ಚಿಕ್ಕಮಗಳೂರು: ಹಾಸನದಲ್ಲಿ ಕಾಡಾನೆ ದಾಳಿ ಪ್ರಕರಣಗಳು ಬೆನ್ನಲ್ಲೇ ಇದೀಗ ಚಿಕ್ಕಮಗಳೂರಿನಲ್ಲೂ ಕಾಡಾನೆಯೊಂದು ದಾಳಿ ಮಾಡಿ ರೈತನೊಬ್ಬನ್ನು ಕೊಂದು ಹಾಕಿದೆ. ಚಿಕ್ಕಮಗಳೂರಿನ N.R.ಪುರ ತಾಲೂಕಿನ ಹೆನ್ನಂಗಿ ಗ್ರಾಮದಲ್ಲಿ ಕಾಡಾನೆ ದಾಳಿಗೆ ಓರ್ವ ರೈತ ಸಾವನ್ನಪ್ಪಿದ್ದಾರೆ.
ಕಾಡಾನೆ ದಾಳಿಗೆ 45 ವರ್ಷದ ರೈತ ಕೃಷ್ಣಮೂರ್ತಿ ಸಾವನ್ನಪ್ಪಿದ್ದಾರೆ. ತೋಟದಿಂದ ಮನೆಗೆ ಕೃಷ್ಣಮೂರ್ತಿ ಬರುತ್ತಿದ್ದ ವೇಳೆ ಏಕಾಏಕಿ ಎದುರಾದ ಕಾಡಾನೆ ದಾಳಿ ಮಾಡಿದೆ. ದಾಳಿಯಲ್ಲಿ ಕೃಷ್ಣಮೂರ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಇಂದಾವರ ಗ್ರಾಮದ ಮನೆಯೊಂದರ ಬಳಿ ಕಾಡಾನೆ ಕಾಣಿಸಿಕೊಂಡಿತ್ತು. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಚಿಕ್ಕಮಗಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಕಾಡಾನೆ ಸಂಚರಿಸುತ್ತಿದ್ದು, ಅದನ್ನು ಸೆರೆಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಒತ್ತಾಯಿಸಿದ್ದಾರೆ.