ಚುನಾವಣಾ ಆಯೋಗ 
ರಾಜ್ಯ

SIR ಪ್ರಕ್ರಿಯೆ ಮುಕ್ತಾಯ: ರಾಜ್ಯಗಳಿಗೆ SSR ಆರಂಭಿಸಲು ಚುನಾವಣಾ ಆಯೋಗ ಸೂಚನೆ; ಡಿ.1ಕ್ಕೆ ಕರಡು ಮತದಾರರ ಪಟ್ಟಿ ಪ್ರಕಟ..!

ಆಯೋಗದ ಆದೇಶದ ಪ್ರಕಾರ, ಡಿಸೆಂಬರ್ 1ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. 2027ರ ಜನವರಿ 20ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮುಕ್ತಾಯಗೊಂಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ಪ್ರಕ್ರಿಯೆ ಆರಂಭಿಸುವಂತೆ ಭಾರತೀಯ ಚುನಾವಣಾ ಆಯೋಗ (ECI) ಸೋಮವಾರ ಸೂಚನೆ ನೀಡಿದೆ.

ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಮತ್ತು ಅನರ್ಹ ಮತದಾರರು ಪಟ್ಟಿಯಲ್ಲಿ ಸೇರ್ಪಡೆಯಾಗದಂತೆ ನೋಡಿಕೊಳ್ಳಲು ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಆಯೋಗ ನಿರ್ದೇಶನ ನೀಡಿದೆ.

ಆಯೋಗದ ಆದೇಶದ ಪ್ರಕಾರ, ಡಿಸೆಂಬರ್ 1ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. 2027ರ ಜನವರಿ 20ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆಯಾಗಲಿದೆ.

ನವೆಂಬರ್ 23ರಂದು ಮತಗಟ್ಟೆಗಳ ತರ್ಕಬದ್ಧೀಕರಣ ಅಥವಾ ಮರುಹೊಂದಾಣಿಕೆ ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್ 1ರಿಂದ 31ರವರೆಗೆ ಮತದಾರರ ಪಟ್ಟಿಗೆ ಸಂಬಂಧಿಸಿದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಸಲ್ಲಿಕೆಯಾದ ಎಲ್ಲ ಹಕ್ಕು ಮತ್ತು ಆಕ್ಷೇಪಣೆಗಳನ್ನು 2027ರ ಜನವರಿ 14ರೊಳಗೆ ಇತ್ಯರ್ಥಪಡಿಸಬೇಕು ಎಂದು ಆಯೋಗ ಸೂಚಿಸಿದೆ.

ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ, “SIR ಪ್ರಕ್ರಿಯೆ ವೇಳೆ ಮತಗಣತಿ ನಮೂನೆಗಳ ಮೂಲಕ ಮತದಾರರ ನೋಂದಣಿಗಾಗಿ ಬೂತ್ ಮಟ್ಟದ ಅಧಿಕಾರಿಗಳು (BLOs) ಮನೆಮನೆಗೆ ಭೇಟಿ ನೀಡಿದ್ದರು. ಆದರೆ, ಈಗ ಅಂತಹ ಪ್ರಕ್ರಿಯೆ ನಡೆಯುವುದಿಲ್ಲ. ಮತದಾರರು ಹೆಸರು ಸೇರ್ಪಡೆಗೆ ನಮೂನೆ-6, ಹೆಸರು ಅಳಿಸಲು ನಮೂನೆ-7 ಮತ್ತು ತಿದ್ದುಪಡಿಗೆ ನಮೂನೆ-8 ಸಲ್ಲಿಸಬೇಕು. ಇದಕ್ಕಾಗಿ ಬೂತ್ ಮಟ್ಟದ ಅಧಿಕಾರಿಗಳು ಅಥವಾ ಮತದಾರರ ನೋಂದಣಾಧಿಕಾರಿಗಳ (EROs) ಕಚೇರಿಗೆ ಭೇಟಿ ನೀಡಬಹುದು. ಆನ್‌ಲೈನ್‌ನಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ.

SIR ಪ್ರಕ್ರಿಯೆಯಲ್ಲಿ ನಡೆದಂತೆ SSR ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆ ನಡೆಯುವುದಿಲ್ಲ. ಆದರೆ, ಯಾವುದೇ ಗೊಂದಲ ಅಥವಾ ಅನುಮಾನಗಳು ಎದುರಾದರೆ ಮತದಾರರ ನೋಂದಣಾಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳು ಅಗತ್ಯ ಸ್ಪಷ್ಟನೆಗಳನ್ನು ಕೇಳಲಿದ್ದಾರೆ.

ಮತದಾರರ ಹೆಸರು ಸೇರ್ಪಡೆ ಮತ್ತು ತೆಗೆದುಹಾಕುವ ಸಂದರ್ಭದಲ್ಲಿ SIR ಪ್ರಕ್ರಿಯೆಗಾಗಿ ಸಿದ್ಧಪಡಿಸಿದ್ದ ಗೈರುಹಾಜರಿ, ಸ್ಥಳಾಂತರಗೊಂಡವರು, ಮೃತಪಟ್ಟವರು, ನಕಲಿ ಹೆಸರುಗಳು ಮತ್ತು ಇತರೆ (ASDDO) ಪಟ್ಟಿಯನ್ನು ಬಳಸಿಕೊಂಡು ದತ್ತಾಂಶ ಪರಿಶೀಲಿಸಲಾಗುತ್ತದೆ. ಅಲ್ಲದೆ, ಒಂದೇ ವ್ಯಕ್ತಿಯ ಹೆಸರು ಹಲವು ಬಾರಿ ಸೇರ್ಪಡೆಯಾಗಿದೆಯೇ ಎಂಬುದನ್ನು ಪತ್ತೆಹಚ್ಚಲು ECINET ಆ್ಯಪ್‌ನ ನೆರವನ್ನೂ ಪಡೆಯಲಾಗುತ್ತದೆ ಎಂದು ತಿಳಿಸಿದ್ದಾರೆ.

SIR ಪ್ರಕ್ರಿಯೆಯ ಪ್ರಕಾರ, ಜೂನ್ 16ರಂದು ರಾಜ್ಯದಲ್ಲಿ ಒಟ್ಟು 5,54,32,314 ಮತದಾರರಿದ್ದರು. ASDDO ಪಟ್ಟಿಯಲ್ಲಿ 1,07,96,339 ಮತದಾರರ ಹೆಸರುಗಳನ್ನು ಗುರುತಿಸಲಾಗಿತ್ತು. SIR ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಪ್ರಕಟಿಸಲಾದ ಅಂತಿಮ ಮತದಾರರ ಪಟ್ಟಿಯಲ್ಲಿ 4,55,00,011 ಮತದಾರರು ಸ್ಥಾನ ಪಡೆದಿದ್ದಾರೆ. ಕರ್ನಾಟಕದಲ್ಲಿ ಜೂನ್ 30ರಂದು ಆರಂಭವಾಗಿದ್ದ SIR ಪ್ರಕ್ರಿಯೆ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸುವುದರೊಂದಿಗೆ ಮುಕ್ತಾಯಗೊಂಡಿತ್ತು.

ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯದಲ್ಲಿ ತೊಡಗಿರುವ ಮುಖ್ಯ ಚುನಾವಣಾಧಿಕಾರಿಗಳು, ಜಿಲ್ಲಾ ಚುನಾವಣಾಧಿಕಾರಿಗಳು, ಮತದಾರರ ನೋಂದಣಾಧಿಕಾರಿಗಳು, ಸಹಾಯಕ ಮತದಾರರ ನೋಂದಣಾಧಿಕಾರಿಗಳು ಮತ್ತು ಬೂತ್ ಮಟ್ಟದ ಅಧಿಕಾರಿಗಳಿಗೆ ಅಗತ್ಯ ಸಿಬ್ಬಂದಿ ಹಾಗೂ ಸಂಪನ್ಮೂಲಗಳನ್ನು ಒದಗಿಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಚುನಾವಣಾ ಆಯೋಗ ನಿರ್ದೇಶನ ನೀಡಿದೆ.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳ ಹುದ್ದೆಗಳು ಖಾಲಿ ಉಳಿಯದಂತೆ ನೋಡಿಕೊಳ್ಳಬೇಕು. ಅಲ್ಲದೆ, ಆಯೋಗದ ಪೂರ್ವಾನುಮತಿ ಇಲ್ಲದೆ ನಿಯೋಜಿತ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು ಎಂದೂ ಸೂಚಿಸಲಾಗಿದೆ.

2026ರ ಅಕ್ಟೋಬರ್ 1ರಂದು ಅಥವಾ ಅದಕ್ಕೂ ಮೊದಲು ಅರ್ಹತೆ ಪಡೆದಿದ್ದರೂ ಇನ್ನೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗದ ಎಲ್ಲ ಅರ್ಹ ನಾಗರಿಕರನ್ನು ನೋಂದಾಯಿಸಬೇಕು ಎಂದು ಚುನಾವಣಾ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಜೊತೆಗೆ, 2027ರ ಜನವರಿ 1ರಂದು ಅರ್ಹತೆ ಪಡೆಯುವ ಹೊಸ ಮತದಾರರ ಹೆಸರನ್ನೂ ಪಟ್ಟಿಗೆ ಸೇರಿಸಬೇಕು ಎಂದು ಆಯೋಗ ತಿಳಿಸಿದೆ.

ಇದಲ್ಲದೆ, 2027ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರಂದು ಅರ್ಹತೆ ಪಡೆಯಲಿರುವ ಭವಿಷ್ಯದ ಮತದಾರರ ಹೆಸರುಗಳನ್ನೂ ನಿಗದಿತ ಅರ್ಹತಾ ದಿನಾಂಕಗಳ ಆಧಾರದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಚುನಾವಣಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

West Asia Conflict ಎಫೆಕ್ಟ್: ರಫ್ತುದಾರರಿಗೆ ತೆರಿಗೆ ಬಿಸಿ; Diesel-ATF ರಫ್ತಿನ ಮೇಲಿನ Windfall ತೆರಿಗೆ ಹೆಚ್ಚಿಸಿದ ಕೇಂದ್ರ ಸರ್ಕಾರ, ಪೆಟ್ರೋಲ್‌ಗೆ ಶೂನ್ಯ ಸುಂಕ ಮುಂದುವರಿಕೆ..!

ಟ್ರಂಪ್, ಮಸ್ಕ್ ಬೆಂಬಲವಿದ್ದರೂ Jensen Huangಗೆ ಶಾಕ್; 'ಕಮ್‌ಬ್ಯಾಕ್' ಕನಸಿಗೆ ಬ್ರೇಕ್, ಕಂಪನಿ ನಿಯಮಾವಳಿಗಳೇ ಮುಖ್ಯ ಎಂದ Nvidia..!

APP ಆಧಾರಿತ ಕ್ಯಾಬ್‌ ದರ ದಂಧೆಗೆ ಬ್ರೇಕ್: ಮೀಟರ್ ಅಳವಡಿಕೆ ಕಡ್ಡಾಯಗೊಳಿಸಿದ ಸರ್ಕಾರ, ಇನ್ಮುಂದೆ ಮನಬಂದಂತೆ ದರ ವಸೂಲಿ ಮಾಡುವಂತಿಲ್ಲ..!

ದೇಶದ ಆರ್ಥಿಕತೆಗೆ ಬಲ: ನಿರುದ್ಯೋಗ ಪ್ರಮಾಣದಲ್ಲಿ ಇಳಿಕೆ; ಗ್ರಾಮೀಣ ಪ್ರದೇಶದಲ್ಲಿ ಶೇ.4.2, ನಗರದಲ್ಲಿ ಶೇ.6.7ಕ್ಕೆ ಕುಸಿತ..!

ಮೇಕೆದಾಟು ಯೋಜನೆ DPRಗೆ ಶೀಘ್ರ ಅನುಮೋದನೆ ನೀಡಿ: ಪ್ರಧಾನಿ ಮೋದಿಗೆ ದೇವೇಗೌಡ ಪತ್ರ