ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಡಿಸೆಂಬರ್ 4ರಿಂದ 13ರವರೆಗೆ 'ಬೆಂಗಳೂರು ಜಾತ್ರೆ': 10 ದಿನ, 200ಕ್ಕೂ ಹೆಚ್ಚು ಕಾರ್ಯಕ್ರಮ, ₹20 ಕೋಟಿ ವೆಚ್ಚ!

ಬೆಂಗಳೂರು ಜಾತ್ರೆ ಕೇವಲ ಸರ್ಕಾರ ಆಯೋಜಿಸುವ ಕಾರ್ಯಕ್ರಮವಲ್ಲ. ಇದು ನಗರದ ಜನರಿಗಾಗಿ, ಜನರೇ ಪಾಲ್ಗೊಂಡು ಸಂಭ್ರಮಿಸುವ ಉತ್ಸವವಾಗಬೇಕು.

ಬೆಂಗಳೂರು ಜಾತ್ರೆ (ಸಾಂದರ್ಭಿಕ ಚಿತ್ರ)
Srinivasa Murthy VN
Updated On : 23 Nov 2026, 9:09 pm

ಬೆಂಗಳೂರು: ಉದ್ಯಾನನಗರಿ ಬೆಂಗಳೂರಿನ ಸಾಂಸ್ಕೃತಿಕ ವೈವಿಧ್ಯತೆ, ಪರಂಪರೆ, ಕಲೆ ಮತ್ತು ಜೀವನಶೈಲಿಯನ್ನು ಪರಿಚಯಿಸುವ ಉದ್ದೇಶದಿಂದ ಡಿಸೆಂಬರ್ 4ರಿಂದ 13ರವರೆಗೆ ಹತ್ತು ದಿನಗಳ ಕಾಲ 'ಬೆಂಗಳೂರು ಜಾತ್ರೆ' ಆಯೋಜಿಸಲಾಗುತ್ತಿದೆ.

ಈ ಕುರಿತು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದು, ನಗರದ ವಿವಿಧೆಡೆ 200ಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆಯಲಿದ್ದು, ಸುಮಾರು 20 ಕೋಟಿ ರೂ. ವೆಚ್ಚವಾಗುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಜಾತ್ರೆ ಕೇವಲ ಸರ್ಕಾರ ಆಯೋಜಿಸುವ ಕಾರ್ಯಕ್ರಮವಲ್ಲ. ಇದು ನಗರದ ಜನರಿಗಾಗಿ, ಜನರೇ ಪಾಲ್ಗೊಂಡು ಸಂಭ್ರಮಿಸುವ ಉತ್ಸವವಾಗಬೇಕು. ಹೀಗಾಗಿ ಒಂದೇ ಸ್ಥಳಕ್ಕೆ ಸೀಮಿತಗೊಳಿಸದೆ ನಗರದ ವಿವಿಧ ಬಡಾವಣೆಗಳು, ಉದ್ಯಾನಗಳು, ಬೀದಿಗಳು, ಕಾಲೇಜು ಆವರಣಗಳು, ಸಭಾಂಗಣಗಳು, ಮಾಲ್‌ಗಳು ಮತ್ತು ತಂತ್ರಜ್ಞಾನ ಪಾರ್ಕ್‌ಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

Advertisement

Advertisement

ಬೆಂಗಳೂರಿನಲ್ಲಿ ಪ್ರತಿನಿತ್ಯ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಚರ್ಚೆಯಾಗುತ್ತಿದೆ. ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವೂ ನಡೆಯುತ್ತಿದೆ. ಆದರೆ ಇಷ್ಟೊಂದು ದೊಡ್ಡ ನಗರ ಮತ್ತು ಜನಸಂಖ್ಯೆ ಹೊಂದಿರುವ ಬೆಂಗಳೂರಿಗೆ ತನ್ನದೇ ಆದ ವಾರ್ಷಿಕ ಸಾಂಸ್ಕೃತಿಕ ಉತ್ಸವ ಇರಬೇಕು. ನಗರದ ಜೀವನಮಟ್ಟವನ್ನು ನಿರ್ಧರಿಸುವುದು ಮೂಲಸೌಕರ್ಯ ಮಾತ್ರವಲ್ಲ. ಉದ್ಯೋಗ, ಚಟುವಟಿಕೆಗಳು, ಕಲೆ ಮತ್ತು ಸಂಸ್ಕೃತಿಯೂ ಮುಖ್ಯ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಪರಿಕಲ್ಪನೆಯಂತೆ ಈ ಉತ್ಸವವನ್ನು ಈ ವರ್ಷ ಆಯೋಜಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

Also Read

ಆರೋಗ್ಯ ಇಲಾಖೆಯಿಂದ ವಿಶೇಷ ತಪಾಸಣಾ ಅಭಿಯಾನ; 112 ಪ್ಯಾಕೇಜ್ಡ್ ಡ್ರಿಂಕಿಂಗ್ ವಾಟರ್ ಘಟಕಗಳ ಪರಿಶೀಲನೆ

ಬ್ರಿಗೇಡ್ ರಸ್ತೆ, ಎಂಜಿ ರಸ್ತೆಯಲ್ಲಿ ಉದ್ಘಾಟನಾ ಸಂಭ್ರಮ

ಡಿಸೆಂಬರ್ 4ರಂದು ಸಂಜೆ 4 ಗಂಟೆಯ ನಂತರ ಬೆಂಗಳೂರು ಜಾತ್ರೆಯ ಉದ್ಘಾಟನಾ ಕಾರ್ಯಕ್ರಮ ಆರಂಭವಾಗಲಿದೆ. ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸುವ ಸುಮಾರು 500 ಜನಪದ ಕಲಾವಿದರು, 20 ಕಲಾತಂಡಗಳ ಮೂಲಕ ರಾಜ್ಯದ ಜಾನಪದ ಸಂಸ್ಕೃತಿಯನ್ನು ಪ್ರದರ್ಶಿಸಲಿದ್ದಾರೆ.

ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಯಲ್ಲಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನಡೆಯಲಿವೆ. ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಸಂಜೆ 6 ಗಂಟೆಯಿಂದ ಕರ್ನಾಟಕದ ಪ್ರಮುಖ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಕಾಮರಾಜ ರಸ್ತೆ ಸಮೀಪ ಎಂಜಿ ರಸ್ತೆ ಮತ್ತು ಕಬ್ಬನ್ ರಸ್ತೆಯನ್ನು ಸಂಪರ್ಕಿಸುವ ವಾಹನ ದಟ್ಟಣೆ ಕಡಿಮೆ ಇರುವ ರಸ್ತೆಯಲ್ಲಿ ಸಂಜೆ 7 ಗಂಟೆ ಸುಮಾರಿಗೆ ಔಪಚಾರಿಕ ಉದ್ಘಾಟನಾ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಿಸಲಾಗುತ್ತದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಫ್ರೀಡಂ ಪಾರ್ಕ್‌ನಲ್ಲಿ ಆಹಾರ, ಮಕ್ಕಳ ಉತ್ಸವ

ಡಿಸೆಂಬರ್ 5 ಮತ್ತು 6ರಂದು ಫ್ರೀಡಂ ಪಾರ್ಕ್‌ನಲ್ಲಿ ಪ್ರಮುಖ ಸಾಂಸ್ಕೃತಿಕ ಕಾರ್ಯಕ್ರಮಗಳ ಜತೆಗೆ ಮಕ್ಕಳ ಉತ್ಸವ ಮತ್ತು ಆಹಾರ ಮೇಳ ಆಯೋಜಿಸಲಾಗುತ್ತದೆ. ನಗರದ ಐದು ಪಾಲಿಕೆಗಳೂ ತಮ್ಮ ವ್ಯಾಪ್ತಿಯಲ್ಲಿ ಸೂಕ್ತ ಸ್ಥಳಗಳನ್ನು ಗುರುತಿಸಿ ಮೂರರಿಂದ ನಾಲ್ಕು ದಿನಗಳ ಕಾಲ ಸ್ಥಳೀಯ ಕಾರ್ಯಕ್ರಮಗಳನ್ನು ನಡೆಸಲಿವೆ.

ಇದರಿಂದ ಜನರು ನಗರದ ಕೇಂದ್ರ ಭಾಗಕ್ಕೆ ಬರಬೇಕಾದ ಅನಿವಾರ್ಯತೆ ಇರುವುದಿಲ್ಲ. ಶಾಸ್ತ್ರೀಯ, ಜಾನಪದ, ಸಮಕಾಲೀನ ಮತ್ತು ಫ್ಯೂಷನ್ ನೃತ್ಯಗಳು, ವಿವಿಧ ಪ್ರಕಾರದ ಸಂಗೀತ, ಸಾಹಿತ್ಯ ಹಾಗೂ ಇತರ ಕಲಾ ಪ್ರಕಾರಗಳಿಗೆ ವೇದಿಕೆ ಕಲ್ಪಿಸಲಾಗುತ್ತದೆ. ವಿವಿಧ ಹಿನ್ನೆಲೆಯ ಕಲಾವಿದರಿಗೆ ತಮ್ಮ ಪ್ರತಿಭೆ ಪ್ರದರ್ಶಿಸಲು ಅವಕಾಶ ನೀಡಲಾಗುತ್ತದೆ.

ಡಿ.13ರಂದು ಸಮಾರೋಪ: ಸಂಜಿತ್ ಹೆಗ್ಡೆ, ಸುನಿಧಿ ಚೌಹಾಣ್ ಸಂಗೀತ ರಸದೌತಣ

ಡಿಸೆಂಬರ್ 13ರಂದು ಮಾಣೆಕ್‌ಷಾ ಪರೇಡ್ ಮೈದಾನದಲ್ಲಿ ಬೆಂಗಳೂರು ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಂದರ್ಭದಲ್ಲಿ ಕನ್ನಡದ ಜನಪ್ರಿಯ ಗಾಯಕ ಸಂಜಿತ್ ಹೆಗ್ಡೆ ಮತ್ತು ರಾಷ್ಟ್ರಮಟ್ಟದ ಖ್ಯಾತ ಗಾಯಕಿ ಸುನಿಧಿ ಚೌಹಾಣ್ ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಡಿ.11, 12 ಮತ್ತು 13ರಂದು ಪುಸ್ತಕ ಮೇಳವನ್ನೂ ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಪುಸ್ತಕ ಮೇಳದ ಸಂಪ್ರದಾಯವನ್ನು ಮತ್ತೆ ಮುಂದುವರಿಸುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಪುಸ್ತಕ ಮೇಳದ ಸ್ಥಳವನ್ನು ಅಂತಿಮಗೊಳಿಸಲಾಗುತ್ತಿದೆ.

ಕೆಂಪೇಗೌಡರ ಬೆಂಗಳೂರು ಅನಾವರಣ

ಬೆಂಗಳೂರು ಸಂಸ್ಥಾಪಕ ನಾಡಪ್ರಭು ಕೆಂಪೇಗೌಡರು ರೂಪಿಸಿದ ಮೂಲ ಬೆಂಗಳೂರಿನ ಮಾದರಿಯನ್ನು ಫೋರ್ಟ್ ಹೈಸ್ಕೂಲ್ ಮೈದಾನದಲ್ಲಿ ಮರುಸೃಷ್ಟಿಸಲಾಗುತ್ತದೆ. ಇಲ್ಲಿ ಹಳೆಯ ಕಾಲದ ಸಾಂಪ್ರದಾಯಿಕ ವೃತ್ತಿಗಳು ಹಾಗೂ ಇಂದಿನ ಗಿಗ್ ಕಾರ್ಮಿಕರು, ಮುಂಚೂಣಿ ಕಾರ್ಯಕರ್ತರು ಮತ್ತು ಸೇವಾ ವಲಯದ ಉದ್ಯೋಗಿಗಳ ಕೊಡುಗೆಯನ್ನು ಪರಿಚಯಿಸಲಾಗುತ್ತದೆ.

'ಬೆಂಗಳೂರು ಹಿಸ್ಟರಿ ಇನ್‌ಸ್ಟಲೇಷನ್' ಹೆಸರಿನ ಈ ವಿಶೇಷ ಪ್ರದರ್ಶನದಲ್ಲಿ ನೃತ್ಯ ಮತ್ತು ನಾಟಕಗಳ ಮೂಲಕ ವಿವಿಧ ವೃತ್ತಿಗಳ ಮಹತ್ವವನ್ನು ತೋರಿಸಲಾಗುತ್ತದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಒಂಬತ್ತು ದಿನಗಳ ಕಾಲ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಲಿದೆ. ವಸ್ತುಸಂಗ್ರಹಾಲಯಗಳು, ಸಾಂಸ್ಕೃತಿಕ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಖಾಸಗಿ ಸಂಘಟನೆಗಳೂ ತಮ್ಮದೇ ಕಾರ್ಯಕ್ರಮಗಳನ್ನು ನಡೆಸಲಿವೆ.

ಬೆಂಗಳೂರು ಬಹುಸಂಸ್ಕೃತಿಯ ನಗರವಾಗಿರುವುದರಿಂದ ಕನ್ನಡದ ಜತೆಗೆ ತೆಲುಗು, ತಮಿಳು ಸೇರಿದಂತೆ ವಿವಿಧ ಭಾಷಿಕ ಮತ್ತು ಸಮುದಾಯಗಳ ಸಂಘಟನೆಗಳಿಗೂ ತಮ್ಮ ಸಂಸ್ಕೃತಿ ಪ್ರದರ್ಶಿಸಲು ಆಹ್ವಾನ ನೀಡಲಾಗಿದೆ.

Also Read

ಆಶಾ ಕಾರ್ಯಕರ್ತೆಯರ ಅಹೋರಾತ್ರಿ ಧರಣಿ 7ನೇ ದಿನಕ್ಕೆ: 17 ಮಂದಿ ಅಸ್ವಸ್ಥ; ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ!

ಯುವಜನರಿಗೆ 'ಬೆಂಗಳೂರು ಟ್ರೆಷರ್ ಹಂಟ್'

ನಗರದ ಇತಿಹಾಸವನ್ನು ಯುವಜನರಿಗೆ ಪರಿಚಯಿಸಲು 'ಬೆಂಗಳೂರು ಟ್ರೆಷರ್ ಹಂಟ್' ಆಯೋಜಿಸುವ ಯೋಜನೆಯೂ ಇದೆ. ಇದರಲ್ಲಿ ನಗರದ ಐತಿಹಾಸಿಕ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡುವ ಅವಕಾಶದ ಜತೆಗೆ ಆನ್‌ಲೈನ್‌ನಲ್ಲಿಯೂ ಭಾಗವಹಿಸಬಹುದು.

ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಐದು ನಗರ ಪಾಲಿಕೆಗಳು, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ), ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಉತ್ಸವ ಆಯೋಜಿಸುತ್ತಿವೆ. ಬೆಸ್ಕಾಂ, ಜಲಮಂಡಳಿ, ಬೆಂಗಳೂರು ಮೆಟ್ರೋ, ಶಿಕ್ಷಣ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಇತರ ಸಂಸ್ಥೆಗಳು ಸಹಕಾರ ನೀಡಲಿವೆ.

ಬೆಂಗಳೂರು ಸಾಹಿತ್ಯ ಉತ್ಸವವನ್ನೂ ಬೆಂಗಳೂರು ಜಾತ್ರೆಯೊಂದಿಗೆ ಸಂಯೋಜಿಸಲಾಗುತ್ತಿದೆ. ಹಳೆಯ ದೇವಸ್ಥಾನಗಳು, ಚರ್ಚ್‌ಗಳು, ಮಸೀದಿಗಳು ಮತ್ತು ಸಾಂಪ್ರದಾಯಿಕ ಬಡಾವಣೆಗಳನ್ನೂ ಉತ್ಸವದಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಯೋಜಿಸಿದೆ.

ಸರ್ಕಾರಿ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ

ಸರ್ಕಾರದ ವತಿಯಿಂದ ನಡೆಯುವ ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಇರಲಿದೆ. ಖಾಸಗಿ ಸಂಸ್ಥೆಗಳು ಆಯೋಜಿಸುವ ಕಾರ್ಯಕ್ರಮಗಳಿಗೆ ಪ್ರವೇಶ ಶುಲ್ಕ ವಿಧಿಸುವುದೇ ಅಥವಾ ಬೇಡವೇ ಎಂಬುದನ್ನು ಆಯಾ ಸಂಸ್ಥೆಗಳೇ ನಿರ್ಧರಿಸಲಿವೆ.

ಉತ್ಸವಕ್ಕೆ ಸುಮಾರು 20 ಕೋಟಿ ರೂ. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಇದರಲ್ಲಿ ಹೆಚ್ಚಿನ ಮೊತ್ತವನ್ನು ಕಲಾವಿದರ ಸಂಭಾವನೆಗೆ, ಅದರಲ್ಲೂ ಪ್ರಮುಖ ಕಲಾವಿದರ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ ಎಂದು ಸಚಿವರು ವಿವರಿಸಿದರು.

ಕಾರ್ಯಕ್ರಮಗಳನ್ನು ವಿವಿಧ ಸ್ಥಳಗಳಲ್ಲಿ ಹಂಚಿಕೆ ಮಾಡಿರುವುದರಿಂದ ಒಂದೇ ಕಡೆ ಜನಸಂದಣಿ ಹೆಚ್ಚಾಗುವುದನ್ನು ತಪ್ಪಿಸಬಹುದು. ಉದ್ಘಾಟನಾ ದಿನ ಬ್ರಿಗೇಡ್ ರಸ್ತೆ ಮತ್ತು ಎಂಜಿ ರಸ್ತೆಯಲ್ಲಿ ಮೆರವಣಿಗೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸುಮಾರು ಎರಡು ಗಂಟೆಗಳ ಕಾಲ ಸಂಚಾರ ವ್ಯತ್ಯಯವಾಗಬಹುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಂಚಾರ ಮಾರ್ಗ ಬದಲಾವಣೆಗೆ ಪೊಲೀಸರು ಯೋಜನೆ ರೂಪಿಸಲಿದ್ದಾರೆ ಎಂದರು.

Also Read

ಶೂ, ಸಾಕ್ಸ್ ವಿತರಣೆ ವಿಳಂಬ: ಮನವಿ ಸಲ್ಲಿಸಲು ಬಂದವರ ಮೇಲೆ ಸಿಡಿಮಿಡಿ; ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿರುದ್ಧ ಆಕ್ರೋಶ, ಕ್ಷಮೆಯಾಚನೆಗೆ ಆಗ್ರಹ..!

ಡಿಸೆಂಬರ್‌ನಲ್ಲಿ ಶಾಲಾ ರಜೆ, ಹಬ್ಬದ ಸಂಭ್ರಮ ಹಾಗೂ ಜಿಬಿಎ ಚುನಾವಣೆಯ ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಆಗಸ್ಟ್‌ನಲ್ಲಿಯೇ ಉತ್ಸವದ ದಿನಾಂಕಗಳನ್ನು ಅಂತಿಮಗೊಳಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.

ಬೆಂಗಳೂರು ಜಾತ್ರೆಯ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿ ಹಾಗೂ ವೇಳಾಪಟ್ಟಿಯನ್ನು BengaluruJatre.in ವೆಬ್‌ಸೈಟ್‌ನಲ್ಲಿ ಪಡೆಯಬಹುದು. ಹೊಸ ಕಾರ್ಯಕ್ರಮಗಳು ಸೇರ್ಪಡೆಯಾದಂತೆ ವೆಬ್‌ಸೈಟ್‌ನಲ್ಲಿ ಮಾಹಿತಿ ನವೀಕರಿಸಲಾಗುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments