪನ್ನಗಳಾಗಿ ಪರಿವರ್ತಿಸಲು 11 ಹೊಸ ಇನ್‌ಕ್ಯುಬೇಟರ್‌ಗಳನ್ನು ಆರಂಭಿಸಲಾಗುವುದು ಎಂದರು.

33 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೌಶಲ್ಯ ತರಬೇತಿ

ಹೊಸ ತಂತ್ರಜ್ಞಾನ ಕ್ಷೇತ್ರಗಳ ಅಗತ್ಯಕ್ಕೆ ತಕ್ಕಂತೆ ಯುವಜನರನ್ನು ಸಜ್ಜುಗೊಳಿಸಲು ₹300 ಕೋಟಿ ವೆಚ್ಚದ 'ನಿಪುರ್ಣ ಕರ್ನಾಟಕ' ಕೌಶಲ್ಯಾಭಿವೃದ್ಧಿ ಯೋಜನೆ ಜಾರಿಗೊಳಿಸಲಾಗುತ್ತಿದೆ. ಜಾಗತಿಕ ತಂತ್ರಜ್ಞಾನ ಕಂಪನಿಗಳ ಸಹಭಾಗಿತ್ವದಲ್ಲಿ ಈಗಾಗಲೇ 33 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗಕ್ಕೆ ಅಗತ್ಯವಾದ ತರಬೇತಿ ನೀಡಲಾಗಿದೆ. ವೃತ್ತಿಜೀವನದಲ್ಲಿ ವಿರಾಮ ಪಡೆದು ಮತ್ತೆ ಉದ್ಯೋಗಕ್ಕೆ ಮರಳಲು ಬಯಸುವ ಮಹಿಳೆಯರಿಗೂ ಈ ಯೋಜನೆಯಡಿ ನೆರವು ನೀಡಲಾಗುತ್ತಿದೆ ಎಂದು ತಿಳಿಸಿದರು.

75ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಭಾಗಿ

ಈ ವರ್ಷದ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ 75ಕ್ಕೂ ಹೆಚ್ಚು ದೇಶಗಳು ಭಾಗವಹಿಸುತ್ತಿವೆ. ಕಳೆದ ವರ್ಷ 57 ದೇಶಗಳು ಪಾಲ್ಗೊಂಡಿದ್ದವು. ಈ ಬಾರಿ ಪ್ರದರ್ಶಕರ ಸಂಖ್ಯೆ ಸುಮಾರು ದ್ವಿಗುಣಗೊಂಡಿದ್ದು, ಉದ್ಯಮ ಕ್ಷೇತ್ರದ ಪ್ರತಿನಿಧಿಗಳ ಸಂಖ್ಯೆಯಲ್ಲೂ ಮೂರನೇ ಒಂದು ಭಾಗದಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ.

ಎಐ, ಡೀಪ್‌ಟೆಕ್, ಬಯೋಟೆಕ್ನಾಲಜಿ, ಆರೋಗ್ಯ ಮತ್ತು ರೋಬೋಟಿಕ್ಸ್ ಕ್ಷೇತ್ರಗಳ ಪ್ರಮುಖರನ್ನು ಒಂದೇ ವೇದಿಕೆಗೆ ತರುವ ಈ ಶೃಂಗಸಭೆಯಲ್ಲಿ ಜಾಗತಿಕ ಹೂಡಿಕೆದಾರರು ಮತ್ತು ಉದ್ಯಮಿಗಳಿಗೆ ಕರ್ನಾಟಕದಲ್ಲಿ ಹೂಡಿಕೆ ಮಾಡುವಂತೆ ಡಿಕೆ ಶಿವಕುಮಾರ್ ಆಹ್ವಾನ ನೀಡಿದರು.

"ನಿಮಗೆ ಅಗತ್ಯವಿರುವ ಪ್ರತಿಭೆ, ನೀತಿ ಮತ್ತು ಸಹಭಾಗಿತ್ವವನ್ನು ನಾವು ಒದಗಿಸುತ್ತೇವೆ. ನಿಮ್ಮ ಮಹತ್ವಾಕಾಂಕ್ಷೆಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಎಐ ನಂತರದ ತಂತ್ರಜ್ಞಾನ ಜಗತ್ತನ್ನು ನಿಮ್ಮ ಸಹಕಾರದೊಂದಿಗೆ ಕರ್ನಾಟಕದಲ್ಲೇ ನಿರ್ಮಿಸಲು ನಾವು ಬಯಸಿದ್ದೇವೆ" ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ವಿಶ್ವಕ್ಕೆ ಶಾಂತಿ-ಸ್ಥಿರತೆ ಅಗತ್ಯ, ಪೈಪೋಟಿ ಬದಿಗಿಟ್ಟು ಸಹಕಾರದ ಹಾದಿಯಲ್ಲಿ ಸಾಗೋಣ: India-ASEAN ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ

ಐಫೋನ್‌ಗಳಿಗೆ ಮಾಲ್ ವೇರ್ ದಾಳಿ, ಕ್ರಿಪ್ಟೋ ಕಳ್ಳತನಕ್ಕೆ ಯತ್ನ: ವಿಶ್ವದ ಅತಿ ಹೆಚ್ಚು ಭೇಟಿ ನೀಡುವ ವೆಬ್‌ಸೈಟ್‌ಗಳು ಗುರಿ!

UN-OIC ಕರಡು ನಿರ್ಣಯ: ಉದ್ದೇಶಪೂರ್ವಕವಾಗಿ ಭಾರತವನ್ನು ದೂರವಿಟ್ಟ ಟರ್ಕಿ ವಿರುದ್ಧ ಭಾರತ ತೀವ್ರ ಕಿಡಿ, ನಿರ್ಣಯದ ವಿರುದ್ಧ ಮತದಾನ

ಪಹಲ್ಗಾಮ್ ದಾಳಿಗೆ ನಂಟು ಆರೋಪ ಹೊರಿಸಿ ಬೆದರಿಕೆ; ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ US ಮೂಲದ ನಿವೃತ್ತ ವಕೀಲರಿಗೆ 4 ಕೋಟಿ ರೂಪಾಯಿ ವಂಚನೆ

IPL 2027 Retention: 'ಯಾರನ್ನೂ ಕೈಬಿಡಬೇಡಿ'.. RCBಯೇ ಎಲ್ಲರ ಕೇಂದ್ರ ಬಿಂದು, ಅಭಿಮಾನಿಗಳ ಬೇಡಿಕೆ, ಆಕಾಶ್ ಚೋಪ್ರಾ ಹೇಳಿದ್ದೇನು?