ಸಂಗ್ರಹ ಚಿತ್ರ 
ರಾಜ್ಯ

ಸಣ್ಣ ಈರುಳ್ಳಿ, ದೊಡ್ಡ ಬೆಲೆ: ಮಳೆಯ ಹೊಡೆತಕ್ಕೆ ಕೆ.ಜಿ.ಗೆ ₹200 ದಾಟಿದ ಸಾಂಬಾರ್ ಈರುಳ್ಳಿ ದರ, 18 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ..!

ಉತ್ಪಾದನಾ ಪ್ರದೇಶಗಳಿಂದ ಪೂರೈಕೆ ಕಡಿಮೆಯಾಗಿರುವುದರಿಂದ ಸಾಂಬಾರ್ ಈರುಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗಿದೆ. ನೆರೆಯ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿರುವುದು ಈರುಳ್ಳಿ ಕೊರತೆಗೆ ಪ್ರಮುಖ ಕಾರಣ.

ಬೆಂಗಳೂರು: ಅಕಾಲಿಕ ಮಳೆ ಮತ್ತು ಬೆಳೆ ನಷ್ಟದ ಪರಿಣಾಮವಾಗಿ ಕರ್ನಾಟಕದಾದ್ಯಂತ ಸಣ್ಣ ಈರುಳ್ಳಿ (ಸಾಂಬಾರ್ ಈರುಳ್ಳಿ) ಬೆಲೆ ಗಗನಕ್ಕೇರಿದ್ದು, ಗ್ರಾಹಕರು ಮತ್ತು ಹೋಟೆಲ್ ಉದ್ಯಮಿಗಳ ಜೇಬಿಗೆ ಕತ್ತರಿ ಬಿದ್ದಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಸಣ್ಣ ಈರುಳ್ಳಿ ದರ ಕೆ.ಜಿ.ಗೆ ₹200ರ ಗಡಿ ದಾಟಿದ್ದು, ಕಳೆದ 18 ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಸಾಮಾನ್ಯ ಈರುಳ್ಳಿಯ ಬೆಲೆ ಇದಕ್ಕೆ ಹೋಲಿಸಿದರೆ ಕೆ.ಜಿಗೆ ₹65ರಿಂದ ₹70ರಷ್ಟಿದೆ. ಸಗಟು ಮಾರುಕಟ್ಟೆಯಲ್ಲಿ ಸಾಮಾನ್ಯ ಈರುಳ್ಳಿ ಕೆ.ಜಿಗೆ ₹40ರಿಂದ ₹60ರ ದರದಲ್ಲಿ ಮಾರಾಟವಾಗುತ್ತಿದೆ.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಯ ಈರುಳ್ಳಿ ವ್ಯಾಪಾರಿ ರವಿ ಬಾಲಕೃಷ್ಣ ಅವರು ಮಾತನಾಡಿ, ಉತ್ಪಾದನಾ ಪ್ರದೇಶಗಳಿಂದ ಪೂರೈಕೆ ಕಡಿಮೆಯಾಗಿರುವುದರಿಂದ ಸಾಂಬಾರ್ ಈರುಳ್ಳಿಯ ಬೆಲೆ ನಿರಂತರವಾಗಿ ಹೆಚ್ಚಾಗಿದೆ. ನೆರೆಯ ತಮಿಳುನಾಡಿನಲ್ಲಿ ಸುರಿದ ಭಾರಿ ಮಳೆಯಿಂದ ಬೆಳೆ ಸಂಪೂರ್ಣ ಹಾನಿಯಾಗಿರುವುದು ಈರುಳ್ಳಿ ಕೊರತೆಗೆ ಪ್ರಮುಖ ಕಾರಣ ಎಂದು ಹೇಳಿದ್ದಾರೆ.

ಕಳೆದ ಸುಮಾರು 18 ವರ್ಷಗಳಲ್ಲೇ ಸಣ್ಣ ಈರುಳ್ಳಿಗೆ ದಾಖಲಾಗಿರುವ ಅತ್ಯಧಿಕ ಬೆಲೆ ಇದಾಗಿದೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಬೆಂಗಳೂರಿನ ಮಾರುಕಟ್ಟೆಗೆ ಪ್ರತಿದಿನ ಸುಮಾರು 1,000 ಟನ್ ಸಾಮಾನ್ಯ ಈರುಳ್ಳಿ ಪೂರೈಕೆಯಾಗುತ್ತದೆ. ಆದರೆ ಸಾಂಬಾರ್ ಈರುಳ್ಳಿ ಪೂರೈಕೆ ಕೆಲವೇ ಟನ್‌ಗಳಿಗೆ ಸೀಮಿತವಾಗಿದೆ. ನಗರದ ಬಹುತೇಕ ಸಣ್ಣ ಈರುಳ್ಳಿ ವ್ಯಾಪಾರ ವಹಿವಾಟು ಸಿಟಿ ಮಾರ್ಕೆಟ್‌ನಲ್ಲಿ ನಡೆಯುತ್ತದೆ. ತಮಿಳುನಾಡಿನ ನಾಮಕ್ಕಲ್ ಮತ್ತು ಪೆರಂಬಲೂರು ಜಿಲ್ಲೆಗಳ ರೈತರಿಂದ ಹೊಸೂರು ಮಾರ್ಗವಾಗಿ ಬೆಂಗಳೂರಿಗೆ ಈರುಳ್ಳಿ ಬರುತ್ತದೆ.

ಮುಂದಿನ ನಾಲ್ಕು ವಾರಗಳಲ್ಲಿ ಹೊಸ ಬೆಳೆ ಮಾರುಕಟ್ಟೆಗೆ ಬರುವವರೆಗೂ ಬೆಲೆ ಹೆಚ್ಚಾಗಿಯೇ ಮುಂದುವರಿಯುವ ಸಾಧ್ಯತೆಯಿದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.

ಡಿಸೆಂಬರ್ ಅಂತ್ಯ ಅಥವಾ ಜನವರಿ ಆರಂಭದಲ್ಲಿ ಹೊಸ ದಾಸ್ತಾನು ಬಂದ ಬಳಿಕ, ಜನವರಿ ನಂತರ ಬೆಳೆ ಇಳುವರಿ ಸಹಜವಾಗಿದ್ದರೆ ಪ್ರತಿ ಕೆ.ಜಿಗೆ ₹100ರಿಂದ ₹130ರವರೆಗೆ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸಾಂಬಾರ್ ಈರುಳ್ಳಿ ಸೀಮಿತ ಪ್ರಮಾಣದಲ್ಲಿ ಉತ್ಪಾದನೆಯಾಗುವ ವಿಶೇಷ ಬೆಳೆಯಾಗಿದ್ದು, ಮುಖ್ಯವಾಗಿ ಬೆಂಗಳೂರು ಮತ್ತು ಮೈಸೂರು ಮಾರುಕಟ್ಟೆಗಳಲ್ಲಿ ಬೇಡಿಕೆ ಹೊಂದಿದೆ. ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಹಲವು ಅಡುಗೆಗಳಲ್ಲಿ ಇದನ್ನು ಬಳಸಲಾಗುತ್ತದೆ. ವಿಶೇಷವಾಗಿ ಚೆಟ್ಟಿನಾಡ್ ಶೈಲಿಯ ಖಾದ್ಯಗಳು ಹಾಗೂ ಇಡ್ಲಿ ಜೊತೆಗೆ ಬಡಿಸುವ ಸಾಂಬಾರ್ ತಯಾರಿಕೆಯಲ್ಲಿ ಸಣ್ಣ ಈರುಳ್ಳಿ ಪ್ರಮುಖ ಪದಾರ್ಥವಾಗಿದೆ.

ಸಣ್ಣ ಈರುಳ್ಳಿಯನ್ನು ಬಳಸುವ ದಕ್ಷಿಣ ಭಾರತೀಯ ಖಾದ್ಯಗಳ ಹೋಟೆಲ್‌ಗಳು ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿವೆ. ಒಂದು ಕೆ.ಜಿ. ಬಳಸುತ್ತಿದ್ದ ಕಡೆ ಈಗ ಕೇವಲ 100ರಿಂದ 250 ಗ್ರಾಂನಷ್ಟು ಮಾತ್ರ ಬಳಸುತ್ತಿದ್ದು, ಉಳಿದ ಪ್ರಮಾಣಕ್ಕೆ ಸಾಮಾನ್ಯ ಈರುಳ್ಳಿಯನ್ನು ಪರ್ಯಾಯವಾಗಿ ಬಳಸುತ್ತಿವೆ.

ರೆಸ್ಟೋರೆಂಟ್ ಮಾಲೀಕರ ಸಂಘದ ಸದಸ್ಯ ಸುಬ್ರಮಣ್ಯ ಹೊಳ್ಳ ಮಾತನಾಡಿ, ಅಡುಗೆಗೆ ಬಳಸುವ ಅಗತ್ಯ ವಸ್ತುಗಳ ಬೆಲೆ ಏರಿಕೆಯಾದಾಗ ಹೋಟೆಲ್‌ಗಳಲ್ಲಿಯೂ ಆಹಾರ ಪದಾರ್ಥಗಳ ದರವನ್ನು ಹೆಚ್ಚಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತ್ಯೇಕತಾವಾದಿ ಪನ್ನುನ್ ಹತ್ಯೆ ಸಂಚು ವಿಫಲ: ಭಾರತೀಯ ಮೂಲದ ನಿಖಿಲ್ ಗುಪ್ತಾಗೆ 19 ವರ್ಷ ಜೈಲು ಶಿಕ್ಷೆ

ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು: 37 ಜಿಲ್ಲೆಗಳ ಪೈಕಿ 33ರಲ್ಲಿ ಮುನ್ನಡೆ; BJPಗೆ ತೀವ್ರ ಮುಖಭಂಗ!

ಬಾಲಿವುಡ್ ನಟ ಸನ್ನಿ ಡಿಯೋಲ್ ಪುತ್ರ ರಾಜ್‌ವೀರ್ ಜತೆ ಸಚಿನ್ ಪುತ್ರಿ ಸಾರಾ ತೆಂಡೂಲ್ಕರ್ ಮದುವೆ?

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್: ಕೃಪಾ ಆಳ್ವಾ, ರಾಕೇಶ್ ಶೆಟ್ಟಿಗೆ ಬಿಗ್ ಶಾಕ್; ಜಾಮೀನು ಅರ್ಜಿ ವಜಾ; ಯಾವುದೇ ಕ್ಷಣದಲ್ಲಿ ಬಂಧನ ಸಾಧ್ಯತೆ!

ತಾಯಿ ನಿಧನ: ದುಃಖದಲ್ಲೂ ಕರ್ತವ್ಯ ಪೂರ್ಣಗೊಳಿಸಿದ CM ಯೋಗಿ ಆದಿತ್ಯನಾಥ್; ಪ್ರಧಾನಿ ಮೋದಿ ಸಾಂತ್ವನ!